ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಬೆಂಗಳೂರಿನ ಎಂಎಸ್ ಪಾಳ್ಯದಲ್ಲಿ ಕಳೆದ ಏಳೆಂಟು ವರ್ಷದಿಂದ ಅಕ್ರಮವಾಗಿ ವಾಸವಾಗಿದ್ದ ನೈಜೀರಿಯಾ ಪ್ರಜೆಯನ್ನು ಪತ್ತೆ ಹಚ್ಚಿ ಸ್ವಂತ ದೇಶಕ್ಕೆ ಹಸ್ತಾಂತರ ಮಾಡುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡುಸೋಲೊಮೋ ಹೆಸರಿನ ನೈಜೀರಿಯಾ ಪ್ರಜೆ ಜತೆಗೆ ಆತನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನೂ ಹಸ್ತಾಂತರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ವಿದೇಶಿ ಪ್ರಜೆ ಬಾಡಿಗೆ ಮನೆಯೊಂದರಲ್ಲಿ ಕುಟುಂಬ ಜತೆ ವಾಸ್ತವ್ಯ ಹೂಡಿದ್ದ.
ಗ್ರಾಮಾಂತರ ಜಿಲ್ಲೆಯ ಹಲವು ಕಡೆಗಳಲ್ಲಿ ಮಾದಕ ವಸ್ತುಗಳ ಮಾರಾಟದ ಜಾಲದ ಹಿಂದೆ ಬಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರು ಡ್ರಗ್ಸ್ ಸಪ್ಲೆಯರ್ಸ್‌ಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ವೇಳೆ ನೈಜೀರಿಯಾ ಪ್ರಜೆಯೊಬ್ಬನ ಮೂಲಕ ವ್ಯವಹಾರ ನಡೆಸುತ್ತಿರುವ ಮಾಹಿತಿ ದೊರೆತಿತ್ತು. ಆರೋಪಿಗಳ ಮಾಹಿತಿ ಬೆನ್ನುಹತ್ತಿದ ಪೊಲೀಸರಿಗೆ ನೈಜೀರಿಯಾ ಪ್ರಜೆಯೊಬ್ಬ ದೊಡ್ಡಮಟ್ಟದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ರೂಪಿಸಿದ್ದ ಪೊಲೀಸರು ಬೆಂಗಳೂರಿನ ಎಂಎಸ್ ಪಾಳ್ಯದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಪೊಲೀಸರಿಗೆ ಸಿಕ್ಕಿಬಿದ್ದ ನೈಜೀರಿಯಾ ಪ್ರಜೆ ಮೇಲ್ನೋಟಕ್ಕೆ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದ, ಆದರೆ ಮುಖ್ಯವಾಗಿ ದುಬಾರಿ ಮೌಲ್ಯದ ಮಾದಕ ವಸ್ತುಗಳ ಮಾರಾಟದ ಪ್ರಮುಖ ಕಿಂಗ್‌ಪಿನ್ ಆಗಿದ್ದ. ಈತ ಸ್ಥಳೀಯ ಆಟೋ ಚಾಲಕನೊಬ್ಬನ ಸಹಕಾರದ ಮೂಲಕ ದಂಧೆ ನಡೆಸುತ್ತಿದ್ದ. ಆಟೋ ಚಾಲಕನ ಹೆಸರಿನಲ್ಲಿ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಸಿಮ್ ಕಾರ್ಡ್ ಮತ್ತಿತರ ದಾಖಲೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದಲ್ಲಿ ಆಟೋ ಚಾಲಕನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಮಕ್ಕಳಿಬ್ಬರನ್ನು ಶಾಲೆಗೆ ಸೇರಿಸಿದ್ದ:
ಆರೋಪಿ ತನ್ನಿಬ್ಬರು ಮಕ್ಕಳನ್ನು ಬೆಂಗಳೂರಿನ ಪ್ರತಿಷ್ಟಿತ ಶಾಲೆಗೆ ದಾಖಲಿಸಿದ್ದ. ಮಕ್ಕಳಿಬ್ಬರು ಏಳೆಂಟು ವರ್ಷದಿಂದ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಸ್ಥಳೀಯ ಭಾಷೆಗಳನ್ನು ಕಲಿತುಕೊಂಡಿದ್ದು ಸ್ಥಳೀಯರೇ ಅಗಿಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ವಿದ್ಯಾರಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದರಲ್ಲಿ ಆರೋಪಿ ಪೊಲೀಸರಿಗೆ ಸೆರೆಸಿಕ್ಕಿದ್ದ ಪೊಲೀಸರ ಪರಿಶೀಲನೆಯಲ್ಲಿ ಪಾಸ್‌ಪೋರ್ಟ್ ನಕಲಿ ಎಂಬುದು ಗೊತ್ತಾಗದಂತೆ ಚಾಣಾಕ್ಷತನ ತೋರಿಸಿದ್ದ. ಬಳಿಕ ಅಲ್ಲಿಂದ ತಲೆಮರೆಸಿಕೊಂಡಿದ್ದ. ದೊಡ್ಡಬಳ್ಳಾಪುರ ಪೊಲೀಸರಿಗೆ ಸೆರೆಸಿಕ್ಕ ಬಳಿಕ ಪಾಸ್‌ಪೋರ್ಟ್ ಪರಿಶೀಲನೆ ವೇಳೆ ನಕಲಿ ಎಂಬುದು ಪತ್ತೆಯಾಗಿದೆ.
ಕಾರು ಹತ್ತಿಸಲು ಮುಂದಾಗಿದ್ದ:
ಹೊಸಕೋಟೆಯ ವ್ಯಕ್ತಿಯೊಬ್ಬರಿಂದ ಕಾರು ಖರೀದಿಸಿದ್ದ ಆರೋಪಿ ಆ ಕಾರಿನ ಮೂಲಕವೇ ದಂಧೆ ನಡೆಸುತ್ತಿದ್ದ ಎಂಎಸ್ ಪಾಳ್ಯದಲ್ಲಿ ಕಾರಿನಲ್ಲಿ ಹೋಗುವಾಗ ಪೊಲೀಸರು ಕಾರು ಅಡ್ಡಗಟ್ಟಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾಗಿದ್ದ ಎನ್ನಲಾಗಿದೆ. ಪೊಲೀಸರು ಅಲರ್ಟ್ ಆಗಿ ಚಾಣಾಕ್ಷತನದಿಂದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ನೈಜೀರಿಯಾ ಪ್ರಜೆ ದಂಧೆ ಮೂಲಕ ದೊಡ್ಡಮಟ್ಟದಲ್ಲಿ ದುಡ್ಡು ಸಂಪಾದನೆ ಮಾಡಿದ್ದ ಸ್ಥಳೀಯರಿಗೆ ಹಣಕಾಸಿನ ನೆರವು ನೀಡುವ ಮೂಲಕ ಸ್ಥಳೀಯರ ವಿಶ್ವಾಸ ಗಳಿಸಿದ್ದ. ಈತನ ಬ್ಯಾಂಕ್ ಬ್ಯಾಲೆನ್ಸ್ ಮತ್ತಿತರ ಹಣಕಾಸಿನ ವ್ಯವಹಾರ ಪರಿಶೀಲನೆ ವೇಳೆ ದೊಡ್ಡಮಟ್ಟದಲ್ಲಿ ಹಣ ಗಳಿಸಿರುವುದು ಗೊತ್ತಾಗಿದೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಮೊದಲಿಗೆ ವಿದೇಶಿ ಪ್ರಜೆಗಳ ನಿರಾಶ್ರಿತ ತಾಣಕ್ಕೆ ರವಾನೆ ಮಾಡಿದ್ದರು. ಇಂಥವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರೆ ಜೈಲಿಗೆ ಹೋಗಿ ಜಾಮೀನು ಪಡೆದು ಮತ್ತೆ ವ್ಯವಹಾರ ಶುರುವಿಟ್ಟುಕೊಳ್ಳುತ್ತಾರೆ. ಜತೆಗೆ ನ್ಯಾಯಾಲಯ ಮೊರೆ ಹೋಗಿ ಇದೇ ನೆಪದಲ್ಲಿ ಸ್ಥಳೀಯವಾಗಿ ಉಳಿಯುವ ಎಲ್ಲ ಅವಕಾಶ ಬಳಸಿಕೊಳ್ಳುತ್ತಾರೆ. ವಿದೇಶಿ ಪ್ರಜೆಗಳ ಪ್ರಮುಖ ತಂತ್ರವೇ ಇದಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆಲ್ಲ ಅವಕಾಶ ಮಾಡಿಕೊಡದ ಪೊಲೀಸರು ನೇರವಾಗಿ ಆತನನ್ನು ಸ್ವಂತ ದೇಶಕ್ಕೆ ರವಾನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದ್ದು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಾದಕ ವಸ್ತುಗಳ ಜಾಲವನ್ನು ಭೇದಿಸುವ ಕಾರ್ಯಾಚರಣೆ ವೇಳೆ ಅಕ್ರವಾಗಿ ನೆಲೆನಿಂತಿರುವ ನೈಜೀರಿಯಾ ಪ್ರಜೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈತ ಮಾದಕ ವಸ್ತುಗಳ ದಂಧೆ ಮೂಲಕ ದೊಡ್ಡಮಟ್ಟದಲ್ಲಿ ಹಣ ಮಾಡಿದ್ದ. ಕಾಲೇಜು ವಿದ್ಯಾರ್ಥಿಗಳು ಸೇರಿ ಬೆಂಗಳೂರು ಮತ್ತಿತರ ಕಡೆ ವ್ಯವಸ್ಥಿತವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ರೂಪಿಸಿ ಬೆಂಗಳೂರಿನ ಎಂಎಸ್ ಪಾಳ್ಯದಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿತ್ತು. ವಿದೇಶಿ ಪ್ರಜೆ ಹಸ್ತಾಂತರ ಪ್ರಕ್ರಿಯೆ ಅನುಸಾರ ಸ್ವಂತ ದೇಶಕ್ಕೆ ಹಸ್ತಾಂತರಿಸಲಾಗಿದೆ.
ಸಾಧಿಕ್ ಪಾಷಾ, ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ