ಮಾಗಡಿ ಪಟ್ಟಣದ ಮಾರುತಿ ಪಬ್ಲಿಕ್ ಶಾಲೆ ಮುಂಭಾಗ ಪ್ರೀತಿ ಧರಣಿ ಕುಳಿತಿರುವುದು. ಕಾಂಗ್ರೆಸ್ ನಾಯಕಿ ಶೈಲಜಾ, ಗಂಗರಾಜು, ದಲಿತ ಮುಖಂಡ ಸಿ.ಜಯರಾಂ, ಬಿಎಂಆರ್ಡಿಎ ಅಧ್ಯಕ್ಷ ಕೆಂಚೇಗೌಡ ಹಾಗೂ ಇತರರು ಪ್ರೀತಿ ಪ್ರತಿಭಟನೆಗೆ ಬೆಂಬಲ ನೀಡಿದ್ದರು.
ವರದಣೆ ಕಿರುಕುಳ ಆರೋಪ > ನನ್ನೊಂದಿಗೆ ಬಂದರೆ ನಾನೇ ಸಾಕುವೆನೆಂದ ಪ್ರೀತಿ
ಮಾಗಡಿ: ವರದಣೆಗಾಗಿ ಪೀಡಿಸಿದರೂ, ಮನೆಯಿಂದ ಹೊರಹಾಕಿದರೂ ಸರಿ ನನಗೆ ಆತನೇ ಬೇಕು.... ಆತ ನನ್ನೊಂದಿಗೆ ಬಂದರೆ ನಾನೇ ಅವನನ್ನು ಸಾಕುವೆನೆಂದು ಪತಿಗಾಗಿ ಆತನ ಮನೆ ಹಾಗೂ ಒಡೆತನದ ಶಿಕ್ಷಣ ಸಂಸ್ಥೆ ಮುಂದೆ ಶಾಮೀಯಾನ ಹಾಕಿಕೊಂಡು ಪತ್ನಿ ಧರಣಿ ಕುಳಿತಿರುವ ಪ್ರಸಂಗಕ್ಕೆ ಮಾಗಡಿ ಪಟ್ಟಣ ಸಾಕ್ಷಿಯಾಯಿತು.
ಪಟ್ಟಣದ ಎನ್ಇಎಸ್ ಬಡಾವಣೆ ನಿವಾಸಿ, ಶಿಕ್ಷಣ ಸಂಸ್ಥೆ ನಡೆಸುವ ರೂಪೇಶ್ ಹಾಗೂ ತಾಲೂಕಿನ ಮಾದಿಗೊಂಡನಹಳ್ಳಿ ಮೂಲದ ಸದ್ಯ ಬೆಂಗಳೂರಿನ ನಿವಾಸಿ, ಸಾಪ್ಟ್ವೇರ್ ಉದ್ಯೋಗಿ ಪ್ರೀತಿ ವರ್ಷದ ಹಿಂದೆ ವಿವಾಹವಾಗಿದ್ದು, ರೂಪೇಶ್ ಒಡೆತನದ ಶಾಲೆ ಹಾಗೂ ಮನೆ ಮುಂದೆ ಪತ್ನಿ ಪ್ರೀತಿ, ಕುಟುಂಬದೊಂದಿಗೆ ಮಂಗಳವಾರ ಧರಣಿ ಆರಂಭಿಸಿದ್ದಾರೆ.
"ಮದುವೆಯಾದ ಕೆಲವೇ ತಿಂಗಳಲ್ಲಿ ರೂಪೇಶ್ ಹಾಗೂ ಆತನ ಪಾಲಕರು, ಸಹೋದರಿ ಮತ್ತು ಸಂಬಂಧಿಗಳು ವರದಣೆಗಾಗಿ ಚಿತ್ರಹಿಂಸೆ ಕೊಡುತ್ತಿದ್ದರು. ರಾತ್ರಿವೇಳೆ ಹೊಡೆದು ಮನೆಯಿಂದ ಕಳುಹಿಸುತ್ತಿದ್ದರು. ಈ ಬಗ್ಗೆ ಎರಡು ಬಾರಿ ರಾಜಿ ಸಹ ನಡೆದಿದೆ. ಆದರೂ ಪತಿ ಬದಲಾಗಿಲ್ಲ. ನನ್ನನ್ನು ಮನೆಗೂ ಸೇರಿಸಿಕೊಳ್ಳುತ್ತಿಲ್ಲ. ಪತಿ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರೆ ನನ್ನ ತಂದೆ, ತಾಯಿಯ ಗತಿ ಏನು? ಎಂದು ಧೈರ್ಯದಿಂದ ಇದ್ದೇನೆ. ಇನ್ನಾದರೂ ಅತ್ತೆಮಾವ ನನ್ನ ಪತಿಯನ್ನು ನನ್ನೊಂದಿಗೆ ಕಳುಹಿಸಿದರೆ ಸಾಕು.. ನಾನೇ ಅವರನ್ನು ಸಾಕುತ್ತೇನೆ' ಎಂದು ಪ್ರೀತಿ ಪಟ್ಟು ಹಿಡಿದಿದ್ದಾರೆ.
ಪ್ರೀತಿ ತಂದೆ ನಾಗಣ್ಣ ಮಾತನಾಡಿ, "ನನ್ನ ಮಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇರುವ ಒಬ್ಬಳೇ ಮಗಳನ್ನು ವರ್ಷದ ಹಿಂದೆ ಲಾಂತರ ಖರ್ಚು ಮಾಡಿ ಅದ್ದೂರಿಯಾಗಿ ವಿವಾಹ ಮಾಡಿದ್ದೇವೆ. ಬಂಗಾರವನ್ನೂ ಕೊಟ್ಟಿದ್ದೇವೆ. ಅಳಿಯ ರೂಪೇಶ್ ಕುಟುಂಬ ಸಿರಿವಂತರಾಗಿದ್ದರೂ ಹಣಕ್ಕಾಗಿ ಮಗಳನ್ನು ಪೀಡಿಸುತ್ತಿದ್ದಾರೆ. ನಮ್ಮ ಊರಲ್ಲಿನ ಜಮೀನು ಹಾಗೂ ಬೆಂಗಳೂರಿನಲ್ಲಿನ ಮನೆಯನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು' ಎಂದು ಒತ್ತಾಯಿಸಿದರು.
ಪ್ರಕರಣ ಸಂಬಂಧ ಪ್ರೀತಿ ಕುಟುಂಬ ಮಾಗಡಿ ಠಾಣೆಗೆ ದೂರು ನೀಡಿದೆ.