37 crore for the development of Devanahalli Stadium 
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಕ್ರೀಡಾಂಗಣ ಪ್ರಗತಿಗೆ 37 ಕೋಟಿ ರೂ.

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ತಾಲೂಕು ಕ್ರೀಡಾಂಗಣವನ್ನು ಅತ್ಯಾಧುನಿಕ ಕ್ರೀಡಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಖೇಲೋ ಇಂಡಿಯಾ ಯೋಜನೆಯಡಿ 37.70 ಕೋಟಿ ರೂ. ಅನುದಾನ ನೀಡುವಂತೆ ಸಂಸದ ಡಾ. ಕೆ.ಸುಧಾಕರ್​ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಮನ್ಸುಖ್​ ಮಾಂಡವೀಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ಇತ್ತೀಚಿಗೆ ಸಚಿವರನ್ನು ಭೇಟಿಯಾದ ಸಂಸದ ಡಾ.ಕೆ.ಸುಧಾಕರ್​ ದೇವನಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಯುವಕರಿಗೆ ವಿಶ್ವಮಟ್ಟದ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸಿದ್ಧಪಡಿಸಿರುವ ಸಮಗ್ರ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿದ್ದಾರೆ.
ಪ್ರಸ್ತಾವನೆಯಲ್ಲಿನ ಅಂಶಗಳು ಏನು?
- ಒಲಿಂಪಿಕ್​ ಮಾದರಿಯ, ಎಲ್ಲ ಹವಾಮಾನಕ್ಕೂ ಸೂಕ್ತವಾದ ಈಜುಕೊಳ ನಿರ್ಮಾಣ, 400 ಮೀಟರ್​ ಸಿಂಥೆಟಿಕ್​ ಅಥ್ಲೆಟಿಕ್ಸ್​ ಟ್ರ್ಯಾಕ್​, ನೈಸರ್ಗಿಕ ಹುಲ್ಲಿನ ಫುಟ್​ಬಾಲ್​ ಮೈದಾನ, ಸಿಂಥೆಟಿಕ್​ ಹಾಕಿ ಮೈದಾನ ವಾಲಿಬಾಲ್​ ಮತ್ತು ಬಾಸ್ಕೆಟ್​ಬಾಲ್​ ಕೋರ್ಟ್​ಗಳ ಜತೆಗೆ ಬಹುಉದ್ದೇಶಿತ ಒಳಾಂಗಣ ಕ್ರೀಡಾ ಸಭಾಂಗಣ ನಿರ್ಮಾಣದ ಕನಸನ್ನು ಬಿತ್ತಿದ್ದಾರೆ.
ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ:
ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಅಪಾರ ಕ್ರೀಡಾ ಪ್ರತಿಭೆಯನ್ನು ಹೊಂದಿವೆ. ಗ್ರಾಮೀಣ ಭಾಗದ ಅನೇಕ ಯುವ ಪ್ರತಿಭೆಗಳಿಗೆ ಪ್ರತಿಭೆ ಮತ್ತು ಉತ್ಸಾಹವಿದ್ದರೂ, ಗುಣಮಟ್ಟದ ತರಬೇತಿ ಹಾಗೂ ಆಧುನಿಕ ಕ್ರೀಡಾ ಮೂಲಸೌಕರ್ಯದ ಕೊರತೆಯಿಂದಾಗಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇವನಹಳ್ಳಿಯಲ್ಲಿ ವಿಶ್ವಮಟ್ಟದ ಕ್ರೀಡಾ ಮೂಲಸೌಕರ್ಯ ನಿರ್ಮಿಸಬೇಕಾಗಿದೆ ಇದರಿಂದ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಡಾ. ಕೆ. ಸುಧಾಕರ್​ ತಿಳಿಸಿದ್ದಾರೆ. ಪ್ರಧಾನಿ ಅವರ ಖೇಲೋ ಇಂಡಿಯಾ ಪರಿಕಲ್ಪನೆಯ ಆಶಯದಂತೆ ಕ್ರೀಡೆಯನ್ನು ದೇಶದ ಮೂಲೆಮೂಲೆಗೂ ಕೊಂಡೊಯ್ದು, ಗ್ರಾಮೀಣ ಹಾಗೂ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದೇ ಆಶಯವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲೂ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ. ಇದು ಕೇವಲ ಒಂದು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲ. ಚಿಕ್ಕಬಳ್ಳಾಪುರದ ಮುಂದಿನ ಪೀಳಿಗೆಯ ಪ್ರತಿಭೆ, ಶಿಸ್ತು, ಆತ್ಮವಿಶ್ವಾಸ ಮತ್ತು ಕನಸುಗಳಲ್ಲಿ ಮಾಡುತ್ತಿರುವ ಹೂಡಿಕೆ. ನಮ್ಮ ಗ್ರಾಮೀಣ ಭಾಗದ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲೂ ಭಾರತದ ಪರವಾಗಿ ಸ್ಪರ್ಧಿಸುವಂತಹ ಅವಕಾಶಗಳನ್ನು ಸೃಷ್ಟಿಸುವುದು ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಆದ್ಯತೆ ಮೇರೆಗೆ ಪರಿಗಣನೆ:
ದೇವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಯುವಜನಸಂಖ್ಯೆ ಹಾಗೂ ಕ್ರೀಡೆಯಲ್ಲಿನ ಆಸಕ್ತಿ ಗಮನದಲ್ಲಿಟ್ಟುಕೊಂಡು ಈ ಕ್ರೀಡಾ ಕೇಂದ್ರವು ಭವಿಷ್ತ್ಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಮುಖ ಕ್ರೀಡಾ ತರಬೇತಿ ಮತ್ತು ಪ್ರತಿಭಾ ಅಭಿವೃದ್ಧಿ ಕೇಂದ್ರವಾಗಿ ರೂಪುಗೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.
37.70 ಕೋಟಿ ರೂ.ಮೊತ್ತದ ಪ್ರಸ್ತಾವನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಅಗತ್ಯ ಅನುದಾನ ಮಂಜೂರು ಮಾಡುವ ಮೂಲಕ ದೇವನಹಳ್ಳಿ ತಾಲೂಕು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಕೇಂದ್ರ ಸಚಿವರಲ್ಲಿ ಡಾ. ಕೆ. ಸುಧಾಕರ್​ ಮನವಿ ಮಾಡಿದ್ದಾರೆ. ಹಳ್ಳಿಯ ಮೈದಾನದಿಂದ ಜಾಗತಿಕ ಕ್ರೀಡಾ ವೇದಿಕೆಯವರೆಗೆ ಚಿಕ್ಕಬಳ್ಳಾಪುರದ ಪ್ರತಿಭೆಗಳಿಗೆ ದಾರಿ ಮಾಡಿಕೊಡುವುದು ನಮ್ಮ ಸಂಕಲ್ಪ ಎಂದು ಸಂಸದರು ತಿಳಿಸಿದ್ದಾರೆ.