bandidevara karaga 
ಬೆಂಗಳೂರು ಗ್ರಾಮಾಂತರ

ಕಾರನಾಳ ಗ್ರಾಮದಲ್ಲಿ ಬಂಡಿದೇವರ ಕರಗ

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಕಾರನಾಳ ಗ್ರಾಮದಲ್ಲಿ ಶ್ರೀ ಬಂಡಿದೇವರ ಕರಗ ಮಹೋತ್ಸವ, ಮಕ್ಕಳ ಕರ್ಣಭೂಷಣ ಹಾಗೂ ಹೂ ಮುಡಿಸುವ ಕಾರ್ಯಕ್ರಮ ನೆರವೇರಿತು.
ಹಸಿರೆಲೆ, ತೆಂಗಿನಗರಿ ಹಾಗೂ ಹೊಂಬಾಳೆಯಿಂದ ಅಲಂಕರಿಸಲಾದ ಎತ್ತಿನಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮದೇವತೆಯ ಮೆರವಣಿಗೆ ನಡೆಯಿತು. ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾಗಿರುವ ಈ ಮಹೋತ್ಸವದಲ್ಲಿ ಮಹಿಳೆಯರು, ಯುವಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಬಂಡಿದೇವರ ಕರಗ ಮಹೋತ್ಸವ ರೈತ ಸಮುದಾಯದ ನಂಬಿಕೆ, ಭಕ್ತಿ ಮತ್ತು ಏಕತೆಯ ಸಂಕೇತವಾಗಿದೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುದ್ದಣ್ಣ, ಮಂಜುನಾಥ್, ಮಾಜಿ ಸದಸ್ಯ ನಂಜೇಗೌಡ, ಮಧು, ಮುಖಂಡರಾದ ಗೌರೀಶ್, ಮುರುಳಿ, ಉದಯ ಆರಾಧ್ಯ ಮತ್ತಿತರರು ಪಾಲ್ಗೊಂಡಿದ್ದರು.