Awareness traffic vehicle 
ಬೆಂಗಳೂರು ಗ್ರಾಮಾಂತರ

ಜಿಲ್ಲಾದ್ಯಂತ ಪಂಚ ಗ್ಯಾರಂಟಿಗಳ ಪ್ರಚಾರ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಚಾರ ಕಾರ್ಯ ನಡೆಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಜಾಗೃತಿ ಸಂಚಾರ ವಾಹನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ
ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳ ಪ್ರಯೋಜನಗಳ ಬಗ್ಗೆ ಪ್ರಚಾರ ವಾಹನವು ಸಂಚರಿಸಲಿದೆ ಎಂದು ಮಾಹಿತಿ ನೀಡಿದರು. ಪ್ರಚಾರ ವಾಹನದಲ್ಲಿ ಎಲ್ಇಡಿ ಪರದೆ ಪ್ರದರ್ಶನ ಇರಲಿದೆ ಇದರಲ್ಲಿ ಈ ಐದು ಪಂಚ ಗ್ಯಾರಂಟಿಗಳ ಪ್ರಯೋಜನ, ಅವುಗಳನ್ನು ಪಡೆಯುವುದು ಹೇಗೆ ಮತ್ತಿತರ ಮಾಹಿತಿ ಲಭ್ಯವಾಗಲಿದೆ ಹಾಗೂ ಕಲಾ ತಂಡಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ ಎಂದು ವಿವರಿಸಿದರು.
ಜಿಲ್ಲಾದ್ಯಂತ ಸಂಚಾರ:
ಜಿಲ್ಲೆಯಾದ್ಯಂತ ಗ್ರಾಮ, ಪಟ್ಟಣಗಳಲ್ಲಿ ಜಾಗೃತಿ ವಾಹನ ಸಂಚರಿಸಲಿದ್ದು ಪಂಚ ಗ್ಯಾರಂಟಿ ಯೋಜನೆಗಳು ತಲುಪದ ಅರ್ಹ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಲಿದ್ದಾರೆ ಹಾಗೆಯೇ ನಗರ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಅಲ್ಲಿನ ಅಧಿಕಾರಿಗಳು ಪ್ರಚಾರ ವಾಹನದ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂದು ಡಿಸಿ ತಿಳಿಸಿದರು.
ಬಾಕಿ ಲಾನುಭವಿಗಳ ಪತ್ತೆ:
ಸಾರ್ವಜನಿಕರು ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಈ ಸಂಚಾರ ವಾಹನ ನೆರವಾಗಲಿದೆ, ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಅರ್ಹ ಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದ್ದು ಯಶಸ್ಸನ್ನು ಕಂಡಿದೆ. ಕೆಲವು ಭಾಗಗಳಲ್ಲಿ ಬಾಕಿ ಉಳಿದಿರುವ ಲಾನುಭವಿಗಳಿಗೆ ಮಾಹಿತಿ ನೀಡಿ ಅವರಿಗೆ ಯೋಜನೆಯ ಪ್ರಯೋಜನ ದೊರಕಿಸಿಕೊಡುವುದು ಈ ಪ್ರಚಾರ ವಾಹನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು. ಸಂಚಾರ ವಾಹನದಲ್ಲಿ ಜಿಲ್ಲಾಡಳಿತ ಸಿಬ್ಬಂದಿ ಇರಲಿದ್ದು ಅವರ ಬಳಿಯೂ ಮಾಹಿತಿ ಪಡೆಯಬಹುದು. ಪಂಚಗ್ಯಾರಂಟಿಗಳ ಯೋಜನೆಗೆ ಹೇಗೆ ನೋಂದಾಯಿಸಿಕೊಳ್ಳಬೇಕು ಇದಕ್ಕೆ ಬೇಕಾದ ದಾಖಲೆಗಳೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.