ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್​ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು. ನಗರ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ.ಬೈರೇಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್​, ನಿರ್ದೇಶಕ ಡಾ.ಎಚ್​.ಎಂ.ಸುಬ್ಬರಾಜ್​, ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್​, ಮುಖಂಡ ಸಂದೀಪ್​, ಕ್ರೀಡಾಪಟುಗಳು, ಮುಖಂಡರು ಇದ್ದರು. 
ಬೆಂಗಳೂರು ಗ್ರಾಮಾಂತರ

ಚನ್ನಬೈರೇಗೌಡ ಕ್ರೀಡಾಂಗಣ ಅಭಿವೃದ್ಧಿಗೆ 3.5 ಕೋಟಿ ರೂ. ಅನುದಾನ

* ಶಾಸಕ ಶರತ್​ ಬಚ್ಚೇಗೌಡ ಭೂಮಿಪೂಜೆ * 100ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಸನ್ಮಾನ

ಹೊಸಕೋಟೆ : ಚನ್ನಬೈರೇಗೌಡ ಕ್ರೀಡಾಂಗಣ ಅಭಿವೃದ್ಧಿ 7 ವರ್ಷಗಳ ಕನಸಾಗಿದ್ದು, ಇದೀಗ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ 3.5 ಕೋಟಿ ರೂ. ವೆಚ್ಚದ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ಕ್ರೀಡಾಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಹಿರಿಯ ಕ್ರೀಡಾಪಟುಗಳು ಹಾಗೂ ಪ್ರತಿದಿನ ವಾಯುವಿಹಾರಕ್ಕೆ ಬರುವ ನಾಗರಿಕರ ಸಭೆಯಲ್ಲಿ ಅವರ ಅಭಿಪ್ರಾಯ ಕೇಳಿದಾಗ ಕ್ರೀಡಾಂಗಣದಲ್ಲಿ 400 ಮೀಟರ್​ ಉದ್ದದ 8 ಟ್ರ್ಯಾಕ್​ಗಳನ್ನು ನಿರ್ಮಿಸಿದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಇದೇ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸದ್ಯ ನಮ್ಮ ಭಾಗದ ಕ್ರೀಡಾಪಟುಗಳು ಬೇರೆ ತಾಲೂಕಿನ ಕ್ರೀಡಾಂಗಣಗಳನ್ನು ನೆಚ್ಚಿಕೊಳ್ಳಬೇಕಾಗಿರುವ ವಾಸ್ತವ್ಯ ತಿಳಿದು ಸರ್ಕಾರದಿಂದ 3.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವ ಮೂಲಕ 8 ಟ್ರ್ಯಾಕ್​ಗಳ ಸಿಂಥೆಟಿಕ್​ ರನ್ನಿಂಗ್​ ಟ್ರ್ಯಾಕ್​,ಫುಟ್​ಬಾಲ್​, ವಾಲಿಬಾಲ್​, ಖೋಖೋ ಹಾಗೂ ಇನ್ನಿತರ ಆಟಗಳ ಕೋರ್ಟ್​ ನಿಮಾರ್ಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಇಡೀ ಕ್ರೀಡಾಂಗಣಕ್ಕೆ ಜರ್ಮನ್​ ಟೆಂಟ್​ ಅಳವಡಿಸುವ ಮೂಲಕ ಕ್ರೀಡಾಪಟುಗಳು ನೆರಳಿನಲ್ಲಿ ಅನಾಯಾಸವಾಗಿ ಅಭ್ಯಾಸ ಮಾಡಲು ಕ್ರಮವಹಿಸಲಾಗುವುದು ಎಂದರು.

ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್​ ಮಾತನಾಡಿ, 25&30 ವರ್ಷಗಳಿಂದ ನಮ್ಮ ಭಾಗದಲ್ಲಿ ಪ್ರಶಸ್ತಿ ಪಡೆದ ಕ್ರೀಡಾಪಟುಗಳನ್ನು ಸನ್ಮಾನಿಸಲು ಸತತ ಪ್ರಯತ್ನ ಮಾಡಲಾಯಿತು. ಆದರೆ ಶಾಸಕ ಶರತ್​ ಬಚ್ಚೇಗೌಡ ಹಾಗೂ ಬಿ.ವಿ.ಬೈರೇಗೌಡರ ಸಹಕಾರದಿಂದ ಇಂದು ಕೈಗೂಡಿದೆ. 40 ವರ್ಷಕ್ಕೂ ಹೆಚ್ಚು ಕಾಲದಿಂದ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಿ ಪದಕ ಪಡೆದ ತಾಲೂಕಿನ ಕ್ರೀಡಾಪಟುಗಳಿಗೆ ಸನ್ಮಾನಿಸುವ ಭಾಗ್ಯ ಇಂದು ದೊರೆತಿದೆ. ಈ ಕ್ರೀಡಾ ಹಬ್ಬದಲ್ಲಿ 100ಕ್ಕೂ ಹೆಚ್ಚು ಕ್ರೀಡಾಪಟು ಹಾಗೂ ತರಬೇತುದಾರರನ್ನು ಸನ್ಮಾನಿಸಲಾಯಿತು.

ಕಳೆದ ಕಾಮನ್​ ವೆಲ್ತ್​ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ. ಅದೇ ರೀತಿ ಏಷ್ಯನ್​ ಗೇಮ್ಸ್​ನಲ್ಲಿ 21 ಚಿನ್ನ ಸೇರಿ ಒಟ್ಟು 82 ಪದಕ ಪಡೆಯುವ ಮೂಲಕ ಭಾರತ 4ನೇ ಸ್ಥಾನ ಪಡೆದಿದೆ. ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಸೌಲಭ್ಯ ಕೊರತೆಯಿಂದ ಪ್ರತಿಭಾ ಅನಾವರಣಕ್ಕೆ ಹಿನ್ನಡೆಯಾಗಿದೆ. ಇಂತಹ ಕೊರತೆ ತಾಲೂಕಿನಲ್ಲಿ ಬಾರದಂತೆ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಪ್ರಯತ್ನ ಮಾಡುತ್ತೇನೆ.
> ಶರತ್​ ಬಚ್ಚೇಗೌಡ ಶಾಸಕ