ADHR 
ಬೆಂಗಳೂರು ಗ್ರಾಮಾಂತರ

ಮಕ್ಕಳ ಭವಿಷ್ಯಕ್ಕೆ ಬೇಕಿದೆ ಆಧಾರ್

ಶಿವರಾಜ.ಎಂ

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಲಸೆ ಕಾರ್ಮಿಕರ ಮಕ್ಕಳ ಬಳಿ ಆಧಾರ್ ಕಾರ್ಡ್ ಇಲ್ಲದಿರುವುದು ಮುಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಲಿದೆ ಎಂಬ ನಿಟ್ಟಿನಲ್ಲಿ ಆಧಾರ್‌ಕಿಟ್ ಮೂಲಕ ಆಧಾರ್ ಕಾರ್ಡ್ ಸಿದ್ದಪಡಿಸಲು ಜಿಲ್ಲಾಡಳಿತ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಹೌದು..! ಸಾವಿರಾರು ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಧಾರ್ ಕಾರ್ಡ್ ಇಲ್ಲದಿರುವುದು ದೊಡ್ಡ ಅಡ್ಡಿಯಾಗುತ್ತಿದೆ. ಇತ್ತೀಚಿಗೆ ಶಿಕ್ಷಣ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಮಕ್ಕಳಿಗೆ ಆಧಾರ್‌ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಯಾ ಶಾಲಾ ವ್ಯಾಪ್ತಿಯಲ್ಲಿಯೇ ಅಂಥ ಮಕ್ಕಳಿಗೆ ಆಧಾರ್‌ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆಸುವ ಬಗ್ಗೆ ಜಿಲ್ಲಾಡಳಿತ ಅಗತ್ಯಕ್ರಮಕ್ಕೆ ಮುಂದಾಗಿದೆ.
ಸೌಲಭ್ಯಗಳಿಗೆ ಆಧಾರ್ ಕಡ್ಡಾಯ:
ಪ್ರಸ್ತುತ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಧಾರ್ ಕಾಡ್ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಇದರ ಮೂಲಕವೇ ಸರ್ಕಾರದ ಅನೇಕ ಯೋಜನೆಗಳನ್ನು ಜೋಡಿಸಲಾಗಿದೆ. ಶಾಲಾ ದಾಖಲಾತಿ, ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಸರ್ಕಾರಿ ಸೌಲಭ್ಯಗಳು, ಬ್ಯಾಂಕ್ ಖಾತೆ ತೆರೆಯಲು, ವಿದ್ಯಾರ್ಥಿಗಳ ಗುರುತು ಪರಿಶೀಲನೆ, ವಿವಿಧ ಸರ್ಕಾರಿ ಡೇಟಾಬೇಸ್‌ಗಳೊಂದಿಗೆ ಮಾಹಿತಿ ಹೊಂದಾಣಿಕೆ ಸೇರಿ ಹಲವು ಕೆಲಸಗಳಲ್ಲಿ ಆಧಾರ್ ಪ್ರಮುಖ ಮಾನದಂಡವಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಗುವಂತೆ ತಾಕೀತು ಮಾಡಿದೆ.
ಆಧಾರ್ ಅಸ್ತವ್ಯಸ್ಥ:
ಹಲವು ಮಕ್ಕಳಿಗೆ ಆಧಾರ್ ಕಾರ್ಡ್ ಇಲ್ಲದಿರುವ ಸಮಸ್ಯೆಯಾದರೆ ಮತ್ತಷ್ಟು ಮಕ್ಕಳ ಆಧಾರ್‌ಕಾರ್ಡ್‌ನಲ್ಲಿನ ಹೆಸರು, ವಿಳಾಸ ಮತ್ತಿತರ ಅಂಶಗಳು ಗೊಂದಲಮಯವಾಗಿದ್ದು, ಇದೂ ಸಹ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಕ್ಷರದೋಷದಿಂದ ಹಿಡಿದು ಅಸಮರ್ಪಕ ವಿಳಾಸ, ಪಿನ್‌ಕೋಡ್‌ಗಳು ಮುದ್ರಿತವಾಗಿದ್ದು, ಇದೂ ಸಹ ಮುಂದಿನ ದಿನಗಳಲ್ಲಿ ಇಂಥ ಮಕ್ಕಳಿಗೆ ಅನೇಕ ವಿಷಯದಲ್ಲಿ ತೊಂದರೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ,ಆಧಾರ್‌ನಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ ಹಾಗೂ ಇತರ ಮಾಹಿತಿಗಳಲ್ಲಿನ ವ್ಯತ್ಯಾಸಗಳಿಂದ ವಿದ್ಯಾರ್ಥಿಗಳು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿವೇತನ, ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ ವಿತರಣೆ ಸೇರಿ ಹಲವು ಯೋಜನೆಗಳ ಅನುಷ್ಠಾನದಲ್ಲೂ ಈ ಸಮಸ್ಯೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಅಗತ್ಯ ದಾಖಲೆಗಳ ಕೊರತೆ:
ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕುಗಳಲ್ಲಿ ಕೈಗಾರಿಕೆಗಳು, ಕೃಷಿ, ಇಟ್ಟಿಗೆ ಕಾರ್ಖಾನೆಗಳು, ಗೋದಾಮುಗಳು ಹಾಗೂ ಹೋಟೆಲ್ ಉದ್ಯಮಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ, ಅಸ್ಸಾಂ ಸೇರಿ ವಿವಿಧ ರಾಜ್ಯಗಳಿಂದ ಬಂದಿರುವ ಕಾರ್ಮಿಕರ ಮಕ್ಕಳಿಗೆ ಆಧಾರ್ ಸೇರಿ ಮೂಲ ದಾಖಲೆಗಳೇ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಆಧಾರ್ ನೋಂದಣಿ ಮಾಡಿಸುವುದೂ ಸಹ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಇಂತಹ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮಾಡಲಾಗುತ್ತಿದ್ದರೂ, ಅವರ ದಾಖಲೆಗಳನ್ನು ಶಿಕ್ಷಣ ಇಲಾಖೆಯ ವ್ಯವಸ್ಥೆಗೆ ಅಪ್‌ಲೋಡ್ ಮಾಡುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಪಾಲಕರ ಬಳಿಯೂ ಅಗತ್ಯ ದಾಖಲೆಗಳ ಕೊರತೆಯಿಂದ ಹೊಸ ಆಧಾರ್ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಅಧಿಕಾರಿಗಳು ಆದ್ಯತೆ ನೀಡಬೇಕು:
ಸರ್ಕಾರದ ಬಹುತೇಕ ವಿದ್ಯಾರ್ಥಿ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಯಾವುದೇ ಮಗು ದಾಖಲೆಗಳ ಕೊರತೆಯಿಂದ ಸೌಲಭ್ಯಗಳಿಂದ ವಂಚಿತರಾಗಬಾರದು. ಗ್ರಾಮ ಮಟ್ಟದಲ್ಲೇ ವಿಶೇಷ ಶಿಬಿರಗಳನ್ನು ನಡೆಸಿ ಎಲ್ಲ ಮಕ್ಕಳಿಗೂ ಆಧಾರ್ ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸುವತ್ತ ಅಧಿಕಾರಿಗಳು ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಆಧಾರ್‌ಕಾರ್ಡ್ ಇಲ್ಲದಿರುವ ಬಗ್ಗೆ ಮಾಹಿತಿ ಬಂದಿದ್ದು ಜಿಲ್ಲಾಡಳಿತದಿಂದಲೇ ಆಧಾರ್‌ಕಿಟ್ ಪೂರೈಸಿ ಅಂಥ ಮಕ್ಕಳಿಗೆ ಕಾರ್ಡ್ ಮಾಡಿಕೊಡುವ ಬಗ್ಗೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿ ಪಡೆದು ಅಗತ್ಯಕ್ರಮಕೈಗೊಳ್ಳಲಾಗುವುದು.
ಡಾ.ಕೆ.ಎನ್.ಅನುರಾಧಾ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ