ಕನಕಪುರ ತಾಲೂಕು ಮುಗ್ಗೂರು ಕಾವೇರಿ ವನ್ಯ ಜಿವಿ ವಲಯದ ಅರೆಕೊಪ್ಪ ಗ್ರಾಮದ ಸಮೀಪ ರೈಲ್ವೆ ಬ್ಯಾರಿಕೇಡ್ಗೆ ಸಿಲುಕಿ ನರಳಾಡುತ್ತಿರುವ ಕಾಡಾನೆ.
ಕನಕಪುರ: ಅರೆಕೊಪ್ಪೆ ಗ್ರಾಮದ ಮುಗ್ಗೂರು ವನ್ಯ ಜೀವಿವಲಯ ಬಸವನವಾಡೆ ಬೋನಿಎಕ್ಕಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ರೈಲ್ವೆ ಬ್ಯಾರಿಕೇಡ್ ದಾಟಲು ಯತ್ನಿಸಿದ್ದ ಕಾಡಾನೆಯೊಂದು ಬ್ಯಾರಿಕೇಡ್ ಮಧ್ಯೆ ಸಿಲುಕಿ ನರಳಾಡಿದೆ.
ತಡೆಗೋಡೆಯ ಕಬ್ಬಿಣದ ಕಂಬಿಗಳಿಗೆ ಕಾಲು ಮತ್ತು ದೇಹದ ಬಾಗ ಸಿಲುಕಿಕೊಂಡಿದ್ದರಿಂದ ಆನೆಯು ದಾಟಲಾಗದೆ ತೀವ್ರ ನರಳಾಡಿದೆ. ಬುಧವಾರ ಸ್ಥಳಕ್ಕಾಗಮಿಸಿದ ಕಾವೇರಿ ವನ್ಯಧಾಮ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರಪ್ರಸಾದ್ ಹಾಗೂ ತಂಡ ಅರೆಕೊಪ್ಪ ಗ್ರಾಮದ ಸುತ್ತಮುತ್ತಲ ಹೆಚ್ಚಿನ ಜನಸಂಖ್ಯೆ ಇರುವ ಕಾರಣ ಬಿಎನ್ಎಸ್ಎಸ್ ಸೆಕ್ಷನ್ 163ರ ಅನ್ವಯ ಆದೇಶ ಜಾರಿ ಮಾಡಿ ಕಾಡಾನೆಯನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಬನ್ನೇರುಟ್ಟ ಆನೆ ಕಾರ್ಯಪಡೆ ಸಿಬ್ಬಂದಿ, ಪಶು ವೈದ್ಯಾಧಿಕಾರಿಗಳಾದ ಡಾ.ಕಿರಣ್ ಹಾಗೂ ಡಾ.ಗಿರೀಶ್, ಆನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿ ಗ್ಯಾಸ್ ಕಟ್ಟರ್ ಸಹಾಯದಿಂದ ರೈಲ್ವೆ ಕಂಬಿ ಕತ್ತರಿಸಿ ಬ್ಯಾರಿಕೇಡ್ನಿಂದ ಆನೆಯನ್ನು ಬಿಡುಗಡೆ ಮಾಡಿ, ಅದು ಚೇತರಿಸಿಕೊಂಡ ಬಳಿಕ ಸುರತವಾಗಿ ಆನೆಯನ್ನು ಕಾಡಿನೊಳಗೆ ಬಿಟ್ಟಿದ್ದಾರೆ.
ರೈಲ್ವೆ ಬ್ಯಾರಿಕೇಡ್ ತಡೆಗೋಡೆಗಳ ಕಾಮಗಾರಿ ಅಳವಡಿಕೆಯಲ್ಲಿ ಗುತ್ತಿಗೆದಾರರು ಕಬ್ಬಿಣ ಉಳಿಸಿಕೊಳ್ಳುವ ಉದ್ದೇಶದಿಂದ ತಡೆಗೋಡೆಗಳ ಅಂತರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಅಳವಡಿಸಿರುವುದೇ ಕಾಡಾನೆಗಳು ನುಸುಳಿ ಬರಲು ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಎಚ್.ಶಿವಕುಮಾರ್ ಆಪಾದಿಸಿದರು.
ಸರ್ಕಾರದ ನಿಯಮ ಪಾಲಿಸದೆ ಬೇಕಾಬಿಟ್ಟಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಕಂಬಿಗಳ ಅಂತರದಲ್ಲಿ ಆನೆಗಳು ಸುಲಭವಾಗಿ ಪ್ರವೇಶಿಸಿದರೂ ಹೊರಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುತ್ತಿವೆ. ಗುಣಮಟ್ಟ ಹಾಗೂ ವೈಜ್ಞಾನಿಕವಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಬೇಕು. ಕಬ್ಬಿಣದ ಟ್ರಾ$್ಯಕ್ ಅಳವಡಿಸುವಾಗ ಸರಿಯಾದ ಅಂತರ ಕಾಯ್ದುಕೊಂಡರೆ ಇಂತಹ ಟನೆಗಳು ಸಂಭವಿಸುವುದಿಲ್ಲ. ಕಾಮಗಾರಿ ವೇಳೆ ಅಧಿಕಾರಿಗಳು ಎಚ್ಚರವಹಿಸಬೇಕು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅನಾಹುತಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು.