ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ, ಪೊಲೀಸರ ವಶದದಲ್ಲಿ ಇದ್ದುಕೊಂಡೇ ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದರು.
ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕರಾದ ಬಂಡೆಪ್ಪ ಕಾಶಂಪೂರ್ ಮತ್ತು ಎ.ಮಂಜುನಾಥ್ ಜೊತೆಗೆ ಸಚಿವರು ಸ್ಥಳಕ್ಕೆ ಬರುತ್ತಿದ್ದಂತೆ ರೈತ ಮಹಿಳೆಯರು ತಮ್ಮ ಅಹವಾಲುಗಳನ್ನು ಹೇಳಿಕೊಂಡು ಕುಮಾರಸ್ವಾಮಿ ಮುಂದೆ ಕಣ್ಣೀರಿಟ್ಟರು. ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ, ಉಪವಾಸದಲ್ಲಿದ್ದವರನ್ನು ಬಲವಂತವಾಗಿ ಸ್ಥಳಾಂತರಿಸಿದ್ದಾರೆ ಹಾಗೂ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದರು.
ರೈತ ಮಹಿಳೆಯರ ಆರೋಪಗಳನ್ನು ಆಲಿಸಿದ ಕುಮಾರಸ್ವಾಮಿ, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಕರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಸ್ಥಳಕ್ಕೆ ಬಂದ ಎಸ್ಪಿಯಿಂದ ಘಟನೆ ಕುರಿತು ಮಾಹಿತಿ ಪಡೆದರು. ಕಳೆದ 565 ದಿನಗಳಿಂದ ರೈತರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದಾರೆ. ಮಹಿಳೆಯರೊಂದಿಗೆ ಪೊಲೀಸರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದರು.
ನಂತರ ಐಜಿ ಗಿರೀಶ್ ಅವರಿಗೆ ದೂರವಾಣಿ ಕರೆ ಮಾಡಿದ ಕುಮಾರಸ್ವಾಮಿ, ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡಿದ ಪೊಲೀಸರು ಸಸ್ಪೆಂಡ್ ಆಗಬೇಕು. ಇಲ್ಲವಾದರೆ ನಾನೇ ರಸ್ತೆಗಿಳಿಯಬೇಕಾಗುತ್ತದೆ. ನಾವು ಒಳ್ಳೆಯವರಿಗೆ ಒಳ್ಳೆಯವರು, ಸೋಮವಾರ ದೆಹಲಿಗೆ ಹೋಗಲಿಲ್ಲ ಅಂದರೂ ಪರವಾಗಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ ನಾನೇ ಹೋರಾಟಕ್ಕೆ ಬರುತ್ತೇನೆ.
ನೀವು ಕ್ರಮ ತೆಗೆದುಕೊಳ್ಳದಿದ್ದರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 10 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡುತ್ತೇನೆ. ನಾನೇ ಹೈವೆಯಲ್ಲಿ ಧರಣಿ ಕೂರುತ್ತೇನೆ ಎಷ್ಟು ಜನ ಪೊಲೀಸರು ಕರೆ ತರುತ್ತೀರಾ ತನ್ನಿ.., ಇಲ್ಲಿಯವರೆಗೆ ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗಿಲ್ಲ. ಹೆಣ್ಣುಮಕ್ಕಳು ಕಣ್ಣೀರು ಹಾಕಿದರೆ ಈ ಸರ್ಕಾರಕ್ಕೆ ಒಳ್ಳೆಯದಾಗುತ್ತಾ.? ಎಂದು ಐಜಿ ಗಿರೀಶ್ ರನ್ನು ದೂರವಾಣಿ ಮೂಲಕವೇ ತರಾಟೆ ತೆಗೆದುಕೊಂಡರು.
ರೈತರ ಒಗ್ಗಟ್ಟು ಹೊಡೆಯುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಕಾನೂನಾತ್ಮಕವಾಗಿ ನಿಮಗೆ ನ್ಯಾಯ ದೊರಕಿಸಿಕೊಡುತ್ತೇವೆ. ರೈತರ ಮೇಲೆ ದಾಖಲಾಗಿದ್ದ ಕೇಸ್ ಗೆ ಈಗಾಗಲೇ ಜಾಮೀನು ಕೊಡಿಸಿದ್ದೇವೆ.
ದಬ್ಬಾಳಿಕೆ ಮಾಡಿದ ಪೊಲೀಸರ ಮೇಲೂ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ. ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ಕೊಡಬೇಕು ಎಂದು ಕುಮಾರಸ್ವಾಮಿ ಹೇಳಿದರು.
ನಿಮ್ಮನ್ನ ದುರುಪಯೋಗ ಮಾಡಿಕೊಂಡು ನಾನು ರಾಜಕೀಯ ಮಾಡಲ್ಲ. ನಿಮ್ಮದು ನ್ಯಾಯಯುತವಾದ ಹೋರಾಟ. ಯಾವುದೇ ಕಾರಣಕ್ಕೂ ಈ ಯೋಜನೆ ಆಗಲ್ಲ. ಸರ್ಕಾರದ ಬಳಿ ಹಣವೂ ಇಲ್ಲ. ರೈತರು ದೃತಿಗೆಡಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ರೈತರಿಗೆ ಧೈರ್ಯ ತುಂಬಿದರು.
ಬಳಿಕ ರೈತರಿಗೆ ಬಾಳೆಹಣ್ಣು ತಿನ್ನಿಸಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ರೈತರು ಚನ್ನಪಟ್ಟಣದಿಂದ ಭೈರಮಂಗಲದ ಧರಣಿ ಸ್ಥಳಕ್ಕೆ ತೆರಳಿ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದರು. ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ತಿಳಿಸಿದರು. ಈ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಯಮುತ್ತು, ತಾಲೂಕು ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ರೈತಸಂಘದ ಮಲ್ಲಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವರು ಇದ್ದರು.