28 ZP constituencies for the district
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಪಂ ಕ್ಷೇತ್ರಗಳನ್ನು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲಾ ಪಂಚಾಯಿತಿಗಳ ಗಡಿ ಗುರುತಿಸುವುದರ ಜತೆಗೆ ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ಮತ್ತು ಗಡಿ ಗುರುತಿಸಿ ಹೊರಡಿಸಿದ್ದ ಅಧಿಸೂಚನೆಯ ನಂತರ ಅಗಿರುವ ಕೆಲವು ಆಡಳಿತಾತ್ಮಕ ಬದಲಾವಣೆಗಳ ಕಾರಣಕ್ಕೆ ಮತ್ತು ನಗರಾಭಿವೃದ್ಧಿ ಇಲಾಖೆ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿರುವುದರಿಂದ ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗಿದೆ.
ಕಂದಾಯ ಇಲಾಖೆಯೂ ಮಾಗಡಿ ಹಾಗೂ ನೆಲಮಂಗಲ ತಾಲೂಕುಗಳ ಭೌಗೋಳಿಕ ಗಡಿಗಳನ್ನು ಮರು ರಚಿಸಿತ್ತು. ಈ ಕಾರಣಗಳಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿಗಳನ್ನು ಮತ್ತೊಮ್ಮೆ ಪರಿಷ್ಕರಿಸುವುದು ಅನಿವಾರ್ಯವಾಗಿತ್ತು. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರು ನಿಗಧಿಪಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕ್ರಮ ಸಂಖ್ಯೆ ನಿರಂತರತೆ ಕಾಪಾಡುವ ಉದ್ದೇಶದಿಂದ ಹಳೆಯ ಅಧಿಸೂಚನೆಗಳನ್ನು ಹಿಂಪಡೆದು ಹೊಸ ಕ್ರಮ ಸಂಖ್ಯೆಗಳಿಗೆ ಕ್ಷೇತ್ರಗಳ ಹೆಸರು ಮತ್ತು ವ್ಯಾಪ್ತಿ ಪ್ರಕಟಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 28 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹೊಸಕೋಟೆ 8, ದೇವನಹಳ್ಳಿ 6, ದೊಡ್ಡಬಳ್ಳಾಪುರ 7 ಹಾಗೂ ನೆಲಮಂಗಲ 7 ಕ್ಷೇತ್ರಗಳಿವೆ.
ಮಾಗಡಿ ತಾಲೂಕಿನ ಸ್ಥಳೀಯರ ವಿರೋಧದ ನಡುವೆಯೂ ಸರ್ಕಾರ ಸೋಲೂರನ್ನು ನೆಲಮಂಗಲಕ್ಕೆ ಸೇರ್ಪಡೆ ಮಾಡಿದೆ. ಈ ಹಿನ್ನೆಯಲ್ಲಿ ಈಗಾಗಲೇ ವಿಂಗಡಣೆ ಆಗಿರುವ ಕ್ಷೇತ್ರಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಿಂದ ಕೈಬಿಡಲಾಗಿತ್ತು. ಮಾಗಡಿ ತಾಲೂಕಿನಲ್ಲಿ ಇದ್ದ ಸೋಲೂರು ಜಿಪಂ ಕ್ಷೇತ್ರ, ಹೊಸ ಅಧಿಸೂಚನೆಯಂತೆ ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭಾಗವಾಗಿದ್ದು, ಅಲ್ಲಿನ ಹೊಸ ಜಿಪಂ ಕ್ಷೇತ್ರವಾಗಿ ಸೇರ್ಪಡೆಗೊಂಡಿದೆ.
* ಹೊಸಕೋಟೆ: ನೆಲವಾಗಿಲು, ಶಿವನಾಪುರ, ಮುಗಬಾಳ, ಜಡಿಗೇನಹಳ್ಳಿ, ಅನುಗೊಂಡನಹಳ್ಳಿ, ದೊಡ್ಡಗಟ್ಟಿಗನಬ್ಬೆ, ಚೊಕ್ಕಹಳ್ಳಿ, ಸೂಲಿಬೆಲೆ
* ದೇವನಹಳ್ಳಿ: ಆವತಿ, ಕುಂದಾಣ,ಬಿಜ್ಜವಾರ, ಚನ್ನರಾಯಪಟ್ಟಣ, ಬೂದಿಗೆರೆ, ಕನ್ನಮಂಗಲ,
*ದೊಡ್ಡಬಳ್ಳಾಪುರ: ಕನಸವಾಡಿ, ದೊಡ್ಡಬೆಳವಂಗಲ, ಸಾಸಲು, ತೂಬಗೆರೆ, ರಾಜಘಟ್ಟ, ದರ್ಗಾಜೋಗಿಹಳ್ಳಿ, ಕೊಡಿಗೆಹಳ್ಳಿ.
*ನೆಲಮಂಗಲ: ಮೋಟಗೊಂಡನಹಳ್ಳಿ, ಬೇಗೂರು, ತ್ಯಾಮಗೊಂಡ್ಲು, ಮಣ್ಣೆ, ಸೋಂಪುರ, ಶಿವಗಂಗೆ, ಸೋಲೂರು ಕ್ಷೇತ್ರಗಳನ್ನು ರಚನೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಪಂ ಕ್ಷೇತ್ರಗಳನ್ನು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಪಂಚಾಯಿತಿಗಳ ಗಡಿ ಗುರುತಿಸುವುದರ ಜತೆಗೆ ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯಲ್ಲಿ ಒಟ್ಟು 28 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹೊಸಕೋಟೆ 8, ದೇವನಹಳ್ಳಿ 6, ದೊಡ್ಡಬಳ್ಳಾಪುರ 7 ಹಾಗೂ ನೆಲಮಂಗಲ 7 ಕ್ಷೇತ್ರಗಳಿವೆ.
ವಾಸಂತಿ ಅಮರ್, ಜಿಪಂ ಸಿಇಒ ಬೆಂ.ಗ್ರಾಮಾಂತರ