accident 
ಬೆಂಗಳೂರು ಗ್ರಾಮಾಂತರ

ಕೆಸ್ಸಾರ್ಟಿಸಿ ಬಸ್‌ಗೆ ಅಪ್ಪಳಿಸಿದ ಕಾರು

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಕಾರು ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.
ದೇವನಹಳ್ಳಿಯ ರಾಣಿ ವೃತ್ತದ ಸಮೀಪದ ಲಾಲ್‌ಗೊಂಡನಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ 11.30ರ ಸುಮಾರಿಗೆ ಕೆಸ್ಸಾರ್ಟಿಸಿ ಬಸ್‌ಗೆ ಕಾರು ಅಪ್ಪಳಿಸಿ ಅಪಘಾತ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಸಾರಿಗೆ ಬಸ್‌ನ ಮುಂಭಾಗ ಜಖಂಗೊಂಡಿದೆ. ದೇವನಹಳ್ಳಿ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ ತಾಲೂಕು ಸಾದಹಳ್ಳಿ ಗ್ರಾಮದ ನಿವಾಸಿ ಮೋಹನಕುಮಾರ (33), ಸುವನ್ (28) ಹಾಗೂ ಸಾಗರ್ (23) ಮೃತರು. ಇನ್ನು ಬಸ್ ಚಾಲಕ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ರಾಜಾಜಿನಗರದ ವಿಮಲಾ (43), ಶ್ರೀನಿವಾಸಪುರದ ಅಜಯಕುಮಾರ್ ್ಡ (28), ವೀಣಾ (27) ಎಂಬುವವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್‌ಗೆ ಅಪ್ಪಳಿಸಿದ ಕಾರು ಛಿದ್ರ:
ಬೆಂಗಳೂರು ಕಡೆಯಿಂದ ಬಾಗೇಪಲ್ಲಿಗೆ ತೆರಳುತ್ತಿದ್ದ ಸರ್ಕಾರಿ ಸಾರಿಗೆ ಬಸ್ ದೇವನಹಳ್ಳಿಯ ರಾಣಿ ವೃತ್ತದ ಸಮೀಪದ ಲಾಲ್‌ಗೊಂಡನಹಳ್ಳಿಗೇಟ್‌ಬಳಿ ಹೋಗುವಾಗ ಚಿಕ್ಕಬಳ್ಳಾಪುರದ ಕಡೆಯಿಂದ ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಬಲಬದಿ ರಸ್ತೆಗೆ ಹಾರಿ ಬಸ್‌ಗೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎರಡೂ ವಾಹನಗಳ ನಡುವೆ ಕ್ಷಣಾರ್ಧದಲ್ಲಿ ನಡೆದ ದುರ್ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದವ ದೇಹಗಳು ಛಿದ್ರಗೊಂಡಿವೆ.
ವಾರಸುದಾರರಿಗೆ ಹಸ್ತಾಂತರ:
ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ದೇವನಹಳ್ಳಿ ಸಂಚಾರ ವಿಭಾಗದ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖಾಧಿಕಾರಿ ಮುರಳೀಧರ ತಂಡ ತನಿಖೆ ಮುಂದುವರೆಸಿದೆ.
ಹೆದ್ದಾರಿಯಲ್ಲಿ ಸಂಚಾರ ಸಿಕ್ಕು:
ಅಪಘಾತದ ಕಾರಣ ಹೈದರಾಬಾದ್ ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಸಂಚಾರಸಿಕ್ಕು ಉಂಟಾಗಿತ್ತು. ಅಪಘಾತದ ರಭಸಕ್ಕೆ ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಸುಮಾರು 2 ತಾಸಿನ ಬಳಿಕ ಅಪಘಾತದ ವಾಹಗಳನ್ನು ತೆರವುಗೊಳಿಸಿ ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.
ದುಸ್ವಪ್ನದಂತೆ ಭಾಸವಾಯಿತು:
ದೇವನಹಳ್ಳಿಯ ರಾಣಿ ವೃತ್ತದ ಸಮೀಪದ ಲಾಲ್‌ಗೊಂಡನಹಳ್ಳಿ ಗೇಟ್ ಬಳಿ ಬಸ್ ಸಾಗುತ್ತಿದ್ದ ವೇಳೆ ದಿಢೀರನೇ ದೊಡ್ಡ ಶಬ್ಧ ಕೇಳಿಬಂತು. ಏನಾಯಿತು ಎನ್ನುವಷ್ಟರಲ್ಲಿ ಕಾರು ಪಲ್ಪಿಯಾಗಿ ಬಿದ್ದಿರುವುದು ಕಂಡುಬಂತು. ಇನ್ನೇನು ನಿದ್ರೆಗೆ ಜಾರುತ್ತಿದ್ದವರಿಗೆ ಇದೊಂದು ದುಸ್ವಪ್ನದಂತೆ ಭಾಸವಾಯಿತು. ಬಸ್‌ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಕಸ್ಮಾತ್ ಅಪಘಾತದ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದರೆ ಮತ್ತಷ್ಟು ದೊಡ್ಡ ಅನಾಹುತ ನಡೆದುಹೋಗುತ್ತಿತ್ತು ಎಂದು ಬಸ್ ಪ್ರಯಾಣಿಕರು ಪ್ರತಿಕ್ರಿಯಿಸಿದರು.