ವಿಜಯಪುರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಪ್ರಸನ್ನಕುಮಾರ್​ ಅವರನ್ನು ಸನ್ಮಾನಿಸಲಾಯಿತು. ಬಯಪ ಮಾಜಿ ಅಧ್ಯಕ್ಷ ವಿ.ಶಾಂತಕುಮಾರ್​, ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ವಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲುವಳ್ಳಿ ನಟರಾಜ್​, ವಿಜಯಪುರ ಹೋಬಳಿ ಅಧ್ಯಕ್ಷ ಆರ್​.ಅಮರನಾಥ್​ ಇತರರು ಇದ್ದರು. 
ಬೆಂಗಳೂರು ಗ್ರಾಮಾಂತರ

ಇಂದು ವಿಜಯಪುರದಲ್ಲಿ ಎಸ್​ಐಆರ್​ ಜಾಗೃತಿ

> ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಪ್ರಸನ್ನಕುಮಾರ್​ ಮಾಹಿತಿ

ವಿಜಯಪುರ : ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣಾ ಆಯೋಗ ರಾಜ್ಯದ 1.8 ಕೋಟಿ ಅರ್ಹ ಮತದಾರರ ಹೆಸರು ಕೈಬಿಟ್ಟಿರುವ ಕ್ರಮವನ್ನು ಖಂಡಿಸಿ ನ.18ರಂದು ಪಟ್ಟಣದಲ್ಲಿ ಬೃಹತ್​ ಜನಜಾಗೃತಿ ಯಾತ್ರೆ ಆಯೋಜನೆ ಮಾಡಲಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಪ್ರಸನ್ನಕುಮಾರ್​ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಜಯಪುರ ಬ್ಲಾಕ್​ ಕಾಂಗ್ರೆಸ್​ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್​ ಗ್ಯಾರಂಟಿಗಳ ಮೂಲಕ ಕೋಟ್ಯಂತರ ಹಣವನ್ನು ಜನರಿಗೆ ನೀಡುತ್ತಿದೆ. ಕಾಂಗ್ರೆಸ್​ಗೆ ಮತ ಹಾಕುವವರಷ್ಟೇ ಈ ಹಣ ಪಡೆಯುತ್ತಿಲ್ಲ. ಜೆಡಿಎಸ್​, ಬಿಜೆಪಿಯವರೂ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೆ.ಎಚ್​.ಮುನಿಯಪ್ಪ ಅವರು ಸಚಿವರಾದ ನಂತರ ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಈ ಬಗ್ಗೆ ಪ್ರಚಾರ ಅಗತ್ಯವಿದ್ದು, ಪಕ್ಷ ಸಂಟನೆ ಜತೆಗೆ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದರು.

ವಿಜಯಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ದಿನ್ನೂರು ವೆಂಕಟೇಶ್​ ಮಾತನಾಡಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ, ನೂರಾರು ಕೋಟಿಗಳಷ್ಟು ಅಭಿವೃದ್ಧಿಯಾಗುತ್ತಿದೆ. ಬಯಪ ಸೇರಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಮುಂತಾದ ಯೋಜನೆಗಳಡಿ ಹಳ್ಳಿಗಳು ಸೇರಿ ದೇವನಹಳ್ಳಿ, ವಿಜಯಪುರ ಎರಡೂ ಪಟ್ಟಣಗಳಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಕಾರ್ಯಕರ್ತರು ಈ ಕುರಿತು ಜನರಿಗೆ ಮನವರಿಕೆ ಮಾಡುವಂತಹ ಕೆಲಸ ಮಾಡಬೇಕಿದೆ ಎಂದು ಕೇಳಿದರು.

ಅಸಮಾಧಾನ ಹೊರಹಾಕಿದ ಕಾರ್ಯಕರ್ತರು: ಸಚಿವ ಕೆ.ಎಚ್​.ಮುನಿಯಪ್ಪ ಅವರು ಸಾಮಾನ್ಯ ಕಾರ್ಯಕರ್ತರಿಗೆ ಸಿಗಲ್ಲ, ಮುಖಂಡರಿಗೆ ಮಾತ್ರ ಸಿಗುತ್ತಾರೆ. ನಾವು ಪಕ್ಷಕ್ಕೆ ದುಡಿಯುವುದಕ್ಕೆ ಮಾತ್ರ ಇದ್ದೀವಾ?. ಚನ್ನರಾಯಪಟ್ಟಣ ಹೋಬಳಿಯಲ್ಲಿ ಎಷ್ಟು ಹಳ್ಳಿಗಳಲ್ಲಿ ಕಾಮಗಾರಿಗಳು ಮಾಡಿದ್ದಾರೆ? ಪಟ್ಟಿಕೊಡಿ. ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ನಾವೇನು ಉತ್ತರ ಕೊಡಬೇಕು ಎಂದು ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ದಿನ್ನೂರು ವೆಂಕಟೇಶ್​ ಮುಖಂಡರನ್ನು ಸಮಾಧಾನ ಪಡಿಸಿದರು.

ಮುಖಂಡರಾದ ನಾರಾಯಣಸ್ವಾಮಿ, ಶಂಕರಪ್ಪ, ವಿನೋದಮ್ಮ, ಕೆ.ಎಂ.ಮಧು, ಸೈಫುಲ್ಲಾ, ಎಸ್​.ಮಂಜುನಾಥ್​, ಬ್ಲಾಕ್​ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೊಮ್ಮಸಂದ್ರ ಸುರೇಶ್​, ಗಿರೀಶ್​, ಚಂದ್ರಶೇಖರ್​, ನಟರಾಜ್​, ಮಂಜುಳಮ್ಮ ಇತರರು ಇದ್ದರು.