Awareness programme 
ಬೆಂಗಳೂರು ಗ್ರಾಮಾಂತರ

ವರದಕ್ಷಿಣೆಗೆ ಕಾರಾಗೃಹ ಶಿಕ್ಷೆ ಖಚಿತ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವರದಕ್ಷಿಣೆ ಎಂಬುದು ಸಮಾಜಕ್ಕೆ ಪಿಡುಗಾಗಿದ್ದು, ಇದರ ಪರಿಣಾಮವಾಗಿ ಅನೇಕ ಮಹಿಳೆಯರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದೆ ಆದ್ದರಿಂದ ವರದಕ್ಷಿಣೆ ಪ್ರಕರಣಕ್ಕೆ ಕಾರಾಗೃಹ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಗದೀಶ್ ಕಳವಳ ವ್ಯಕ್ತಪಡಿಸಿದರು.
ದೇವನಹಳ್ಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ವಿಶ್ವನಾಥಪುರ ಗ್ರಾಮ ಪಂಚಾಯತಿಯ ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿ ತಾಲೂಕು ವಿಶ್ವನಾಥಪುರ ಗ್ರಾಮದಲ್ಲಿ ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮದುವೆಯ ಸಂದರ್ಭದಲ್ಲಿ ವಧುವಿನ ಕುಟುಂಬವು ವರ ಅಥವಾ ಅವರ ಕುಟುಂಬಕ್ಕೆ ಹಣ, ಆಸ್ತಿ, ಒಡವೆ ಅಥವಾ ಅಮೂಲ್ಯ ವಸ್ತುಗಳನ್ನು ನೀಡುವುದನ್ನು ವರದಕ್ಷಿಣೆ ಎಂದು ಕರೆಯಲಾಗುತ್ತದೆ ಇದು ಕಾನೂನು ಬಾಹಿರವಾಗಿದ್ದು ಇಂಥ ಪ್ರಕರಣಗಳಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.ವರದಕ್ಷಿಣೆ ವಿರುದ್ಧ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದರ ಅಂಗವಾಗಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದರು.
ಕಾರಾಗೃಹ ಶಿಕ್ಷೆ:
ಭಾರತ ಸರ್ಕಾರ ವರದಕ್ಷಿಣೆ ತಡೆಯುವ ಉದ್ದೇಶದಿಂದ 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ವರದಕ್ಷಿಣೆ ಕೇಳುವುದು, ನೀಡುವುದು ಅಥವಾ ಸ್ವೀಕರಿಸುವುದೂ ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕಿರುಕುಳಗಳಿಗೆ 5 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಇಂತಹ ಪ್ರಕರಣವಿದ್ದರೆ ತಕ್ಷಣ 181 ಮಹಿಳಾ ಸಹಾಯವಾಣಿ ಕರೆ ಮಾಡಿ ಎಂದು ಜಗದೀಶ್ ತಿಳಿಸಿದರು.
ಶಿಕ್ಷಾರ್ಹ ಅಪರಾಧ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುದ್ದಣ್ಣ ಮಾತನಾಡಿ, ವರದಕ್ಷಿಣೆ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಮತ್ತು ಬಾಲ್ಯ ವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರು ಜಾಗೃತಿ ಬೆಳೆಸಿಕೊಳ್ಳಬೇಕು, ಇವುಗಳೆಲ್ಲ ಕಾನೂನು ಬಾಹಿರವಾಗಿದ್ದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಹೇಳಿದರು. ಜಿಲ್ಲಾ ನಿರೂಪಣಾಧಿಕಾರಿ ರಮೇಶ್ ಮಾತನಾಡಿ, 1961ರಲ್ಲಿ ಜಾರಿಗೆ ಬಂದ ವರದಕ್ಷಿಣೆ ನಿಷೇಧ ಕಾಯ್ದೆಯ ಬಗ್ಗೆ ಇಂದಿಗೂ ಅರಿವು ಮೂಡಿಸುವ ಅಗತ್ಯ ಇರುವುದೇ ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟರು. ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಜತೆಗೆ ವರದಕ್ಷಿಣೆ, ಬಾಲ್ಯ ವಿವಾಹ, ಮರ್ಯಾದ ಹತ್ಯೆ, ಲಿಂಗಾನುಪಾತ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಕುರಿತು ಬೆಳಕು ಚೆಲ್ಲಿದರು.