ವೀಲಿಂಗ್ ಮಾಡಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಪತ್ತೆಹಚ್ಚಿ ಆನೇಕಲ್ ಪೊಲೀಸರು 13 ಸ್ಕೂಟಿಗಳನ್ನು ವಶಪಡಿಸಿಕೊಂಡಿರುವುದು.
- ವ್ಹೀಲಿಂಗ್ ಮಾಡಲು ಸ್ಕೂಟಿ ಕದಿಯುತ್ತಿದ್ದವರ ಬಂಧನ
ವ್ಹೀಲಿಂಗ್ ಮಾಡಲು ಸ್ಕೂಟಿ ಕದಿಯುತ್ತಿದ್ದವ
ವೀಲಿಂಗ್ ಮಾಡಲು ಸ್ಕೂಟಿಗಳನ್ನು ಕಳವು ಮಾಡುತ್ತಿದ್ದ ಗ್ಯಾಂಗ್ ಪತ್ತೆಹಚ್ಚಿ 6 ಬಾಲಕರನ್ನು ಆನೇಕಲ್ ಪೊಲೀಸರು ವಶಕ್ಕೆ ಪಡೆದಿದ್ದು, 13 ಬೈಕ್ಗಳನ್ನು ಜಪ್ತಿಮಾಡಿಕೊಂಡಿದ್ದಾರೆ.
ಬಂಧಿತರೆಲ್ಲರೂ ಕಾನೂನು ಸಂರ್ಷಕ್ಕೊಳಗಾದರು. ಖಚಿತ ಮಾಹಿತಿ ಮೇರೆಗೆ ಆನೇಕಲ್ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ವಿಚಾರಣೆ ವೇಳೆ ಬೈಕ್ ಕಳವು ಹಾಗೂ ಅವುಗಳನ್ನು ವೀಲಿಂಗ್ಗೆ ಬಳಸುತ್ತಿದ್ದ ಬಗ್ಗೆ ಬಂಧಿತರು ಬಾಯ್ಬಿಟ್ಟಿದ್ದಾರೆ.
ವೀಲಿಂಗ್ ಹುಚ್ಚಿಗಾಗಿ ಬೈಕ್ಗಳನ್ನು ಕಳವು ಮಾಡುತ್ತಿದ್ದ ಈ ಗ್ಯಾಂಗ್, ಸಾಮಾನ್ಯವಾಗಿ ಡಿಯೋ ಸ್ಕೂಟಿಗಳನ್ನೇ ಗುರಿಯಾಗಿಸಿಕೊಂಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಸ್ಕೂಟಿಗಳನ್ನು ಗಮನಿಸಿ, ಅವಕಾಶ ಸಿಕ್ಕಾಗ ಅವುಗಳನ್ನು ಕಳವು ಮಾಡುತ್ತಿದ್ದರು. ಕದ್ದ ಬೈಕ್ಗಳನ್ನು ವೀಲಿಂಗ್ ಮಾಡಲು ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಕದ್ದ ಬೈಕ್ಗಳ ಗುರುತು ಸಿಗದಂತೆ ಮಾಡಲು ನಂಬರ್ ಪ್ಲೇಟ್ಗಳನ್ನು ತೆಗೆದುಹಾಕುತ್ತಿದ್ದರು. ಕೆಲಬೈಕ್ಗಳ ನಂಬರ್ ಬದಲಾಯಿಸಿ, ಪ್ರಮುಖ ರಸ್ತೆಗಳಲ್ಲೇ ವೇಗವಾಗಿ ವೀಲಿಂಗ್ ಮಾಡುತ್ತಿದ್ದರು. ಅಪಾಯಕಾರಿ ರೀತಿಯಲ್ಲಿ ಬೈಕ್ ಚಲಾಯಿಸುವ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು-ಹೊಸೂರು ಮುಖ್ಯರಸ್ತೆಯ ನೆರಳೂರು ಸಮೀಪ ಶನಿವಾರ ಕಾರು ಏಕಾಏಕಿ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಕಾರು ಚಾಲನೆ ವೇಳೆ ಇಂಜಿನ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಕೂಡಲೇ ಎಚ್ಚೆತ್ತುಕೊಂಡು ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಹೊರಗೆ ಬಂದಿದ್ದಾರೆ. ಕಾರಿನಲ್ಲಿನ ಬೆಂಕಿ ಗಮನಿಸಿದ ಸಮೀಪದ ಪೆಟ್ರೋಲ್ ಬಂಕ್ ಸಿಬ್ಬಂದಿ ತಣ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೂ ಬೆಂಕಿಯ ತೀವ್ರತೆ ಹೆಚ್ಚಾಗಿ ನೋಡನೋಡುತ್ತಿದ್ದಂತೆ ಜ್ವಾಲೆ ಇಡೀ ಕಾರು ವ್ಯಾಪಿಸಿವೆ. ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಅವಡದಿಂದ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.
ಜ್ಯುವೆಲ್ಲರಿ ಶಾಪ್ ದರೋಡೆಗೆ ಯತ್ನಿಸಿದವ ಸೆರೆ: ದಾಬಸ್ಪೇಟೆಯ ಚಿನ್ನಭರಣ ಮಳಿಗೆಯಲ್ಲಿ ದರೋಡೆಗೆ ಯತ್ನಿಸಿ, ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಪರಾರಿಯಾದವ ಇನ್ನೊಂದು ಪ್ರಕರಣದಲ್ಲಿ ಉತ್ತರಪ್ರದೇಶ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ವಿಚಾರಣೆಗೆಂದು ಕರೆತರಲು ದಾಬಸ್ಪೇಟೆ ಠಾಣೆ ಸಿಬ್ಬಂದಿ ತೆರಳಿದ್ದಾರೆ.
ರಾಜಸ್ಥಾನದ ರಾಹುಲ್(32) ಬಂಧಿತ.
ಏನಿದು ಪ್ರಕರಣ?: ಆ.6ರಂದು ದಾಬಸ್ಪೇಟೆಯ ಪ್ರೇಮ್ಶಿವ ಚಿನ್ನಾಭರಣ ಮಳಿಗೆಗೆ ಚಿನ್ನಖರೀದಿಸುವ ನೆಪದಲ್ಲಿ ಬಂದಿದ್ದ ರಾಹುಲ್ ಹಾಗೂ ಸಹಚರರು, ದರೋಡೆಗೆ ಯತ್ನಿಸಿದ್ದರು. ಮಾಲೀಕ ಕುನ್ನಾರಾಮ್ ಇದಕ್ಕೆ ಪ್ರತಿರೋಧವೊಡ್ಡಿದ್ದರಿಂದ ಖದೀಮರು ಗುಂಡುಹಾರಿಸಿ ಪರಾರಿಯಾಗಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ದಾಬಸ್ಪೇಟೆ ಪೊಲೀಸರು ಆರೋಪಿಗಳ ಬೆನ್ನುಹತ್ತಿದ್ದರು. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ರಾಹುಲ್, ರಾಜಸ್ಥಾನದಲ್ಲಿ ಮತ್ತೊಂದು ಗುಂಡಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರಾಜಸ್ಥಾನದ ಗಾಂಧಿ ವಾಟಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಮೇಲೆ ರಾಹುಲ್ ಗುಂಡು ಹಾರಿಸಿಅಲ್ಲಿಂದಲೂ ಪರಾರಿಯಾಗಿದ್ದ. ಆತನನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದು, ದಾಬಸ್ಪೇಟೆ ಚಿನ್ನಾಭರಣ ಮಳಿಗೆ ದರೋಡೆಗೆ ಯತ್ನ ಪ್ರಕರಣ ಸಂಬಂಧಿಸಿದಂತೆ ಆತನನ್ನು ವಿಚಾರಣೆಗೆ ಕರೆತರಲು ದಾಬಸ್ಪೇಟೆ ಇನ್ಸ್ಪೆಕ್ಟರ್ ಧಮೇರ್ದ್ರ, ಪಿಎಸ್ಐ ಸಿದ್ದಪ್ಪ, ಸಿಬ್ಬಂದಿ ಫೀರಸಾಬ್, ನವೀನ್, ಗೌತಮ್ ಉತ್ತರಪ್ರದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ಪ್ರಕರಣದ ಮತ್ತಷ್ಟುಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.