ಬೆಂಗಳೂರು ಗ್ರಾಮಾಂತರ: ಮಧ್ಯಪ್ರಾಚ್ಯ ದೇಶಗಳ ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಸರಕು ಸೇವೆಗಳಲ್ಲಿ ತೀವ್ರ ವ್ಯತ್ಯಯವಾಗಿದ್ದು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗ್ರಾಮಾಂತರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ಜಿಲ್ಲೆಗಳಿಂದ ರಪ್ತಾಗುತ್ತಿದ್ದ ಹಣ್ಣು, ತರಕಾರಿ ರಪ್ತುದಾರಿಗೆ ತೀವ್ರ ನಷ್ಟ ಎದುರಾಗಿದೆ ಎನ್ನಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಗಲ್ಪ್ ರಾಷ್ಟ್ರಗಳಿಗೆ ಪ್ರತಿನಿತ್ಯ 15 ರಿಂದ 20 ಟನ್‌ನಷ್ಟು ಪ್ರಮಾಣದ ಹೂವು ರಪ್ತಾಗುತ್ತದೆ. ಆದರೆ ಕಳೆದೊಂದು ವಾರದಿಂದ ಹೂವಿನ ರಪ್ತಿನಲ್ಲಿ ಭಾರಿ ವ್ಯತ್ಯಯವಾಗಿದ್ದು ಹೂ ಬೆಳೆಗಾರರು ಸೇರಿ ರಪ್ತು ವಹಿವಾಟಿನ ಎಲ್ಲರಿಗೂ ನಷ್ಟ ಎದರಾಗಿದೆ. ವಾರದಿಂದೀಚೆಗೆ ಕೋಟ್ಯಂತರ ರೂ.ವಹಿವಾಟಿಗೆ ಹೊಡೆತ ಬಿದ್ದಿದೆ ಎನ್ನಲಾಗಿದೆ.
ಗಲ್ಫ್ಗೆ ವಿಮಾನ ಸರಕು ಸೇವೆಗಳು ಸ್ಥಗಿತಗೊಳಿಸಿರುವುದರಿಂದ ಬಾಳೆಹಣ್ಣು, ದಾಕ್ಷಿ, ದಾಳಿಂಬೆಯಂತ ಪ್ರಮುಖ ಉತ್ಪನ್ನಗಳ ರಪ್ತಿನಲ್ಲಿ ತೀವ್ರತರವಾದ ಏರುಪೇರು ಉಂಟಾಗಿದೆ. ರಂಜಾನ್ ವೇಳೆ ದೊಡ್ಡ ಪ್ರಮಾಣದಲ್ಲಿ ಹಣ್ಣು ತರಕಾರಿ ರಪ್ತಾಗುತ್ತಿತ್ತು. ಯುದ್ದದ ಹಿನ್ನೆಲೆಯಲ್ಲಿ ಇದೆಲ್ಲಕ್ಕೂ ಹೊಡೆತ ಬಿದ್ದಿದೆ. ಗಲ್ಪ್ ರಾಷ್ಟ್ರಗಳಿಂದಲೂ ಬೇಡಿಕೆ ಇಲ್ಲವಾಗಿರುವುದರಿಂದ ರೈತರು ಹಾಗೂ ರಪ್ತುದಾರರ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ ಎಂಬ ಮಾತು ಕೇಳಿಬರುತ್ತಿದೆ.