accident  
ಬೆಂಗಳೂರು ಗ್ರಾಮಾಂತರ

ಕಂಪನಿ ಮುಖ್ಯಸ್ಥರೊಂದಿಗೆ ಗ್ರಾಪಂ ಮಾತುಕತೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಸೂಲಿಬೆಲೆ
ಹೊಸಕೋಟೆ ತಾಲೂಕು ಸೂಲಿಬೆಲೆ ಸಮೀಪದ ಬಾಲೇಪುರ ಕ್ರಾಸ್ ಬಳಿ ಜೂ.19 ರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣ ಸಂಬಂಧ ಸೂಲಿಬೆಲೆ ಪಂಚಾಯಿತಿ ಅಧಿಕಾರಿಗಳು ಸ್ಥಳೀಯ ಕಂಪನಿಗಳ ಮುಖ್ಯಸ್ಥರೊಂದಿಗೆ ಸಮಸ್ಯೆ ಪರಿಹಾರ ಸಂಬಂಧ ಮಾತುಕತೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಹಾಗೂ ಗ್ರಾಪಂ ಸಿಬ್ಬಂದಿ ಸೋಮವಾರ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಅಪಘಾತಕ್ಕೆ ಪ್ರಮುಖ ಕಾರಣವೇನು ಎಂಬುದರ ಬಗ್ಗೆ ತನಿಖೆ ಚುರುಕುಗೊಳಿಸಿದ್ದು ಮೃತರ ಕುಟುಂಬಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಗಳೇ ಹೊಣೆ:
ರಸ್ತೆ ಬದಿಗಳಲ್ಲಿ ಸ್ಥಳೀಯ ಕಂಪನಿಗಳ ಲಾರಿಗಳ ನಿಲುಗಡೆಯಿಂದ ಈ ಭಾಗದಲ್ಲಿ ಅಪಘಾತ ಪ್ರಕರಣಗಳಿಗೆ ಕಾರಣವಾಗುತ್ತಿದೆ. ಅಪಘಾತಕ್ಕೆ ಲಾರಿಗಳ ನಿಲುಗಡೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದರಿಂದ ಇನ್ನು ಮುಂದೆ ಈ ಭಾಗದಲ್ಲಿ ಕಂಪನಿಗಳಿಗೆ ಸಂಬಂಧಪಟ್ಟ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಗ್ರಾಪಂ ಸಿಬ್ಬಂದಿ ಸೂಚಿಸಿದ್ದಾರೆ ಎನ್ನಲಾಗಿದೆ. ಹೆದ್ದಾರಿಯಲ್ಲಿ ಬೀದಿದೀಪಗಳಿಲ್ಲದಿರುವುದು ರಾತ್ರಿ ವೇಳೆ ಅಪಘಡಗಳಿಗೆ ಕಾರಣವಾಗುತ್ತಿದೆ ಈ ನಿಟ್ಟಿನಲ್ಲಿ ಕಂಪನಿಗಳ ಸಿಎಸ್‌ಆರ್ ಅನುದಾನದಡಿ ಬೀದಿದೀಪಗಳನ್ನು ಅಳವಡಿಸುವಂತೆ ವ್ಯವಸ್ಥಾಪಕರಿಗೆ ತಾಕೀತು ಮಾಡಿದ್ದಾರೆ, ಈ ಭಾಗದಲ್ಲಿ ವಾಹನಗಳ ನಿಲುಗಡೆ ಮಾಡಿ ಇಂಥ ಅಪಘಾತಗಳಿಗೆ ಕಾರಣವಾದರೆ ಕಂಪನಿಗಳೆ ಹೊಣೆ ಹೊರಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಮುಖಾಮುಖಿ ಡಿಕ್ಕಿ:
ಸೂಲಿಬೆಲೆಯಿಂದ ದೇವನಹಳ್ಳಿ ಕಡೆಗೆ ಅರುಣ್ ತನ್ನ ಪತ್ನಿ ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೊಸಕೋಟೆ ಮಾರ್ಗವಾಗಿ ಬಂದ ಬಿಎಂಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಡಿಕ್ಕಿ ರಭಸಕ್ಕೆ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
ಬಾಲಕಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ:
ಬಿಎಂಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ಮುಖಾಮುಖಿ ಅಪಘಾತದಲ್ಲಿ ದ್ವಿಚಕ್ರವಾಹನದಲ್ಲಿದ್ದ ಪತಿ-ಪತ್ನಿ ಹಾಗೂ 2 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದರು. ದಂಪತಿಯ ಮತ್ತೊಬ್ಬ ಮಗಳು 5 ವರ್ಷದ ಅನುಷಿಕಾ ಗಂಭೀರ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ಪೊಲೀಸರ ಸಹಕಾರದೊಂದಿಗೆ ಸ್ಥಳೀಯರು ತಕ್ಷಣ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ತೀವ್ರ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಬಾಲಕಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಸೂಲಿಬೆಲೆ ಪೊಲೀಸರು ತಿಳಿಸಿದ್ದಾರೆ.