ajola plant 
ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಶ್ರೀ 200 ಅಜೋಲಾ ಟಕ

ಶಿವರಾಜ.ಎಂ
ಶಿವರಾಜ.ಎಂ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ 4 ತಾಲೂಕು ವ್ಯಾಫ್ತಿಯಲ್ಲಿ ಜಾನುವಾರುಗಳಿಗೆ ಪೌಷ್ಠಿಕ ಪೂರಕ ಮೇವು ಒದಗಿಸುವ ನಿಟ್ಟಿನಲ್ಲಿ 200 ಅಜೋಲ ಟಕಗಳನ್ನು ಸ್ಥಾಪಿಸಲು ಪಶುಪಾಲನ ಇಲಾಖೆ ಮುಂದಾಗಿದೆ.
ಜಾನುವಾರುಗಳಿಗೆ, ಅದರಲ್ಲೂ ವಿಶೇಷವಾಗಿ ಹಾಲು ನೀಡುವ ಹಸುಗಳಿಗೆ ಸ್ಥಳಿಯವಾಗಿಯೇ ಪೌಷ್ಟಿಕ ಪೂರಕ ಮೇವನ್ನು ಒದಗಿಸುವ ಸಲುವಾಗಿ ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವೆಗಳ ಇಲಾಖೆಯು ಅಜೋಲಾ ಉತ್ಪಾದನಾ ಘಟಕಗಳನ್ನು ಉತ್ತೇಜಿಸಲು ಮಹತ್ವದ ಯೋಜನೆ ಹಮ್ಮಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಬಯಲು ಸೀಮೆ ಜಿಲ್ಲೆಯಾಗಿದ್ದು ಮಳೆಯಾಶ್ರಿತ ಕೃಷಿ ಚಟುವಟಿಕೆಯನ್ನು ಆಶ್ರಯಿಸಿದೆ, ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯಲ್ಲೂ ಜಿಲ್ಲೆ ಪ್ರಗತಿ ಸಾಧಿಸುತ್ತಿದ್ದು ಈ ನಿಟ್ಟಿನಲ್ಲಿ ಅಜೋಲ ಪರಿಕಲ್ಪನೆ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂರಕ ಆಹಾರ:
ಮಳೆಯ ಅಭಾವ, ಹಸಿರು ಮೇವಿನ ಕೊರತೆಯಂಥ ಸಂದರ್ಭಗಳಲ್ಲಿ ಪ್ರೋಟಿನ್​, ಖನಿಜಾಂಶಗಳು ಸೇರಿ ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಅಜೋಲಾವನ್ನು ಪೂರಕ ಆಹಾರವಾಗಿ ಬಳಸಬಹುದಾಗಿದೆ. ಈ ಯೋಜನೆಯಡಿ 6.30 ಲಕ್ಷ ರೂ.ವೆಚ್ಚದಲ್ಲಿ ಟಕಗಳ ಸ್ಥಾಪನೆಗೆ ಅಂದಾಜು ವೆಚ್ಚ ನಿಗಧಿಪಡಿಸಲಾಗಿದೆ. ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಜಿಲ್ಲೆಯಲ್ಲಿ ಭೌತಿಕ ಮತ್ತು ಆರ್ಥಿಕ ಗುರಿ ನಿಗದಿಪಡಿಸಲಾಗಿದೆ.
ರೈತರ ಮನೆ ಅಥವಾ ಕೊಟ್ಟಿಗೆಗಳಲ್ಲಿ ಟಕ:
ಈ ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಸ್ಥಳದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ ಅಳತೆಯಲ್ಲಿ ಘಟಕ ನಿರ್ಮಿಸಲಾಗುತ್ತದೆ. ಪ್ರತಿ ಘಟಕದ ಒಟ್ಟು ವೆಚ್ಚ 3,150 ರೂಪಾಯಿಆಗಲಿದ್ದು ಇದರಲ್ಲಿ ಸಾಮಗ್ರಿ ಹಾಗೂ ಕೂಲಿ ವೆಚ್ಚ ಸೇರಿದೆ. ಶೇ.80 ನೆರಳು ಬಲೆ ಮತ್ತು ಬಿದಿರು ಇರಲಿದೆ, ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್​ ಫಾಸ್ಫೇಟ್​ ಮಿಶ್ರಣದಲ್ಲಿ ಮಾಡಲಾಗುತ್ತದೆ. ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆ ಕೆಲಸಕ್ಕಾಗಿ 2 ಮಾನವ ದಿನಗಳ ಕೂಲಿ ವೆಚ್ಚ (ದರ ದಿನಕ್ಕೆ 350 ರೂ. ನಂತೆ) 700 ರೂಪಾಯಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈನುಗಾರರಿಗೆ ತರಬೇತಿ:
ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಾಲೂಕು ಮತ್ತು ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಿ, ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಇರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಲಾಗುತ್ತದೆ. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸಿದರೆ ಮಾಲಿನ್ಯಕಾರಕಗಳ ಅಪಾಯವಿರುವುದರಿಂದ ಕೇವಲ ಸ್ವಚ್ಛ ನೀರು ಲಭ್ಯವಿರುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ದು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ಕುರಿತು ತಾಂತ್ರಿಕ ತರಬೇತಿ ನೀಡಲಾಗುತ್ತದೆ.
ಪ್ರತಿ ತಿಂಗಳು ಪ್ರಗತಿ ವಿವರ ಸಲ್ಲಿಕೆ:
ಈ ಯೋಜನೆಯನ್ನು ವಿಬಿ ಜೀ ರಾಮ್​ಜಿ ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗೊಳೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ. ಪ್ರತಿ ಘಟಕದ ಫಲಾನುಭವಿಯ ವಿವರಗಳು, ಆಧಾರ್​, ಜಿಪಿಎಸ್​ ಸ್ಥಳ, ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಜಿಲ್ಲಾ ಉಪ ನಿರ್ದೇಶಕರು ಮಾಸಿಕ ವೇಳಾಪಟ್ಟಿ ಸಿದ್ಧಪಡಿಸಿ ಅನುಷ್ಠ್ಠಾನಗೊಳಿಸಲಿದ್ದು, ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪ್ರಗತಿ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸಬೇಕೆಂದು ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವೆಗಳ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ಜಾನುವಾರುಗಳಿಗೆ, ಅದರಲ್ಲೂ ವಿಶೇಷವಾಗಿ ಹಾಲು ನೀಡುವ ರಾಸುಗಳಿಗೆ ಸ್ಥಳಿಯವಾಗಿಯೇ ಪೌಷ್ಟಿಕ ಪೂರಕ ಮೇವು ಒದಗಿಸುವ ಯೋಜನೆ ಇದಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ 200 ಅಜೋಲ ಟಕ ಸ್ಥಾಪನೆಗೆ ಪ್ರಸ್ಥಾಪನೆ ಇದೆ. ಇನ್ನು ಹೆಚ್ಚಿನ ಟಕಗಳ ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ. ಈ ಬಗ್ಗೆ ಹೈನುಗಾರರಿಗೆ ಅಗತ್ಯ ಪರಿಕರ ಸೇರಿ ಮಾರ್ಗದರ್ಶನ ನೀಡಲಾಗುತ್ತದೆ. ವಿಬಿ ಜೀ ರಾಮ್​ಜಿ ಯೋಜನೆಯಡಿ ಇದು ಕಾರ್ಯಗತವಾಗಲಿದೆ.
> ರವಿಕುಮಾರ್​, ಉಪನಿರ್ದೇಶಕ ಪಶುಪಾಲನ ಇಲಾಖೆ ಬೆಂ.ಗ್ರಾಮಾಂತರ