Annual Special Camp 
ಬೆಂಗಳೂರು ಗ್ರಾಮಾಂತರ

ಮಹಿಳಾ ರಕ್ಷಣೆಗೆ ಸದಾ ಸಿದ್ದ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಹಿಳೆಯರ ಹಿತರಕ್ಷಣೆಗಾಗಿ ದೊಡ್ಡಬಳ್ಳಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆ ಸ್ಥಾಪನೆಯಾಗಿದ್ದು ಹೆಣ್ಣು ಮಕ್ಕಳು ಯಾವುದೇ ತೊಂದರೆಗೊಳಗಾದರೆ ಯಾವುದೇ ಭಯವಿಲ್ಲದೆ ಠಾಣೆಗೆ ದೂರು ನೀಡುವ ಮೂಲಕ ನ್ಯಾಯಪಡೆಯಬಹುದು ಎಂದು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಪಂಕಜಾ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ದೊಡ್ಡತಿಮ್ಮನಹಳ್ಳಿ ಗ್ರಾಮದಲ್ಲಿ ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೌಟುಂಬಿಕ ಕಲಹಗಳಲ್ಲಿ ಮಹಿಳೆಯರ ಮೇಲಾಗುವ ಮಾನಸಿಕ ಕಿರುಕುಳ, ದೈಹಿಕ ಹಲ್ಲೆಯಂತಹ ಪ್ರಕರಣಗಳನ್ನು ಪತ್ತೆಹಚ್ಚಲು ತಾಲೂಕಿನಾದ್ಯಂತ ಗಸ್ತು ವಾಹನದ ಮೂಲಕ ಗಸ್ತು ವ್ಯವಸ್ಥೆ ಮಾಡಲಾಗಿದೆ. ಹೀಗೆ ಗಸ್ತು ಹಾಕುವ ವಾಹನ ಗಮನಿಸುವ ಜನರು ಸ್ಥಳೀಯವಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಮಾಹಿತಿ ನೀಡಬಹುದಾಗಿದೆ ಎಂದರು.
ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ (ಪೋಕ್ಸೊ), ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಹಿಳೆಯನ್ನು ಅಸಭ್ಯವಾಗಿ ಜಾಹೀರುಗೊಳಿಸುವುದು, ಬಾಲ ನ್ಯಾಯಮಂಡಳಿ ಕಾಯ್ದೆ ಸೇರಿ ಮಹಿಳೆ, ಹಿರಿಯ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ತನಿಖೆಯನ್ನು ಈ ಮಹಿಳಾ ಠಾಣೆಯಲ್ಲಿ ನಡೆಸಲಾಗುತ್ತದೆ. ಯಾವುದೇ ಸಮಸ್ಯೆ ಉಂಟಾದರೆ ಯಾವುದೇ ಭಯವಿಲ್ಲದೇ ಕೂಡಲೇ ದೂರು ನೀಡಬೇಕು ಎಂದು ತಿಳಿಸಿದರು.
ತಲೆಯೆತ್ತಿ ಬದುಕು ಸಾಗಿಸುವ ಉದ್ದೇಶ:
ಮಹಿಳೆಯರಲ್ಲಿ ಭಯದ ವಾತಾವರಣ ನಿವಾರಿಸಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಜತೆಗೆ ಮಹಿಳೆಯರು ಧೈರ್ಯದಿಂದ ಸಮಾಜದಲ್ಲಿ ತಲೆಯೆತ್ತಿ ಬದುಕು ಸಾಗಿಸಬೇಕೆಂಬ ಸದುದ್ದೇಶದಿಂದ ಮಹಿಳಾ ಠಾಣೆಯನ್ನು ಸ್ಥಾಪಿಸಲಾಗಿದೆ ಎಂದು ಪಂಕಜಾ ತಿಳಿಸಿದರು. ಕರ್ನಾಟಕ ಪೊಲೀಸ್ ಇಲಾಖೆಯ ’ಆಸರೆ’ ಯೋಜನೆಯು ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಒಂದು ಪ್ರಮುಖ ಸಮುದಾಯ ಪೊಲೀಸ್ ಉಪಕ್ರಮವಾಗಿದೆ. ಇದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧರ ಮನೆಗಳಿಗೆ ನಿಯಮಿತ ಭೇಟಿ ನೀಡುವುದು, ದೌರ್ಜನ್ಯ ತಡೆ, ಆರೋಗ್ಯ ನೆರವು ಮತ್ತು ಆತ್ಮವಿಶ್ವಾಸ ಮೂಡಿಸಲಾಗತ್ತದೆ ಎಂದರು.
ಸಹಾಯವಾಣಿ ಮಾಹಿತಿ:
ಪೊಲೀಸ್ ಸಿಬ್ಬಂದಿ ರಾಜೇಶ್ವರಿ ತುರ್ತು ಸಹಾಯವಾಣಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ತುರ್ತು ಸಹಾಯವಾಣಿ 181- ಅಕ್ಕಪಡೆ ಸಹಾಯವಾಣಿ, 1098- ಮಕ್ಕಳ ಸಹಾಯವಾಣಿ, 1930- ಸೈಬರ್ ಕ್ರೈಂ ಸಹಾಯವಾಣಿ, 1090- ಹಿರಿಯ ನಾಗರಿಕ ಸಹಾಯವಾಣಿ, 112- ಪೊಲೀಸ್ ಸಹಾಯವಾಣಿ, 1091- ಮಹಿಳಾ ಸಹಾಯವಾಣಿ, 15100- ಉಚಿತ ಕಾನೂನು ಸೇವೆಗಳ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.