ಪುರಸಭೆಯ ಹಳೆ ಕಟ್ಟಡದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಚೌಕಿಮಠದ ಜಾಗದ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. 
ಬೆಂಗಳೂರು ದಕ್ಷಿಣ

ಭೂಸ್ವಾಧೀನಕ್ಕೆ ಸದಸ್ಯರ ವೈಯಕ್ತಿಕ ಅಭಿಪ್ರಾಯ ಸಂಗ್ರಹ

ಚೌಕಿಮಠದ ಜಾಗದಲ್ಲಿ ಬಿಡದಿ ಪುರಸಭೆ ಕಟ್ಟಡ ನಿರ್ಮಾಣ - ಸಾಮಾನ್ಯ ಸಭೆಯಲ್ಲಿ ಚರ್ಚೆ ಚರ್ಚೆ

ಬಿಡದಿ: ಚೌಕಿಮಠದ 2 ಎಕರೆ ಜಮೀನನ್ನು ಬಿಡದಿ ಪುರಸಭೆಯ ಕಟ್ಟಡ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ಅಂತಿಮವಾಗಿ ಸದಸ್ಯರ ವೈಯಕ್ತಿಕ ಅಭಿಪ್ರಾಯ ಸಂಗ್ರಹ ಮಾಡಲಾಯಿತು.

ಪುರಸಭೆಯ ಹಳೆ ಕಟ್ಟಡದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಚೌಕಿಮಠದ ಜಾಗದ ವಿಚಾರ ಚರ್ಚೆಗೆ ಬಂದಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿತ್ತು. ಜಿಲ್ಲಾಧಿಕಾರಿಗಳು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡುವಂತೆ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ಚರ್ಚೆ ಪ್ರಾರಂಭವಾಗಿತ್ತು.

ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುತ್ತಿದಂತೆ ಜೆಡಿಎಸ್ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಕುಮಾರ್ ಇದು ಬಹಳ ಇತಿಹಾಸ ಹೊಂದಿರುವ ಮಠವಾಗಿದ್ದು, ಈ ಜಾಗದಲ್ಲಿ ಪುರಸಭೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡುವುದು ಬೇಡ ಎಂದರು.

ಪ್ರತಿ ಸದಸ್ಯರ ಅಭಿಪ್ರಾಯ ಸಂಗ್ರಹ ಮಾಡಿ ಅದನ್ನ ದಾಖಲು ಮಾಡಲು ತೀರ್ಮಾನ ಮಾಡಲಾಯಿತು. ಆಡಳಿತ ರೂಢ ಜೆಡಿಎಸ್‌ನ ಎಲ್ಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ವಿಪಕ್ಷ ನಾಯಕ ಸಿ.ಉಮೇಶ್ ನೇತೃತ್ವದಲ್ಲಿ ನಾವೆಲ್ಲರೂ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎನ್ನು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಥಿಲಗೊಂಡಿದ್ದ ಕಟ್ಟಡಗಳ ತೆರವು ಮಾಡಲು ಲಕ್ಷ ಲಕ್ಷ ಹಣ ನೀಡಿದ್ದೀರಿ ಏಕೆ ಎಂದು 7ನೇ ವಾರ್ಡ್‌ನ ಸೋಮಶೇಖರ್ ಪ್ರಶ್ನೆ ಮಾಡಿದರು. ಇದಕ್ಕೆ ಅಧಿಕಾರಿಗಳಿಂದ ಯಾವುದೇ ಉತ್ತರ ಬರಲಿಲ್ಲ.

ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್ ಹಾಗೂ ಸಾರ್ವಜನಿಕ ಶೌಚಹೃಹ ಉದ್ಘಾಟನೆ ವೇಳೆ ಹೂವಿನ ಅಲಂಕಾರ ಎಂದು 95 ಸಾವಿರ ರೂಪಾಯಿ ಬಿಲ್ ಮಾಡಿರುವುದನ್ನ 23ನೇ ವಾರ್ಡ್‌ನ ನಾಗರಾಜು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಇಂಜಿನಿಯರ್ ಕೇವಲ ಎರಡು ಕಟ್ಟಡಗಳಿಗೆ ಹೂವಿನ ಅಲಂಕಾರ ಮಾಡಿರಲಿಲ್ಲ, ಇನ್ನೂ ಹಲವು ಕಟ್ಟಡಗಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು ಎಂದು ಸಭೆಗೆ ತಿಳಿಸಿದರು.

ಅಧ್ಯಕ್ಷೆ ಎಲ್ಲಮ್ಮ ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಸದಸ್ಯರಾದ ಲೋಹೀತ್ ಕುಮಾರ್, ಸಿ.ಉಮೇಶ್, ಸೋಮಶೇಖರ್, ನಾಗರಾಜು, ಹರಿಪ್ರಸಾದ್, ರಾಕೇಶ್ ಕುಮಾರ್, ರಮೇಶ್, ನವೀನ್ ಕುಮಾರ್, ಕಲ್ಲುಗೋಪಹಳ್ಳಿ ಕುಮಾರ್, ಮಂಜುಳಾ, ಭಾನುಪ್ರಿಯಾ, ಮಹಿಮಾ ಕುಮಾರ್ ಇದ್ದರು.

ರಾಜೀನಾಮೆ ನೀಡಿ: ಸಭೆಯಲ್ಲಿ ಜೆಡಿಎಸ್ ಸದಸ್ಯರೇ ಪರಸ್ಪರ ವಾಗ್ವಾದ ಮಾಡುತ್ತಿದ್ದ ವೇಳೆ ವಿಪಕ್ಷ ನಾಯಕ ಸಿ.ಉಮೇಶ್ ನಾವು ನಿಮ್ಮ ವೈಯಕ್ತಿಕ ಚರ್ಚೆ ಕೇಳಲು ಬಂದಿಲ್ಲ. ನಿಮ್ಮಪಕ್ಷದ ಕಚೇರಿಯಲ್ಲಿ ತೀರ್ಮಾನ ಮಾಡಿಕೊಳ್ಳಿ. ನೀವು ಅಧಿಕಾರ ಮಾಡಲು ಶಕ್ತರಿಲ್ಲ, ರಾಜೀನಾಮೆ ಕೊಟ್ಟು ಅಧಿಕಾರ ಕೊಡಿ ಎಂದು ಕುಟುಕಿದರು.

ಯುಜಿಡಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿಗಳು ಆಗುತ್ತಿಲ್ಲ: ನಮ್ಮ ವಾರ್ಡ್‌ಗಳಲ್ಲಿ ಯುಜಿಡಿ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಕೈ ಸದಸ್ಯರಾದ ಬಿಂದಿಯಾ ಹಾಗೂ ನವೀನ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಕಾಮಗಾರಿ ಶೀಘ್ರ ಪ್ರಾರಂಭ ಮಾಡಲಾಗುತ್ತದೆ. ಕಾಮಗಾರಿ ಮುಗಿದ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತದೆ ಎಂದರು.

ಬಿಡದಿ ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಸಚಿವ ಬಾಲಕೃಷ್ಣ ಸಭೆ ಮಾಡಿದ್ದಾರೆ. ಅವರದೇ ಕಲ್ಪನೆಯಲ್ಲಿ ಅಭಿವೃದ್ಧಿಪಡಿಸಲು ಸಲಹೆ ಸೂಚನೆ ಕೊಟ್ಟಿದ್ದಾರೆ. ಚೌಕಿಮಠದ ಜಾಗದಲ್ಲಿ ಪುರಸಭೆ ಕಚೇರಿ ನಿರ್ಮಾಣ ಮಾಡಬೇಕೆಂದು ಸಚಿವರು ಆಸೆ ಪಟ್ಟಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿಯ ಪಕ್ಕದಲ್ಲಿ ಇದ್ದರೆ ಸೂಕ್ತ ಎಂಬುದು ಅವರ ಕನಸಾಗಿದೆ. ಹಾಗಾಗಿ ಜಾಗ ಕೇಳಿದ್ದಾರೆ. ಸಚಿವರ ಆಶಯಕ್ಕೆ ಕಾಂಗ್ರೆಸ್ ಸದಸ್ಯರ ಬೆಂಬಲ ಇದೆ.
- ಸಿ.ಉಮೇಶ್, ವಿಪಕ್ಷ ನಾಯಕ