Work on Shivakumara Sri's statue gains momentum. 
ಬೆಂಗಳೂರು ದಕ್ಷಿಣ

ಶಿವಕುಮಾರ ಶ್ರೀಗಳ ಪ್ರತಿಮೆ ಕಾಮಗಾರಿಗೆ ವೇಗ

ಸಿದ್ಧಗಂಗಾ ಮಠದ ಡಾ. ಶ್ರೀಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಹಾಗೂ ಆದಿಚುಂಚನಗಿರಿ ಮಠದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳ ಬಾನಂದೂರು ಕ್ಷೇತ್ರವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮವಹಿಸಿದೆ. ಈ ಭಾಗದ ಪವಿತ್ರ ಕ್ಷೇತ್ರಗಳ ಅಭಿವೃದ್ಧಿಗೂ ಸರ್ಕಾರ ಬದ್ಧವಿದೆ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ನೂತನ ಸಚಿವರಾದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವೀರಾಪುರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಶ್ರೀ ಶಿವಕುಮಾರ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ಕಾಮಗಾರಿಗೆ ವೇಗ ನೀಡಲು ಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದರು. ಮಾಜಿ ಸಂಸದ ಡಿ.ಕೆ. ಸುರೇಶ್ ವಿದೇಶ ಪ್ರವಾಸದಿಂದ ಹಿಂದಿರುಗಿದ ತಕ್ಷಣವೇ ವೀರಾಪುರಕ್ಕೆ ಖುದ್ದು ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಲಾಗುವುದು. ನಂತರ ಕಾಮಗಾರಿ ಪೂರ್ಣಗೊಳಿಸಿ ಸಿಎಂ ಅವರಿಂದಲೇ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ಬಾನಂದೂರು ಗ್ರಾಮವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೆಂಪಾಪುರದ ಅಭಿವೃದ್ಧಿಗೆ 30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿವೆ. ಜಿಲ್ಲೆಗೆ ಮಹಾಪುರುಷರ ಆಶೀರ್ವಾದವಿದ್ದು, ವೀರಾಪುರ ಮತ್ತು ಬಾನಂದೂರು ಕ್ಷೇತ್ರಗಳನ್ನು ಆಧ್ಯಾತ್ಮಿಕ ಹಾಗೂ ಪ್ರವಾಸಿ ನಕ್ಷೆಯಲ್ಲಿ ಪ್ರಮುಖ ಕೇಂದ್ರಗಳನ್ನಾಗಿ ಪರಿವರ್ತಿಸುವುದು ನಮ್ಮ ಗುರಿ ಎಂದರು.
ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಜಿಪಂ ಮಾಜಿ ಸದಸ್ಯ ವಿಜಯ್ ಕ ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಜಿಪಂ ಮಾಜಿ ಸದಸ್ಯ ವಿಜಯ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎಚ್.ಜೆ.ಪುರುಷೋತ್ತಮ್, ತಾಪಂ ಮಾಜಿ ಅಧ್ಯಕ್ಷ ಸುರೇಶ್ ಇದ್ದರು.
ಯಾವ ಖಾತೆಯ ಹಂಬಲವೂ ನನಗಿಲ್ಲ
ಮುಖ್ಯಮಂತ್ರಿಗಳೇ ನಮ್ಮವರಾಗಿರುವಾಗ ನನಗೆ ಯಾವುದೇ ನಿರ್ದಿಷ್ಟ ಖಾತೆಯ ಹಂಬಲವಿಲ್ಲ. ರಾಜ್ಯದ ಎಲ್ಲ ಖಾತೆಗಳ ಜವಾಬ್ದಾರಿಯೂ ನಮ್ಮದೇ ಇದ್ದಂತೆ ಎಂದು ಎಚ್.ಸಿ.ಬಾಲಕೃಷ್ಣ ಸ್ಪಷ್ಟಪಡಿಸಿದರು.
ರಾಜ್ಯದ ಜವಾಬ್ದಾರಿ ನೋಡಿಕೊಳ್ಳಲು ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವ ಕೆಲಸ ಕಾರ್ಯ ಮಾಡಲು ಯಾವುದೇ ಸಮಯದಲ್ಲಿ ಅವರ ಬಳಿ ತೆರಳಿ ಮಾಡಿಸಿಕೊಳ್ಳಬಹುದು. ಹೀಗಿರುವಾಗ ಖಾತೆಗಾಗಿ ಶ್ರಮಿಸುವ ಅಥವಾ ಕಿತ್ತಾಟ ನಡೆಸುವ ಅಗತ್ಯ ನನಗಿಲ್ಲ ಎಂದರು.