accident 
ಬೆಂಗಳೂರು ಗ್ರಾಮಾಂತರ

ಇಬ್ಬರ ಬಲಿ ಪಡೆದಿದ್ದ ಆಟೋ ಪತ್ತೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಮಯ್ಯನಪಾಳ್ಯ ಅಪಘಾತ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಲಿ ಪಡೆದು ಪರಾರಿಯಾಗಿದ್ದ ಸರಣಿ ಸಾಕಾಣಿಕೆ ಆಟೋ ಜತೆಗೆ ಆರೋಪಿ ಚಾಲಕನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಅ.10ರಂದು ನಡೆದಿದ್ದ ಅಪಘಾತ ಪ್ರಕರಣ ಬೆನ್ನತ್ತಿದ ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪ್ರಕರಣ ಬೇಧಿಸಿದ್ದಾರೆ. ಇಬ್ಬರು ಯುವಕರ ತಲೆ ಹಾಗೂ ಎದೆ ಮೇಲೆ ಆಟೋ ಹರಿದಿದ್ದು, ಇದರ ಪರಿಣಾಮ ಯುವಕರು ಪ್ರಾಣಬಿಟ್ಟಿದ್ದರು. ಅಪಘಾತವಾದ ಕೂಡಲೇ ಚಾಲಕ ಸುರೇಶ್ ಎಂಬುವರು ಆಟೋ ಸಮೇತ ಚಿಕ್ಕಬಳ್ಳಾಪುರದ ಆರ್ ಎಂಸಿಗೆ ಪರಾರಿಯಾಗಿದ್ದರು. ಸಿಸಿ ಟಿವಿ ಪರಿಶೀಲನೆ ವೇಳೆ ಅನುಮಾಸ್ಪದ ಆಟೋ ಸಂಚಾರಗ ಗಮನಿಸಿದ ಪೊಲೀಸರು ಚಿಕ್ಕಬಳ್ಳಾಪುರದ ಆರ್‌ಎಂಸಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಆರೋಪಿ ಚಾಲಕನ ಮಗ ವಿವರ ಪತ್ತೆಯಾಗಿತ್ತು. ಮಗನನ್ನು ವಿಚಾರಣೆ ನಡೆಸಿದಾಗ ಆರೋಪಿ ಕೊಡಿಗೇಹಳ್ಳಿಯವನು ಎಂದು ಪತ್ತೆಯಾಗಿದ್ದು ಆಟೋ ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ದೊಡ್ಡಬಳ್ಳಾಪುರದ ಕೊಡಿಗೇಹಳ್ಳಿ ಮೂಲದ ಆರೋಪಿ ಮಗನ ಹೆಸರಿನಲ್ಲಿರುವ ತರಕಾರಿ ಸಾಗಿಸುವ ಆಟೋ ಚಾಲನೆ ವೇಳೆ ಈ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ಆರೋಪಿ ಹೆಸರಲ್ಲಿ ವಾಹನ ಚಾಲನೆ ಪರವಾನಗಿ ಹಾಗೂ ಇತರೆ ಯಾವುದೇ ದಾಖಲೆಗಳು ಇರುವುದಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಅಜ್ಜಿ ತಪ್ಪಿಸಲು ಹೋಗಿ ಸಾವು:
ತೂಬಗೆರೆ ಮೂಲದ ಮೂವರು ಯುವಕರು ಒಂದೇ ಬೈಕಿನಲ್ಲಿ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆಂದು ಬರುತ್ತಿದ್ದರು. ಈ ವೇಳೆ ರಾಮಯ್ಯನಪಾಳ್ಯದ ಸಮೀಪ ಅಜ್ಜಿಯೊಬ್ಬರು ಏಕಾಏಕಿ ಬೈಕಿಗೆ ಅಡ್ಡಬಂದಿದ್ದರು. ಅಜ್ಜಿಯನ್ನು ಅಪಘಾತದಿಂದ ಪಾರು ಮಾಡಲು ಹೋಗಿ ಬೈಕ್ ಸವಾರರು ಆಯ ತಪ್ಪಿ ಕೆಳಗೆ ಬಿದ್ದ ವೇಳೆ ದೊಡ್ಡಬಳ್ಳಾಪುರದಿಂದ ತೂಬಗೆರೆ ಕಡೆಗೆ ಹೋಗುತ್ತಿದ್ದ ಸರಕು ಸಾಗಾಣಿಕೆ ಆಟೋ ಇಬ್ಬರು ಯುವಕರ ಎದೆ ಹಾಗೂ ತಲೆ ಮೇಲೆ ಹರಿದಿದೆ. ತೀವ್ರ ರಕ್ತ ಸ್ರಾವದಿಂದ ತೂಬಗೆರೆ ಮೂಲದ ನಂದನ್ ಕುಮಾರ್ (24) ಮತ್ತು ದೊಡ್ಡತಿಮ್ಮನಹಳ್ಳಿ ರವಿಕುಮಾರ್(24) ಸ್ಥಳದಲ್ಲೇ ಮೃತಪಟ್ಟಿದ್ದರು. ಅಘಾತದ ಬಳಿಕ ಚಾಲಕ ಅಟೋದೊಂದಿಗೆ ಪರಾರಿಯಾಗಿದ್ದ ಮತ್ತೊಬ್ಬ ಯುವಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ವೇಳೆ ಆಟೋ ಪತ್ತೆಯಾಗಿದೆ