ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ತಿಂಗಳಿಂದ ಉದ್ಘವಿಸಿದ್ದ ಆಟೋ ಗ್ಯಾಸ್ ಅಭಾವದ ಪರಿಸ್ಥಿತಿ ತಿಳಿಯಾಗಿದ್ದು, ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಂಡುಬರುತ್ತಿದ್ದ ಉದ್ದುದ್ದ ಆಟೋಗಳ ಸಾಲು ತುಸು ಕಡಿಮೆಯಾಗಿದೆ.
ಗ್ಯಾಸ್ ಸಿಗದೇ ದೊಡ್ಡಬಳ್ಳಾಪುರ, ಹೊಸಕೋಟೆ ನಗರಗಳಿಗೆ ನೆರೆಯ ಚಿಕ್ಕಬಳ್ಳಾಪುರ ಕೋಲಾರ ಕಡೆಯಿಂದಲೂ ಆಟೋಗಳು ಬರುತ್ತಿದ್ದವು. ಮುಂಜಾನೆಯಿಂದ ಸಂಜೆವರೆಗೆ ಸರದಿ ಸಾಲಿನಲ್ಲಿ ನಿಂತು ಗ್ಯಾಸ್ ತುಂಬಿಸಿಕೊಳ್ಳಲು ಆಟೋ ಚಾಲಕರು ಪರದಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಆದರೆ ಕೆಲವು ದಿನಗಳಿಂದ ಬಂಕ್‌ಗಳಿಗೆ ಗ್ಯಾಸ್ ಪೂರೈಕೆಯಾಗುತ್ತಿದ್ದು ಒತ್ತಡ ಕಡಿಮೆಯಾಗಿದೆ. ಇದರಿಂದ ನೆರೆ ಜಿಲ್ಲೆಗಳಿಂದ ಬರುತ್ತಿದ್ದ ಆಟೋಗಳ ಸಂಖ್ಯೆಯೂ ಗಣನೀಯವಾಗಿ ತಗ್ಗಿದ್ದು, ಸ್ಥಳೀಯ ಆಟೋ ಚಾಲಕರು ನಿರಾಳವಾಗಿದ್ದಾರೆ.
ಆಟೋ ಚಾಲಕರ ಪರದಾಟ ಪರಿಸ್ಥಿತಿ ಕೊನೆಗೂ ಸಹಜಸ್ಥಿತಿಗೆ ಮರಳುತ್ತಿದ್ದು, ಸಾಲು ಗಟ್ಟಿ ನಿಲ್ಲುತ್ತಿದ್ದ ಆಟೋಗಳ ಸಾಲಿನಿಂದ ಏರ್ಪಡುತ್ತಿದ್ದ ಸಂಚಾರ ಸಿಕ್ಕಿಗೂ ಮುಕ್ತಿ ಸಿಕ್ಕಂತಾಗಿದೆ. ಸ್ಥಳೀಯ ಪೊಲೀಸರು ಸಂಚಾರ ಸಿಕ್ಕು ನಿಯಂತ್ರಿಸಲು ಪರದಾಡುತ್ತಿದ್ದ ಸನ್ನಿವೇಶಕ್ಕೂ ಬ್ರೇಕ್ ಬಿದ್ದಂತಾಗಿದೆ. ಆಟೋ ಗ್ಯಾಸ್ ಎಲ್ಲ ಬಂಕ್‌ಗಳಿಗೆ ಸರಬರಾಜಾಗುತ್ತಿದೆ ಎನ್ನಲಾಗುತ್ತಿದ್ದು, ನಗರ ಹಾಗೂ ಪಟ್ಟಣ ಪ್ರದೇಶಗಳ ಬಹುತೇಕ ಬಂಕ್‌ಗಳಲ್ಲಿ ಆಟೋ ಗ್ಯಾಸ್ ಸಿಗುತ್ತಿದೆ.
ಗ್ಯಾಸ್ ಸಿಗದೆ ಪರದಾಡುತ್ತಿದ್ದ ಆಟೋ ಚಾಲಕರು ತುಸು ನಿರಾಳವಾಗಿರುವ ನಡುವೆಯೇ ಗ್ಯಾಸ್ ದರ ಏಕಾಏಕಿ ಏರಿಕೆ ವಾಡಿರುವುದು ಚಾಲಕರಿಗೆ ಸಂಕಷ್ಟ ತಂದಿದೆ. ಯುದ್ಧದ ವೇಳೆ ನಿರ್ಮಾಣವಾದ ಗ್ಯಾಸ್ ಕೊರತೆಯಿಂದ ಹಲವು ಬಂಕ್‌ಗಳಲ್ಲಿ ದಿಢೀರ್ ದರ ಏರಿಕೆ ಮಾಡಲಾಗಿತ್ತು. ಆದರೆ, ಇದೀಗ ಕೆಲವು ಬಂಕ್‌ಗಳು ಅದೇ ದರವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಆಟೋ ಚಾಲಕರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಯುದ್ಧದ ಪೂರ್ವದಲ್ಲಿ ಲೀಟರ್ ಎಲ್‌ಪಿಜಿಗೆ 65 ರೂ. ಇತ್ತು. ಈಗ 120 ರೂ.ವರೆಗೆ ಏರಿಕೆಯಾಗಿದೆ ಎನ್ನಲಾಗಿದ್ದು, ಆಟೋ ಚಾಲಕರ ಪಾಲಿಗೆ ಸನ್ನಿವೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬ ಅಳಲು ಕೇಳಿಬರುತ್ತಿದೆ.
ಕಳೆದೆರಡು ದಿನಗಳಿಂದ ಬಂಕ್‌ಗಳಲ್ಲಿ ಗ್ಯಾಸ್ ದೊರೆಯುತ್ತಿದೆ, ಅಲ್ಲದೆ ನೆರೆ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಆಟೋಗಳು ಬರುತ್ತಿಲ್ಲ. ಇದರಿಂದ ಬೆಳಗ್ಗೆಯಿಂದ ಸಂಜೆವರೆಗೆ ಸರದಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ತುಸು ತಗ್ಗಿದೆ. ಆದರೆ ಗ್ಯಾಸ್ ದರವನ್ನು ದುಪ್ಪಟ್ಟು ಮಾಡಿರುವುದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಈ ಬಗ್ಗೆ ಸರ್ಕಾರ ಗಮನ ನೀಡಬೇಕು. ಇಲ್ಲವಾದರೆ ಗ್ಯಾಸ್ ಸಿಕ್ಕರೂ ಸಂಪಾದನೆ ಶೂನ್ಯ ಎನ್ನುವಂತ ಸನ್ನಿವೇಶಕ್ಕೆ ಸಿಲುಕಿದ್ದೇವೆ.
ರವೀಶ್, ಅಟೋ ಚಾಲಕ ದೊಡ್ಡಬಳ್ಳಾಪುರ