ಬೆಂಗಳೂರು: ಅಂಚೆ ಇಲಾಖೆ ವತಿಯಿಂದ ನವೆಂಬರ್‌ನಲ್ಲಿ ನಡೆಯಲಿರುವ ‘ಬೆಂಗಳೂರುಪೆಕ್ಸ್-2025’ ಜಿಲ್ಲಾ ಮಟ್ಟದ ಅಂಚೆಚೀಟಿ ಸಂಗ್ರಹಣಾ ಪ್ರದರ್ಶನದ ಅಂಗವಾಗಿ ನಗರದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ (ಕರ್ನಾಟಕ ವೃತ್ತ)ಯಲ್ಲಿ ಶುಕ್ರವಾರ ಪ್ರದರ್ಶನದ ಲೋಗೋ ಮತ್ತು ಪ್ರಾಸ್ಪೆಕ್ಟಸ್ ಅನ್ನು ಬಿಡುಗಡೆ ಮಾಡಲಾಯಿತು.
ಬೆಂಗಳೂರು ಪೆಕ್ಸ್ - 2025ರ ಲೋಗೋ ಬಿಡುಗಡೆ ಮಾಡಿದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (ಕರ್ನಾಟಕ ವೃತ್ತ) ಕೆ. ಪ್ರಕಾಶ್ ಅವರು, ಅಂಚೆಚೀಟಿ ಸಂಗ್ರಹಣ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಉತ್ತೇಜಿಸುವ ಮತ್ತು ಅಂಚೆ ಚೀಟಿ ಸಂಗ್ರಹಿಸುವವರಿಗೆ ತಮ್ಮ ಸಂಗ್ರಹ ಪ್ರದರ್ಶಿಸಲು ವೇದಿಕೆ ಒದಗಿಸಲು ಈ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದರು.
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನ.4 ಮತ್ತು 5ರಂದು ಎರಡು ದಿನಗಳ ಕಾಲ ನಡೆಯಲಿರುವ ಅಂಚೆ ಚೀಟಿ ಸಂಗ್ರಹಣಾ ಪ್ರದರ್ಶನದಲ್ಲಿ ಆಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.