Awareness Rally 
ಬೆಂಗಳೂರು ಗ್ರಾಮಾಂತರ

ಎಸ್‌ಐಆರ್ ಯಶಸ್ವಿಗೆ ಜನರು ಸಹಕರಿಸಬೇಕು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಆರಂಭವಾಗಿದ್ದು ಸಾರ್ವಜನಿಕರು ಸಿಬ್ಬಂದಿ ಜತೆ ಸಹಕರಿಸುವ ಮೂಲಕ ಈ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಮನವಿ ಮಾಡಿದರು.
ದೇವನಹಳ್ಳಿ ಜಿಲ್ಲಾಡಳಿತ ಭವನ ಆವರಣದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.ಭಾರತ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಮನೆ ಮನೆಗೆ ಬಿಎಲ್‌ಒಗಳು ಭೇಟಿ:
ಜಿಲ್ಲೆಯ 9,12,913 ಮತದಾರರನ್ನು ಈ ವಿಶೇಷ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲಿ 147 ಮತಗಟ್ಟೆ ಮಟ್ಟದ ಅಧಿಕಾರಿಗಳು ತೊಡಗಿಸಿಕೊಳ್ಳಲಿದ್ದಾರೆ ಜೂ. 30 ರಿಂದ ಜು.29 ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಓ) ಮನೆಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಮನೆಗೆ ಭೇಟಿ ನೀಡುವ ಅಧಿಕಾರಿಗಳು ನಿಗದಿತ ನಮೂನೆಗಳನ್ನು ನೀಡಿ ಭರ್ತಿ ಮಾಡಿಕೊಳ್ಳುತ್ತಾರೆ. ಹೊಸ ಹೆಸರು ಸೇರ್ಪಡೆ, ನಿಧನರಾದವರು, ವಲಸಿಗರ ಹೆಸರನ್ನು ಮತಪಟ್ಟಿಯಿಂದ ಪರಿಷ್ಕರಣೆ ಮಾಡಲಾಗುತ್ತದೆ. ಜತೆಗೆ ಎರಡೆರಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯುತ್ತದೆ. ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು. ಮನೆಗೆ ಬರುವ ಬಿಎಲ್ಒಗಳು ಎರಡು ಅರ್ಜಿಗಳನ್ನು (ಎನ್ಯುಮರೇಶನ ಫಾರ್ಮ್) ನೀಡುತ್ತಾರೆ. ಮತದಾರರು ಎರಡನ್ನು ಭರ್ತಿ ಮಾಡಿ ಸಹಿ ಮಾಡಬೇಕು. ಒಂದನ್ನು ಸ್ವೀಕೃತಿಯಾಗಿ ಮತದಾರರಿಗೆ ಮರಳಿಸಿದರೆ, ಇನ್ನೊಂದು ಪ್ರತಿಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಸಿಇಒ ಬಿತ್ತಿಪತ್ರ ಬಿಡುಗಡೆ:
ಜಿಪಂ ಸಿಇಒ ಡಾ.ವಾಸಂತಿ ಅಮರ್ ಎಸ್‌ಐಆರ್ ಜಾಗೃತಿ ಜಾಥಾದ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಿ ಜು.29 ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸಿ ಸಂಗ್ರಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಆ.5 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಆಗಲಿದೆ. ಆಕ್ಷೇಪಣೆ ಸಲ್ಲಿಸಲು ಆ.5 ರಿಂದ ಸೆ.4 ವರೆಗೆ ಅವಕಾಶ. ಸೆ.7 ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಮನೆಮನೆಗೆ ಭೇಟಿ ನೀಡುವ ಅಧಿಕಾರಿಗಳಿಂದ ಎರಡು ನಿಗದಿತ ಅರ್ಜಿ ಫಾರಂ ಪಡೆದು ಅದನ್ನು ತುಂಬಿಸಿ ಈ ಪೈಕಿ ಒಂದನ್ನು ನೀವು ದಾಖಲಾಗಿಟ್ಟುಕೊಂಡು. ಇನ್ನೊಂದನ್ನು ಅಧಿಕಾರಿಗಳಿಗೆ ಮರಳಿಸಿ. ಈ ವೇಳೆ ಹೊಸ ಹೆಸರು ಸೇರ್ಪಡೆ ಮಾಡುತ್ತಿದ್ದರೆ, ಹೆಸರು ತಿದ್ದುಪಡಿಮಾಡಿಸಬಹುದು. ಅಧಿಕಾರಿಗಳ ಜತೆಗೆ ನೆರವಿಗೆ ರಾಜಕೀಯ ಪಕ್ಷಗಳ ನೋಂದಾಯಿತ ಏಜೆಂಟ್‌ಗಳು ಆಗಮಿಸುತ್ತಾರೆ. ಅಧಿಕಾರಿಗಳ ಪ್ರತಿಯನ್ನು ಸ್ಕ್ಯಾನ್ ಮಾಡಿ ಅದನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ ಪೂರ್ಣಗೊಂಡ ಬಳಿಕ ಚುನಾವಣಾ ಆಯೋಗದಿಂದ ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದರು.