ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯ ಎಜಾಕ್ಸ್ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕಿ ರಾಜೇಶ್ವರಿ, ಕೋ ಆರ್ಡಿನೇಟರ್ ಲಕ್ಷಿ$್ಮಶ್ರೀಧರ್, ತಾಲೂಕು ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಜ್ಯೋತಿ, ಅಂತರ್ಜಲ ಇಲಾಖೆ ಸಿಬ್ಬಂದಿ ರಾಜೇಶ್, ಶ್ಯಾಮಲಾ, ಆರ್ಯ, ಉಪನಿರ್ದೇಶಕ ಕಚೇರಿ ಸಿಬ್ಬಂದಿ ಪದ್ಮಾ, ಶಿಕ್ಷಕ ತಾಯಪ್ಪ ಇತರರು ಇದ್ದರು.
- ಚಿಕ್ಕಂದಿನಲ್ಲೇ ಜಲಸಂರಕ್ಷಣೆ ಜಾಗೃತಿ ಅಗತ್ಯ
ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಿಸಲು ಮಕ್ಕಳಲ್ಲಿಯೇ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗಾಯತ್ರಿ ಹೇಳಿದರು.
ತಾಲೂಕಿನ ಬಾಶೆಟ್ಟಿಹಳ್ಳಿ ಎಜಾಕ್ಸ್ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು ಗ್ರಾಮಾಂತರ ಅಂತರ್ಜಲ ಕಚೇರಿ, ಶಿಕ್ಷಣ ಇಲಾಖೆ ಹಾಗೂ ಮೆ.ವರುಣ್ ಬೆವರೇಜಸ್ ಕಂಪೆನಿ ವತಿಯಿಂದ ನಮ್ಮಭೂಮಿ, ನಮ್ಮ ನೀರು ನಮ್ಮ ಶಕ್ತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿದರು.
ಸರ್ಕಾರದಿಂದ ಮಕ್ಕಳಿಗೆ ನೀರಿನ ಮಹತ್ವ ಹಾಗೂ ಅಂತರ್ಜಲ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ನೀರಿನ ಮಿತ ಬಳಕೆ ಹಾಗೂ ಸಂರಕ್ಷಣೆ ಬಗ್ಗೆ ಮಕ್ಕಳು ತಿಳಿದುಕೊಂಡು, ಅದನ್ನು ಮನೆಗಳಲ್ಲಿಯೂ ಪಾಲಿಸುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶ. ಪ್ರಸ್ತುತ ಬೋರ್ವೆಲ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತರ್ಜಲದ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಮಳೆ ನೀರು ವ್ಯರ್ಥವಾಗಿ ಹರಿಯದಂತೆ ತಡೆದು, ಸಾಧ್ಯವಾದಷ್ಟು ಭೂಮಿಗೆ ಇಂಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಹಿರಿಯ ಭೂ ವಿಜ್ಞಾನಿ ಡಾ.ಪಲ್ಲವಿ ಮಾತನಾಡಿ, ಮಳೆ ನೀರನ್ನು ಇಂಗಿಸುವ ನಿಟ್ಟಿನಲ್ಲಿ ತೋಟಗಳಲ್ಲಿ ಇಂಗು ಗುಂಡಿಗಳನ್ನು ಅಳವಡಿಸಿಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಬೇಕಿದೆ. ಎಲ್ಲಿ ಸಾಧ್ಯವೋ ಅಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ನೀರಿನ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಶೇಖರ್ ಮಾತನಾಡಿ, ಪ್ರಕೃತಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅಂತರ್ಜಲ ಮಟ್ಟವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಚಿತ್ರಗಳು ಸಾಕಷ್ಟು ವಿಚಾರ, ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಮಕ್ಕಳು ಚಿತ್ರಕಲೆಯ ಮೂಲಕ ನೀರು, ಭೂಮಿಯ ಮಹತ್ವ ಹೇಳಲು ಮುಂದಾಗಿದ್ದಾರೆ ಎಂದರು.