ನೆಲಮಂಗಲದ ಡಾಬಾಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲಿಸಿತು. ಆಹಾರ ಸುರಕ್ಷತಾಧಿಕಾರಿ ಜಿ.ನಾಗೇಶ್, ಬಿಬಿಎಂಪಿ ವ್ಯಾಪ್ತಿಯ ಅಂಬರೀಶ್ಗೌಡ ಇದ್ದರು.
- 22 ಡಾಬಾ ಮೇಲೆ ದಾಳಿ - 62 ಸಾವಿರ ದಂಡ
*ಆಹಾರ ಸುರಕ್ಷತಾ ಅಧಿಕಾರಿಗಳ ಕಾರ್ಯಾಚರಣೆ
ವಿಷಕಾರಿ ಎಣ್ಣೆ, ಕಳಪೆ ಪದಾರ್ಥಗಳ ಬಳಕೆ ಪತ್ತೆ
ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ ಆದೇಶದ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿನ ಡಾಬಾಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ, ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದರು.
ಶನಿವಾರ ಸಂಜೆ ತಾಲೂಕು ಆರೋಗ್ಯ ಸುರಕ್ಷತಾ ಅಧಿಕಾರಿ ಜಿ.ನಾಗೇಶ್ ಮತ್ತು ಬಿಬಿಎಂಪಿ ಉತ್ತರ ವಲಯ ಮಲ್ಲೇಶ್ವರ ವೃತ್ತದ ಎ.ಅಂಬರೀಶ್ ಗೌಡ, ಚಿಕ್ಕಪೇಟೆ ವೃತ್ತದ ಕಿರಣ್, ಶಾಂತಿನಗರ ವೃತ್ತದ ಆನಂದ್ ಅವರನ್ನು ಒಳಗೊಂಡ ಅಧಿಕಾರಿಗಳ ತಂಡ ಡಾಬಾಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿತು. ಹೆದ್ದಾರಿಗಳಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು ಹಾಗೂ ವಾರಂತ್ಯದ ದಿನಗಳಲ್ಲಿ ಬೆಂಗಳೂರು ನಗರ ಪ್ರದೇಶಗಳಿಂದ ಬರುವ ಸಾರ್ವಜನಿಕರಿಗಾಗಿ ಡಾಬಾಗಳಲ್ಲಿ ತಯಾರಾಗುವ ಆಹಾರದಲ್ಲಿ ವಿಷಕಾರಿ ಎಣ್ಣೆ ಹಾಗೂ ಕಳಪೆ ಪದಾರ್ಥಗಳ ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳ ತಂಡ ವಿಶೇಷ ಕಾರ್ಯಾಚರಣೆ ನಡೆಸಿದೆ.
62 ಸಾವಿರ ರೂಪಾಯಿ ದಂಡ: ಡಾಬಾಗಳಲ್ಲಿ ಅಡುಗೆ ತಯಾರಿಸುವ ಸ್ಥಳಗಳಲ್ಲಿನ ಸ್ವಚ್ಛತೆ, ಅಡುಗೆ ಎಣ್ಣೆ, ತರಕಾರಿ ಸೇರಿ ದಿನಸಿ ಪದಾರ್ಥಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಕೆಲ ಡಾಬಾಗಳಲ್ಲಿ ಸ್ವಚ್ಛತೆ ನಿರ್ವಹಣೆ ಮಾಡದಿರುವುದು, ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ ಮಾಡಿರುವುದು ಕಂಡುಬಂದಿದೆ. ಅಂತಹ ಡಾಬಾಗಳಿಗೆ 62,500 ರೂ. ದಂಡ ವಿಧಿಸಿದ್ದಲ್ಲದೇ, 12 ಡಾಬಾಗಳಿಗೆ ನೋಟಿಸ್ ಜಾರಿ ಮಾಡಿ, 8 ಡಾಬಾಗಳಲ್ಲಿ ತಯಾರಿಸಿದ್ದ ಆಹಾರ ಹಾಗೂ ಅಡುಗೆ ಎಣ್ಣೆಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಅಧಿಕಾರಿಗಳು ಕಳುಹಿಸಿದರು.
ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾವಣಗೆರೆವರೆಗೆ ಮತ್ತು ಮಂಗಳೂರು ರಸ್ತೆಯ ಬೆಳ್ಳೂರು ಕ್ರಾಸ್ವರೆಗೂ ಇರುವ ಡಾಬಾಗಳ ಮೇಲೆ ವಿವಿಧ ಅಧಿಕಾರಿಗಳ ತಂಡಗಳು ತಪಾಸಣೆ ಮಾಡುತ್ತಿದ್ದು, ಎರಡು ತಂಡ ಬೆಂಗಳೂರು ಹೊರವಲಯ ಸೇರಿ ನೆಲಮಂಗಲ ತಾಲೂಕು ಹಾಗೂ ಕುಣಿಗಲ್ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಇರುವ ಡಾಬಾಗಳ ಮೇಲೆ ಎರಡು ದಿನಗಳ ಕಾಲ ಸುಮಾರು 22 ಡಾಬಾಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದೆ.
ಕೆಲ ಡಾಬಾಗಳಲ್ಲಿ ರಾಸಾಯನಿಕಯುಕ್ತ ಕಲರ್.. ಟೇಸ್ಟಿಂಗ್ ಪೌಡರ್ ಬಳಕೆ, ಫ್ರಿಡ್ಜ್ನಲ್ಲಿ ಮಾಂಸ ಶೇಖರಣೆ, ಹಳೆಯ ಅಡುಗೆ ಎಣ್ಣೆ ಬಳಕೆ ಮಾಡಿರುವುದು ತಪಾಸಣೆ ವೇಳೆ ಕಂಡುಬಂದಿದೆ. ದಂಡದ ಜತೆಗೆ ನೋಟಿಸ್ ನೀಡಲಾಗಿದ್ದು, ಪ್ರಯೋಗಾಲಯಕ್ಕೆ ಕಳಿಸಿರುವ ಆಹಾರ ಪದಾರ್ಥಗಳ ಕುರಿತ ವರದಿ ಬಂದ ನಂತರ ಕ್ರಮವಹಿಸಲಾಗುವುದು.
- ಜಿ.ನಾಗೇಶ್ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ