akka pade 
ಬೆಂಗಳೂರು ಗ್ರಾಮಾಂತರ

ಅಕ್ಕಪಡೆ ಮಿಂಚಿನ ಸಂಚಲನ

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಸಾರ್ವಜನಿಕ ಸ್ಥಳ, ಕೆಲಸದ ಸ್ಥಳ, ವಿದ್ಯಾಸಂಸ್ಥೆಗಳು ಹಾಗೂ ಆನ್‌ಲೈನ್‌ನಲ್ಲಿ ಮಹಿಳೆಯರ ವಿರುದ್ಧ ನಡೆಯುವ ಕಿರುಕುಳ, ಹಿಂಬಾಲನೆ (ಸ್ಟಾಕಿಂಗ್) ಹಾಗೂ ಈವ್ ಟೀಸಿಂಗ್ ತಡೆಗಟ್ಟುವುದು ಸೇರಿ
ಗುಪ್ತ ನಿಗಾವಳಿ ಮೂಲಕ ಅಪರಾಧಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಾರಿಯಾಗಿರುವ ಅಕ್ಕಪಡೆ ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.
ದೊಡ್ಡಬಳ್ಳಾಪುರ ಮಹಿಳಾ ಠಾಣೆ ಇನ್‌ಸ್ೆಕ್ಟರ್ ನವೀನ್‌ಕುಮಾರ್ ನೇತೃತ್ವದಲ್ಲಿ ನಾಲ್ವರು ಮಹಿಳಾ ಹೋಮ್‌ಗಾರ್ಡ್‌ಗಳು, ಇಬ್ಬರು ಮಹಿಳಾ ಕಾನ್ಸ್‌ಟೇಬಲ್ ಸೇರಿ ಪಿಎಸ್‌ಐ, ಎಎಸ್‌ಐ ನೇತೃತ್ವದಲ್ಲಿ ಸಜ್ಜಾಗಿರುವ ಜಿಲ್ಲಾ ಅಕ್ಕಪಡೆ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ಎರಡು ಕಡೆ ನಡೆಯಬೇಕಿದ್ದ ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿರುವುದು, ವೇಶ್ಯಾವಾಟಿಕೆ ದಂಧೆ ತಡೆದು ಸಂತ್ರಸ್ತೆಯರನ್ನು ರಕ್ಷಣೆ ಮಾಡಿರುವುದು, 10 ಕ್ಕೂ ಹೆಚ್ಚು ಬಾಲ್ಯಕಾರ್ಮಿಕರ ರಕ್ಷಣೆ ಸೇರಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು, ಕೈಗಾರಿಕಾ ಪ್ರದೇಶಗಳಲ್ಲಿ ರೌಂಡ್ಸ್ ಮೂಲಕ ಮಹಿಳೆಯಲ್ಲಿ ಸುರಕ್ಷತಾ ಭಾವನೆ ಮೂಡಿಸುವುದು ಸೇರಿ ಹಲವು ಪೊಲೀಸಿಂಗ್ ಕಾರ್ಯದಲ್ಲಿ ಅಕ್ಕಪಡೆ ಹೆಸರುಗಳಿಸಿದೆ.
ಬಾಲ್ಯವಿವಾಹ ತಡೆ:
ದೊಡ್ಡಬಳ್ಳಾಪುರ ತಾಲೂಕು ಎಳ್ಳುಪುರ ಗ್ರಾಮದಲ್ಲಿ 17 ವರ್ಷದ ಬಾಲಕಿಗೆ ಬಾಲ್ಯವಿವಾಹ ನಡೆಸುತ್ತಿರುವ ಮಾಹಿತಿ ಪಡೆದ ಅಕ್ಕಪಡೆ ತಕ್ಷಣ ಕಾರ್ಯಪ್ರವೃತ್ತರಾಗಿ ಬಾಲ್ಯವಿವಾಹವನ್ನು ತಡೆದು ಬಾಲಕಿಯನ್ನು ತಾತ್ಕಾಲಿಕ ಆಶ್ರಯಕ್ಕಾಗಿ ದೇವನಹಳ್ಳಿಯ ಬಾಲಮಂದಿರಕ್ಕೆ ರವಾನಿಸಿದೆ ಅದೇ ರೀತಿ ಹೊಸಕೋಟೆ ತಾಲೂಕು ನಂದಗುಡಿಯಲ್ಲಿಯೂ ಬಾಲ್ಯವಿವಾಹ ತಡೆಯುವಲ್ಲಿ ಅಕ್ಕಪಡೆ ಪ್ರಮುಖಪಾತ್ರ ವಹಿಸಿದೆ.
ವೇಶ್ಯವಾಟಿಕೆಯಲ್ಲಿ ಸಂತ್ರಸ್ತೆಯರ ರಕ್ಷಣೆ:
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಅಕ್ಕಪಡೆ ಸಿಬ್ಬಂದಿ ವೇಶ್ಯವಾಟಿಕೆಯಲ್ಲಿ ಬಲವಂತವಾಗಿ ತೊಡಗಿಕೊಂಡಿದ್ದ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಯಶ ಕಂಡಿದೆ. ಅಪರಾಧಿಗಳ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟುವಲ್ಲಿ ಅಕ್ಕಪಡೆ ಗಟ್ಟಿತನ ಪ್ರದರ್ಶಿಸಿದೆ.
ಬಾಲಕಾರ್ಮಿಕರ ರಕ್ಷಣೆ:
ಕಾರ್ಖಾನೆಯೊಂದರಲ್ಲಿ ಗುಪ್ತವಾಗಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡು ಅವರ ಬಾಲ್ಯವನ್ನು ಕಸಿಯುತ್ತಿದ್ದ ಮಾಹಿತಿ ಪಡೆದ ಅಕ್ಕ ಪಡೆ ದಾಳಿ ನಡೆಸಿ ಐವರು ಮಕ್ಕಳನ್ನು ರಕ್ಷಣೆ ಮಾಡಿ ಬಾಲಮಂದಿರಕ್ಕೆ ರವಾನಿಸಿ ಅವರ ಪಾಲಕರ ಮಡಿಲಿಗೆ ಒಪ್ಪಿಸುವಲ್ಲಿ ಯಶ ಕಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಎಲ್ಲಿಯಾದರೂ ಬಾಲಕಾರ್ಮಿಕರನ್ನು ದುಡಿಸಿಕೊಳ್ಳಲು ಮುಂದಾದರೆ ಅಕ್ಕಪಡೆ ಅಲ್ಲಿಗೆ ಹಾಜರಾಗಲಿದೆ ಎಂಬ ಸಂದೇಶ ರವಾನಿಸಿದೆ.
ಜಾಗೃತಿ ಕಾರ್ಯಕ್ರಮಗಳು ಹೆಚ್ಚು:
ಶಾಲಾ ಕಾಲೇಜು ಸೇರಿ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಿರುವ ಜಿಲ್ಲಾ ಅಕ್ಕಪಡೆ ಅಲ್ಲಿ ವಿದ್ಯಾರ್ಥಿಗಗಳಿಗೆ ಕಾನೂನು ಪಾಠ ಮಾಡುತ್ತಿದೆ. ದುಶ್ಚಟಗಳಿಂದ ದೂರವಿರುವುದು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸೇರಿ ಕಾನೂನಿನ ಬಗ್ಗೆ ಸಮರ್ಪಕ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ, ಎಲ್ಲಿಯಾದರೂ ಕಿಡಿಗೇಡಿ ಕೃತ್ಯಗಳು ಕಂಡುಬಂದರೆ ತಕ್ಷಣ ಅಕ್ಕಪಡೆಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಕೈಗಾರಿಕಾ ವಲಯಗಳಲ್ಲಿ ರೌಂಡ್ಸ್:
ಜಿಲ್ಲೆಯಲ್ಲಿನ ಕೈಗಾರಿಕಾ ವಲಯಗಳಲ್ಲಿ ಅತೀ ಹೆಚ್ಚು ಗಸ್ತು ತಿರುಗುತ್ತಿರುವ ಅಕ್ಕಪಡೆ ಮಹಿಳೆಯರಲ್ಲಿ ಸುರಕ್ಷತಾ ಭಾವನೆ ಮೂಡಿಸುವಲ್ಲಿ ಯಶ ಕಂಡಿದೆ. ಗಾರ್ಮೆಂಟ್ಸ್ ಸೇರಿ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಮಹಿಳೆಯರೊಂದಿಗೆ ವಿಚಾರ ವಿನಿಮಯ ನಡೆಸುವುದು, ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ ಎಂಬ ಭಾವನೆ ಮೂಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅಕ್ಕಪಡೆ ಬಗ್ಗೆ ಹೆಚ್ಚಿನ ಅಭಿಮಾನ ಮೂಡುವಂತೆ ಮಾಡಿದೆ.
ಅಕ್ಕಪಡೆಯ ಉದ್ದೇಶವನ್ನು ಸಮರ್ಥವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದು ಜಿಲ್ಲೆಯಲ್ಲಿ ಇದು ಸಾಕಷ್ಟು ಯಶಕಂಡಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿ ತಕ್ಷಣ ದೂರು ನೀಡಲು ಪ್ರೋತ್ಸಾಹಿಸುವುದು. ಸಲಹೆ-ಮಾರ್ಗದರ್ಶನ ಮೂಲಕ ಸುಧಾರಿಸುವುದು.
ಶಾಲಾ-ಕಾಲೇಜು ಹಾಗೂ ಕೆಲಸದ ಸ್ಥಳಗಳಲ್ಲಿ ಜಾಗೃತಿ ಮತ್ತು ಆತ್ಮರಕ್ಷಣೆ ಕಾರ್ಯಕ್ರಮಗಳನ್ನು ನಡೆಸುವುದು ಸೇರಿ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಅಕ್ಕಪಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನವೀನ್‌ಕುಮಾರ್, ಇನ್‌ಸ್ೆಕ್ಟ್ ದೊಡ್ಡಬಳ್ಳಾಪುರ ಮಹಿಳಾ ಠಾಣೆ