ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಹೊಸಕೋಟೆಯಿಂದ ದಾಬಸ್‌ಪೇಟೆಗೆ ಸಾಗುವ ಎಂ.ಸತ್ಯವಾರ ಹಾಗೂ ಕಂಬಳಿಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರ ಪಾಲಿಗೆ ಯಮರೂಪಿ ಹೆದ್ದಾರಿಯಾಗಿ ರೂಪುಗೊಂಡಿದೆ.
ಕಳೆದ ಮೂರು ವರ್ಷದ ಅವಧಿಯಲ್ಲಿ ಈ ಭಾಗದಲ್ಲಿ ಸಂಭವಿಸಿರುವ ಅಪಘಾತಗಳ ಸಂಖ್ಯೆಯಿಂದ ಇಂಥ ಆತಂಕ ಸೃಷ್ಟಿಸಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಈ ಭಾಗದಲ್ಲಿ 42 ಅಪಘಾತಗಳು ಸಂಭವಿಸಿದ್ದು 23 ಮಂದಿ ಬಲಿಯಾಗಿದ್ದಾರೆ. 28 ಮಂದಿ ಮಾರಣಾಂತಿಕವಾಗಿ ಗಾಯಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಬಳಿಕ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಕುಖ್ಯಾತಿ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿ ಗಳಿಸಿದೆ. ಅವೈಜ್ಞಾನಿಕ ತಿರುವುಗಳು, ಸೂಚನಾ ಲಕಗಳಿಲ್ಲದಿರುವುದು, ವೇಗಮೀತಿ ನಿಯಂತ್ರಣದ ಬಗ್ಗೆ ಗಮನ ನೀಡದಿರುವುದು, ನೈಟ್ ವಿಷನ್ ಕ್ಯಾಮರಾಗಳಿಲ್ಲದಿರುವುದು, ಬ್ಯಾಟರಿ ಪ್ಯಾಕಪ್ ಇಲ್ಲದ ಕ್ಯಾಮರಾಗಳು, ಪೊಲೀಸ್ ಗಸ್ತು ಇಲ್ಲದಿರುವುದು, ತ್ರಿಪಥ ಹಾಗೂ ಚತುಷ್ಪಥ ರಸ್ತೆಗಳು ಏಕಾಏಕಿ ದ್ವಿಪಥ ರಸ್ತೆಗಳಿಗೆ ಸಂಪರ್ಕ ಹೊಂದಿರುವುದು ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸಲು ಪ್ರಮುಖ ಕಾರಣಗಳಾಗಿವೆ ಎಂಬ ಮಾತು ಕೇಳಿಬರುತ್ತಿದೆ.---
ಕಂಬಳಿಪುರ ಸೇತುವೆಯಿಂದ ದೇವನಹಳ್ಳಿಯ ವಿಶ್ವನಾಥಪುರದವರೆಗಿನ ರಸ್ತೆಯಲ್ಲಿ ಅಪಘಾತಗಳು ತೀರ ಸಾಮಾನ್ಯ ಸಂಗತಿ ಎನ್ನುವಂತಾಗಿದೆ. ಸಾದಪ್ಪನಹಳ್ಳಿ ಗೇಟ್, ಡಿಸಿ ಕಚೇರಿ ಬಳಿ, ನಲ್ಲೂರು ಟೋಲ್, ಎಂ.ಸತ್ಯವಾರ ಸೇತುವೆ, ಚಿಂತಾಮಣಿ ಗೇಟ್, ಕೊಳತೂರು ಗೇಟ್, ಚನ್ನಹಳ್ಳಿ ಡಾಬಾಗೇಟ್ ಪ್ರಮುಖವಾಗಿ ಅಪಘಾತ ಸ್ಥಳಗಳಾಗಿ ಗುರುತಿಸಿಕೊಂಡಿವೆ.
ಸೇತುವೆ ಕೊನೆಯಾಗುವಲ್ಲಿ ಕಿರಿದಾಗುವ ರಸ್ತೆ:
ಹೆದ್ದಾರಿ ಬಳಿ ಇರುವ ಹಳ್ಳಿಗಳು ಸಮೀಪಿಸುವ ಸೇತುವೆಗಳನ್ನು ಚತುಷ್ಪಥ ಹಾಗೂ ತ್ರಿಪಥ ರಸ್ತೆಗಳನ್ನಾಗಿ ನಿರ್ಮಿಸಲಾಗಿದೆ. ಆದರೆ ಸೇತುವೆ ಕೊನೆಗೊಳ್ಳುವ ಸ್ಥಳಗಳಲ್ಲಿ ದ್ವಿಪಥ ರಸ್ತೆಗಳು ಕಂಡಬರುತ್ತವೆ, ಇದರಿಂದ ವೇಗವಾಗಿ ಬರುವ ವಾಹನಗಳು ಕೊನೆಗೊಳ್ಳುವ ಕಿರಿದಾದ ರಸ್ತೆಗೆ ಸೇರುವಾಗ ಅಪಘಾತಗಳು ಸಂಭವಿಸುತ್ತವೆ ಎಂಬುದು ಈ ಭಾಗದ ಗ್ರಾಮಗಳ ಜನರ ಆತಂಕವಾಗಿದೆ.
ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ನಿರ್ಮಿಸಿರುವ ತಿರುವುಗಳು ಅವೈಜ್ಞಾನಿಕವಾಗಿದ್ದು ಅಪಘಾತಗಳಿಗೆ ಎಡೆಮಾಡಿಕೊಡುತ್ತಿವೆ. ವೇಗವಾಗಿ ಚಲಿಸುವ ವಾಹನಗಳು ಈ ಕಡಿದಾದ ತಿರುವುಗಳಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತವೆ ಇದರಿಂದ ಅಪಘಾತಗಳು ಸಂಭವಿಸುತ್ತವೆ, ಅದರಲ್ಲೂ ರಾತ್ರಿ ವೇಳೆ ಇಂಥ ತಿರುವುಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸಿವೆ ಎಂಬುದು ಸ್ಥಳೀಯರ ದೂರಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಡೆಗಳಲ್ಲಿ 80 ಕಿ.ಮೀ ಹಾಗೂ ಮತ್ತೆ ಹಲವು ಕಡೆಗಳಲ್ಲಿ 100 ಕಿ.ಮೀ ವೇಗಮಿತಿ ನಿಗಧಿಪಡಿಸಲಾಗಿದೆ. ಆದರೆ ಈ ಭಾಗದಲ್ಲಿ ಸಂಚರಿಸುವ ವಾಹನಗಳು 120 ರಿಂದ 160 ಕಿ.ಮೀ ವೇಗವಾಗಿ ಸಂಚರಿಸುತ್ತಿವೆ. ವೇಗಮೀತಿ ಮೀರಿದ ವಾಹನಗಳಿಗೆ ದಂಡ ವಿಧಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ. ಇಲ್ಲಿನ ಕ್ಯಾಮರಾಗಳಿಗೆ ಕೇವಲ ಸೋಲಾರ್ ವ್ಯವಸ್ಥೆ ಇದೆ. ಬ್ಯಾಟರಿ ಪ್ಯಾಕಪ್ ಇಲ್ಲದ ಕಾರಣ. ಹಲವು ವೇಳೆ ಕ್ಯಾಮರಾಗಳು ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ವೇಗಮೀತಿ ಮೀರಿ ಸಂಚರಿಸುವ ವಾಹನಗಳ ವಿರುದ್ಧ ಯಾವುದೇ ಕ್ರಮಗಳಾಗುತ್ತಿಲ್ಲ. ಕ್ಯಾಮರಾಗಳ ಮೇಲೆ ಧೂಳು ಮುಚ್ಚಿಕೊಂಡಿರುವುದರಿಂದ ದೃಶ್ಯಗಳು ಅಸ್ಪಷ್ಟವಾಗಿರುತ್ತವೆ ಎಂಬುದು ಅಧಿಕಾರಿಗಳ ಸರ್ವೆಯಲ್ಲಿ ತಿಳಿದುಬಂದಿದೆ.
ವೀಲಿಂಗ್‌ಗಳಿಗೂ ಕಡಿವಾಣ ಇಲ್ಲ:
ಇನ್ನೂ ವಾರಾಂತ್ಯಗಳಲ್ಲಿ ಪುಂಡರ ದಂಡೇ ನೆರೆಯುತ್ತದೆ, ದ್ವಿಚಕ್ರವಾಹಗಳನ್ನು ಅಪಾಯಕಾರಿಯಾಗಿ ಚಾಲನೆ ಮಾಡುತ್ತಾ ವೀಲಿಂಗ್ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ. ಇದರಿಂದ ಇನ್ನಿತರ ವಾಹನ ಸವಾರರ ಪ್ರಾಣಕ್ಕೂ ಸಂಚಾಕಾರ ತರುತ್ತಿದ್ದಾರೆ. ಇಷ್ಟಾದರೂ ಹೆದ್ದಾರಿಯಲ್ಲಿ ಪುಂಡರ ಹಾವಳಿ ತಡೆಗೆ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಹೆದ್ದಾರಿಯಲ್ಲಿ ಹಲವು ಬ್ಲ್ಯಾಕ್‌ಸ್ಟಾಟ್‌ಗಳನ್ನು ಗುರುತಿಸಲಾಗಿದೆ. ಎಲ್ಲೆಲ್ಲಿ ಸೂಚನಾಲಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಸಿಸಿ ಟಿವಿ ಕ್ಯಾಮರಾಗಳಿಗೆ ಬ್ಯಾಟರಿ ಪ್ಯಾಕಪ್ ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ತ್ರಿಪಥದಿಂದ ದ್ವಿಪಥಕ್ಕೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಬ್ಲಿಂಕಿಂಗ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಟೋಲ್‌ಗಳಲ್ಲಿ ಡೇಟಾ ಸಂಗ್ರಹಿಸಿ ದಿಢೀರ್ ವಾಹನಗಳ ತಪಾಸಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ವೆಂಕಟೇಶ್ ಪ್ರಸಾದ್, ಎಎಸ್‌ಪಿ ಬೆಂಗಳೂರು ಗ್ರಾಮಾಂತರ
ಇತ್ತೀಚೆಗೆ ಇದೇ ಪ್ರದೇಶದಲ್ಲಿ ಅಪಘಾತ ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈ ರಸ್ತೆ ಭಾಗ ಅಪಾಯಕಾರಿ ವಲಯವಾಗಿ ಗುರುತಿಸಿಕೊಂಡಿದೆ. ದುರ್ಘಟನೆಗಳು ಮರುಕಳಿಸದಿರಲಿಎಂಬ ಉದ್ದೇಶದಿಂದ ಗ್ರಾಮಸ್ಥರು ಸೇರಿ ಶಾಂತಿ ಪೂಜೆ ಆಯೋಜಿಸಿದ್ದರು. ಪೂಜೆಯ ಮೂಲಕ ದುಷ್ಟಶಕ್ತಿಗಳ ನಿವಾರಣೆ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಆದರೂ ದುರ್ಘಟನೆಗಳು ಮರುಕಳಿಸುತ್ತಿವೆ.
ಶ್ರೀಕಾಂತ್, ಎಂ.ಸತ್ಯವಾರ ನಿವಾಸಿ