ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಡಿಸಿ ಕಚೇರಿಯ ಜಿಪಂ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲೇ ರೈತ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಹೈಡ್ರಾಮ ನಡೆದಿದೆ.
ದೇವನಹಳ್ಳಿ ತಾಲೂಕು ಮುದಗುರ್ಕಿ ಗ್ರಾಮದ ರೈತ ಆಂಜನಪ್ಪ ವಿಷ ಸೇವಿಸಲು ಯತ್ನಿಸಿದಾಗ ತಕ್ಷಣ ಅಲರ್ಟ್ ಆದ ಪೊಲೀಸರು ವಿಷಯ ಬಾಟಲಿ ಕಸಿದುಕೊಂಡಿದ್ದಾರೆ. ಇದರಿಂದ ಸಂಭವಿಸಬಹುದಾದ ದುರಂತ ತಪ್ಪಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಜಿಪಂ ಸಭಾಂಗಣದಲ್ಲಿ ದೊಡ್ಡ ಕೋಲಾಹಲವೇ ಏರ್ಪಟ್ಟಿತ್ತು. ತಕ್ಷಣದ ಬೆಳವಣಿಗೆಗೆ ಗಾಬರಿಯಾದ ಸಚಿವ ಮುನಿಯಪ್ಪ, ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ನಡೆಸಿದರು. ಪೊಲೀಸರು ವಿಷದ ಬಾಟಲಿ ಕಸಿದುಕೊಂಡ ಬಳಿಕ ಸಭೆಯಲ್ಲಿ ಸೇರಿದ್ದ ಇನ್ನಿತರ ದಲಿತ ಮುಖಂಡರು ತಾಲೂಕಿನಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ ಪ್ರಭಾವಿಗಳು ದಲಿತರ ಜಮೀನುಗಳ ಮೇಲೆ ಕಣ್ಣಾಕಿದ್ದು ಇದಕ್ಕೆ ಅಧಿಕಾರಿಗಳ ಸಹಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಜಿಪಂ ಸಭಾಂಗಣದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ದೇವನಹಳ್ಳಿ ತಾಲೂಕು ಮುದಕುರ್ಕಿಯಲ್ಲಿ 20 ಗುಂಟೆ ಜಮೀನು ಹೊಂದಿರುವ ರೈತ ಆಂಜಿನಪ್ಪ ಜಮೀನು ವ್ಯಾಜ್ಯ ಸಂಬಂಧ ಅನೇಕ ಬಾರಿ ತಹಸೀಲ್ದಾರ್ ಹಾಗೂ ಎಸಿ ಬಳಿಗೆ ತಿರುಗಿದ್ದಾರೆ. ಆದರೆ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಸುಮಾರು 2 ವರ್ಷಗಳಿಂದ ಕಚೇರಿಗಳಿಗೆ ಅಲೆದಾಡಿದರೂ ವ್ಯಾಜ್ಯ ಬಗೆಹರಿದಿಲ್ಲ. ಇದರಿಂದ ಹತಾಶನಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂಬ ವಿಷಯ ಸಭೆಯಲ್ಲಿ ಬಹಿರಂಗವಾಗಿದೆ.
ಸರ್ಕಾರದ ಕಾರ್ಯಕ್ರಮವಾಗಿ ಜಿಲ್ಲಾ ಮಟ್ಟದಲ್ಲಿ ಡಾ.ಅಂಬೇಡ್ಕರ್ ಹಾಗೂ ಡಾ.ಜಗಜೀವನ್‌ರಾಮ್ ಜಯಂತಿ ಆಚರಣೆ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ದಲಿತ ಮುಖಂಡರು ಪಾಲ್ಗೊಂಡಿದ್ದರು. ಜಯಂತಿ ಆಚರಣೆ ಸಂಬಂಧ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಎದ್ದು ನಿಂತ ರೈತ ಆಂಜಿನಪ್ಪ ವಿಷದ ಬಾಟಲಿ ಹಿಡಿದು ಕುಡಿಯಲು ಯತ್ನಿಸಿದ್ದರು. ಪೊಲೀಸರ ಮಧ್ಯೆ ಪ್ರವೇಶದಿಂದ ಅನಾಹುತ ತಪ್ಪಿದರೂ, ಏ.14 ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯೊಳಗೆ ಜಮೀನು ವ್ಯಾಜ್ಯ ಬಗೆಹರಿಸಬೇಕು, ಇಲ್ಲವಾದರೆ ಮಹನೀಯರ ಜಯಂತಿಯಂದೇ ಕುಟುಂಬ ಸಮೇತ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಎಚ್ಚರಿಕೆ ನೀಡಿದ್ದಾರೆ.
ಏಕಾಏಕಿ ನಡೆದ ಪ್ರಕರಣದಿಂದ ಕ್ಷಣಕಾಲ ದಂಗಾದ ಸಚಿವರು ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ತಹಸೀಲ್ದಾರ್‌ಗೆ ಸೂಚನೆ ನೀಡಿ, ತಕ್ಷಣವೇ ವ್ಯಾಜ್ಯ ಬಗೆಹರಿಸುವಂತೆ ತಾಕೀತು ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ದನಿಗೂಡಿ ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿ:
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ದೇವನಹಳ್ಳಿ ಭಾಗದ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದೆ, ತುಂಡು ಭೂಮಿಯೂ ಕೋಟ್ಯಂತರ ರೂ.ಬಾಳುತ್ತಿದೆ. ಇದಕ್ಕೆ ಬಂಡವಾಳ ಮಾಡಿಕೊಂಡಿರುವ ಕೆಲವರು ದಲಿತರ ಜಮೀನುಗಳ ಮೇಲೆ ಕಣ್ಣಾಕಿದ್ದಾರೆ. ಸರ್ವೆ ನಂಬರ್‌ಗಳನ್ನು ಬದಲಿಸಿ ಅಧಿಕಾರಿಗಳನ್ನು ಸರಿಮಾಡಿಕೊಂಡು ಕೋಟ್ಯಂತರ ರೂಪಾಯಿ ಲಂಚ ನೀಡಿ ದಾಖಲೆಗಳನ್ನು ಮಾಡಿಕೊಂಡು ಮಾರಿಕೊಳ್ಳುತ್ತಿದ್ದಾರೆ. ಇದರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಪಾಲಿದೆ ಎಂದು ದಲಿತ ಮುಖಂಡರು ಸಚಿವರ ಮುಂದೆ ಆರೋಪಿಸಿದರು. ದಲಿತ ಸಚಿವರಾಗಿರುವ ದೇವನಹಳ್ಳಿ ತಾಲೂಕಿನ ಶಾಸಕರೂ ಆಗಿರುವ ಕೆ.ಎಚ್.ಮುನಿಯಪ್ಪ ಅವರು ಬಡ ದಲಿತ ರೈತರ ಹಿತಕಾಯಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.