ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿರುವುದು
ಬಿಡದಿ: ಇಡ್ಲಿ ಅಂದರೆ ಸಾಕು ನೆನಪಾಗೋದೇ ಬಿಡದಿ ತಟ್ಟೆ ಇಡ್ಲಿ ಹೋಟೆಲ್ಗಳು. ಇಲ್ಲಿನ ಇಡ್ಲಿಗಳಿಗೆ ಮಾರು ಹೋಗದವರೇ ಇಲ್ಲ. ಆದರೆ ಇದೀಗ ತಟ್ಟೆ ಇಡ್ಲಿ ಹೋಟೆಲ್ಗಳಿಗೆ ಮಧ್ಯಪ್ರಾಚ್ಯದ ಯುದ್ಧದ ಬಿಸಿ ತಟ್ಟಿದ್ದು, ಎಲ್ಪಿಜಿ ಕೊರತೆಯಿಂದ ವ್ಯಾಪಾರಸ್ಥರು ಸೌದೆ ಒಲೆಗಳತ್ತ ಮುಖಮಾಡಿದ್ದಾರೆ.
ಹೌದು...! ಬಿಡದಿ ಅಂದರೆ ತಟ್ಟೆ ಇಡ್ಲಿಗೆ ಹೆಸರುವಾಸಿ. ದಶಕಗಳಿಂದ ತಟ್ಟೆ ಇಡ್ಲಿ ಹೋಟೆಲ್ಗಳನ್ನು ಹಲವು ಮಂದಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೀಗ ಹೋಟೆಲ್ಗಳ ಮೇಲೆ ಗ್ಯಾಸ್ ಸಿಲಿಂಡರ್ಗಳ ಕರಿ ನೆರಳು ಆವರಿಸಿದೆ. ಕಮರ್ಷಿಯಲ್ ಸಿಲಿಂಡರ್ಗಳು ಸಿಗದೆ ಹೋಟೆಲ್ ಮಾಲೀಕರು ಕಂಗಲಾಗಿದ್ದು, ಸೌದೆಒಲೆಗಳನ್ನು ಹಚ್ಚುತ್ತಿದ್ದಾರೆ.
ಇಡೀ ಹೋಟೆಲ್ ಉದ್ಯಮವೇ ಗ್ಯಾಸ್ ಸಿಲಿಂಡರ್ಗಳ ಮೇಲೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ಗಳು ಸಿಗದಿರುವ ಕಾರಣದಿಂದಾಗಿ ಹೋಟೆಲ್ಗಳು ಬಾಗಿಲು ಹಾಕುವ ಹಂತಕ್ಕೆ ಬಂದು ನಿಂತಿವೆ. ಇಲ್ಲಿನ ಹೋಟೆಲ್ಗಳಿಗೆ ಕಮರ್ಷಿಯಲ್ ಸಿಲಿಂಡರ್ಗಳು ಪೂರೈಕೆ ಆಗುತ್ತಿಲ್ಲ. ಈ ಹಿಂದೆ ಬೇಡ ಬೇಡ ಎಂದರೂ ಕಮರ್ಷಿಯಲ್ ಸಿಲಿಂಡರ್ಗಳನ್ನು ಕೊಡುತ್ತಿದ್ದರು. ಇಂದು ಸಿಲಿಂಡರ್ ಬೇಕು ಎಂದರೂ ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರು.
ಈ ಹಿಂದೆ ಹೋಟೆಲ್ಗಳಲ್ಲಿ ಇಡ್ಲಿ ಜತೆಗೆ ವಡೆ, ಚಿತ್ರನ್ನ, ಪಲಾವ್, ಪುಳಿಯೋಗರೆ, ರೈಸ್ಬಾತ್, ಪೂರಿ, ದೋಸೆ ಸೇರಿ ಹಲವು ತಿಂಡಿಗಳನ್ನು ತಯಾರಿಸುತ್ತಿದ್ದರು. ಆದರೆ ಇದೀಗ ಸಿಲಿಂಡರ್ಗಳು ಸಿಗದಿರುವ ಕಾರಣ ಹಲವು ತಿಂಡಿಗಳಿಗೆ ಬ್ರೇಕ್ ಹಾಕಲಾಗಿದೆ. ಇಡ್ಲಿ, ವಡೆ, ಚಿತ್ರಾನ್ನವನ್ನಷ್ಟೇ ತಯಾರು ಮಾಡುತ್ತಿದ್ದಾರೆ.
ಸಿಲಿಂಡರ್ಗಳು ಸಿಗುತ್ತಿದ್ದ ಸಮಯದಲ್ಲಿ ಎಲ್ಲ ರೀತಿಯ ತಿಂಡಿ ಪದಾರ್ಥಗಳನ್ನು ತಯಾರಿಸುತ್ತಿದ್ದರು. ಇದೀಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಕಮರ್ಷಿಯಲ್ ಸಿಲಿಂಡರ್ಗಳ ಪೂರೈಕೆಯಲ್ಲಿ ದೊಡ್ಡ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸೌದೆಗಳನ್ನೇ ಕಾಣದ ಹಲವು ಹೋಟೆಲ್ಗಳು ಇಂದು ಒಲೆ ಹಾಕಿಕೊಂಡು ಬೆಂಕಿಹತ್ತಿಸಿಕೊಂಡು ಅಡುಗೆ ತಯಾರಿಸುತ್ತಿದ್ದಾರೆ.
ಈ ಹಿಂದೆ ಪ್ರತಿಯೊಂದು ಹೋಟೆಲ್ಗಳಲ್ಲಿ ಹಲವು ಬಗೆಯ ತಿಂಡಿಗಳನ್ನು ತಯಾರಿಸುತ್ತಿದ್ದರು. ಹಾಗಾಗಿ ಹೋಟೆಲ್ಗೆ ಬರುವ ಗ್ರಾಹಕರು ಕೇಳಿದ ತಿಂಡಿಗಳು ಸಿಗುತ್ತಿದ್ದವು. ಆದರೆ ಇದೀಗ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣದಿಂದಾಗಿ ಹೋಟೆಲ್ ಮಾಲೀಕರು ಹಲವು ತಿಂಡಿ, ಪದಾರ್ಥಗಳಿಗೆ ಕೋಕ್ ನೀಡಿದ್ದಾರೆ. ಪರಿಣಾಮ ಹೋಟೆಲ್ಗೆ ಬರುವ ಗ್ರಾಹಕರು ತಮಗಿಷ್ಟದ ತಿಂಡಿಗಳು ಸಿಗದೆ ವಾಪಸ್ಸಾಗುತ್ತಿದ್ದಾರೆ. ಇದರಿಂದಾಗಿ ಹೋಟೆಲ್ ವ್ಯಾಪಾರದ ಮೇಲೆ ಬಹುದೊಡ್ಡ ಪೆಟ್ಟು ಬಿದ್ದಿದೆ.
ಈ ಹಿಂದೆ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಿರಲಿಲ್ಲ. ಆದರೆ ಇದೀಗ ಯುದ್ಧದ ಸಮಯದಲ್ಲಿ ನಮಗೆ ಸಿಲಿಂಡರ್ಗಳ ಕೊರತೆ ಎದುರಾಗಿದೆ. ಹಾಗಾಗಿ ದೋಸೆ, ಪೂರಿ ಸೇರಿ ಇನ್ನಿತರ ತಿಂಡಿ, ಪದಾರ್ಥಗಳನ್ನು ತಯಾರು ಮಾಡುವುದನ್ನೇ ನಿಲ್ಲಿಸಿದ್ದೇವೆ. ಬಿಡದಿ ತಟ್ಟೆ ಇಡ್ಲಿ ಸೇರಿ ಕೆಲ ಪದಾರ್ಥಗಳನ್ನು ಮಾತ್ರ ಸೌದೆ ಒಲೆಗಳಲ್ಲಿ ತಯಾರಿಸುತ್ತಿದ್ದೇವೆ.
ಯುದ್ಧ ಕೇವಲ ಅಮೆರಿಕ ಹಾಗೂ ಇರಾನ್&ಇಸ್ರೇಲ್ ನಡುವೆ ಅಂದುಕೊಂಡಿದ್ದ ನಮಗೆ ಇದೀಗ ಗ್ಯಾಸ್ ಸಿಲಿಂಡರ್ ಸಿಗದ ಹಿನ್ನೆಲೆಯಲ್ಲಿ ಯುದ್ಧದ ಬಿಸಿ ನಮ್ಮ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಕಾಳ ಸಂತೆಯಲ್ಲಿ ಕಮರ್ಷಿಯಲ್ ಸಿಲಿಂಡರ್ಗಳು ಸಿಗುತ್ತವೆ. ಅಷ್ಟು ಹಣ ಕೊಟ್ಟು ಬಳಸಲು ಸಾಧ್ಯವಿಲ್ಲ. ಹಾಗಾಗಿ ನಾವು ಇಡ್ಲಿ, ವಡೆ, ರೈಸ್ ಬಾತ್ ಮಾತ್ರ ಮಾಡುತ್ತಿದ್ದೇವೆ. ಆದರೆ ಗ್ರಾಹಕರು ಬೇರೆ ಬೇರೆ ತಿಂಡಿಗಳನ್ನು ಕೇಳುತ್ತಾರೆ. ನಾವು ಅವುಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ.