ಕಣ್ವ ಜಲಾಶಯದಲ್ಲಿ ಜಲ ಕ್ರೀಡೆಗೆ ಸಿದ್ದಗೊಂಡಿರುವ ಬೋಟ್. 
ಬೆಂಗಳೂರು ದಕ್ಷಿಣ

ಜಿಲ್ಲೆಯಲ್ಲಿ ಜಲ ಕ್ರೀಡೆ ಮತ್ತಷ್ಟು ವಿಸ್ತಾರ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ಮತ್ತೆರಡು ಕೆರೆಗಳಲ್ಲಿ ಬೋಟಿಂಗ್
  • ಬಹುತೇಕ ಮುಂದಿನ ವಾರದಲ್ಲಿ ಆರಂಭ
  • ಈಗಾಗಲೇ ಆಕರ್ಷಣೆ ಪಡೆದಿರುವ ಬೋಟಿಂಗ್
ರಾಮನಗರ: ಈಗಾಗಲೇ ರಂಗರಾಯರದೊಡ್ಡಿ ಕೆರೆಯಲ್ಲಿ ಆರಂಭಗೊಂಡಿರುವ ಜಲ ಕ್ರೀಡೆಗಳ ಮೂಲಕ ಸದ್ದು ಮಾಡುತ್ತಿರುವ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಈಗ ಮತ್ತೆರೆಡು ಜಲಾಶಯಗಳು ಸೇರ್ಪಡೆಗೊಳ್ಳುತ್ತಿದ್ದು, ಅತಿ ಶೀಘ್ರದಲ್ಲಿಯೇ ಪ್ರವಾಸಿಗರ ಸೇವೆ ತೆರೆದುಕೊಳ್ಳಲಿವೆ.
ಜಿಲ್ಲೆಯಲ್ಲಿ ಎಕ್ಸೇಪ್ 2 ಎಕ್ಸ್‌ಪ್ಲೋರ್ ಸಂಸ್ಥೆ ಮೂಲಕ ರಂಗರಾಯರದೊಡ್ಡಿ, ಬಿಡದಿಯ ನೆಲ್ಲಿಗುಡ್ಡೆ ಕೆರೆ, ಕನಕಪುರದ ರಾವುತ್ತನಹಳ್ಳಿ ಕೆರೆ, ಮಾಗಡಿಯ ವೈಜಿಗುಡ್ಡ ಕೆರೆಗಳಲ್ಲಿ ಜಲ ಕ್ರೀಡೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿತ್ತು. ಇದರ ಭಾಗವಾಗಿ ರಂಗರಾಯರದೊಡ್ಡಿಯಲ್ಲಿ ಆರಂಭಗೊಂಡಿರುವ ಜಲ ಕ್ರೀಡೆಗೆ ಸ್ಥಳೀಯರು ಮಾತ್ರವಲ್ಲದೆ, ಪ್ರವಾಸಿಗರು ಸಹ ಮನಸೋತಿದ್ದಾರೆ. ಇದಕ್ಕೆ ಪೂರಕವಾಗಿ ಈಗ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯ ಮತ್ತು ಬಿಡದಿಯ ನೆಲ್ಲಿಗುಡ್ಡೆ ಕೆರೆಗಳಲ್ಲಿ ಜಲ ಕ್ರೀಡೆಗಳನ್ನು ಆರಂಭಗೊಳ್ಳಲಿವೆ.
ಕಣ್ವದಲ್ಲಿ ಸಾಹಸ ಕ್ರೀಡೆ: ಜಿಲ್ಲೆಯ ಪ್ರಮುಖ ಜಲಾಶಯ ಎನಿಸಿರುವ ಕಣ್ವ ಜಲಾಶಯ ಸಾಹಸ ಜಲಕ್ರೀಡೆಗಳಿಗೆ ಸಜ್ಜಾಗಿದೆ. ಪ್ರವಾಸಿಗರನ್ನು ರಂಜಿಸಲು ವಿವಿಧ ರೀತಿಯ ಬೋಟಿಂಗ್ ಸಿದ್ದಗೊಳ್ಳುತ್ತಿವೆ. ಜ.15 ವೇಳೆಗೆ ಪೂರ್ಣ ಪ್ರವಾಣದಲ್ಲಿ ಸಾರ್ವಜನಿಕ ಬಳಕೆಗೆ ಸಹಕಾರಿಯಾಗಲಿದೆ. ಇಲ್ಲಿ ಬೋಟಿಂಗ್ ಆರಂಭಿಸಲು ಕೋಸ್ಟಲ್ ಸೀ ಅಡ್ವೆಂಚರ್ಸ್‌ಗೆ ಅನುಮತಿ ನೀಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಹಿಂದಕ್ಕೆ ಸರಿದ ಪರಿಣಾಮ ಯೋಜನೆ ಹಳ್ಳ ಹಿಡಿದಿತ್ತು. ಇದಿಗ ಕಾವೇರಿ ಕಣ್ವ ಅಡ್ವೆಂಚರ್ಸ್ ನವರು ಸಾಹಸ ಜಲಕ್ರೀಡೆ ಆರಂಭಿಸುತ್ತಿದ್ದು, ಕೆಎಸ್‌ಟಿಡಿಸಿ ಜತೆಗೂಡಿ ಸಾಹಸ ಜಲಕ್ರೀಡೆಗೆ ಚಾಲನೆ ನೀಡಲಿದ್ದಾರೆ.
ಜಿಲ್ಲೆಯ ಬೇರೆ ಜಲಾಶಯಗಳಿಗೆ ಹೋಲಿಕೆ ವಾಡಿದರೆ, ಕಣ್ವ ಜಲಾಶಯದಲ್ಲಿ ಸಾಹಸ ಜಲಕ್ರೀಡೆಗಳನ್ನು ಆಯೋಜಿಸಲು ಹೆಚ್ಚು ಅನುಕೂಲಕರವಾಗಿದೆ. 776 ಹೆಕ್ಟೇರ್ ವಿಸ್ತಾರದಲ್ಲಿರುವ ಕಣ್ವ ಜಲಾಶಯಕ್ಕೆ ಕಣ್ವಶಿಂಷಾ ಏತನೀರಾವರಿ ಯೋಜನೆ ಮೂಲಕ ನೀರನ್ನು ತುಂಬಿಸಲಾಗುತ್ತಿದೆ. ಹೀಗಾಗಿ ಬೇಸಿಗೆಯಲ್ಲೂ ಜಲಾಶಯದಲ್ಲಿ ನೀರು ಇರುತ್ತದೆ.

ನೆಲ್ಲಿಗುಡ್ಡೆ ಕರೆಯಲ್ಲಿ ಕ್ರೀಡೆ

ಇನ್ನು ಬೆಂಗಳೂರಿಗೆ ಬಹುತೇಕ ಹತ್ತಿರದಲ್ಲಿಯೇ ಇರುವ ಬಿಡದಿಯ ನೆಲ್ಲಿಗುಡ್ಡೆ ಕೆರೆಯಲ್ಲಿಯೂ ಈಗ ಜಲ ಕ್ರೀಡೆ ಕಾವು ಪಡೆದುಕೊಳ್ಳಲಿದೆ. ವಿಶ್ವ ಪ್ರಮುಖ ಕೈಗಾರಿಕಾ ಕೇಂದ್ರವಾಗಿಯೇ ಗುರ್ತಿಸಿಕೊಂಡಿರುವ ಬಿಡದಿಯಲ್ಲಿ ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚಿದ್ದಾರೆ. ನೆಲ್ಲಿಗುಡ್ಡೆ ಕೆರೆಯಲ್ಲಿ ಎಸ್ಕೇಪ್ 2 ಎಕ್ಸ್‌ಪ್ಲೋರ್ ಸಂಸ್ಥೆ ಬೋಟಿಂಗ್ ನಡೆಸಲು ಸಿದ್ದತೆ ನಡೆಸುತ್ತಿದೆ. ಜ.18ರಂದು ಇಲ್ಲಿನ ಜಲ ಕ್ರೀಡೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ. ಈಗಾಗಲೇ ರಂಗರಾಯರದೊಡ್ಡಿ ಕೆರೆಯಲ್ಲಿ ಮಾತ್ರವಲ್ಲದೆ, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿಯೂ ಸಹ ಜಲ ಕ್ರೀಡೆಗಳನ್ನು ನಡೆಸುವ ಮೂಲಕ ಸೈ ಎನಿಸಿಕೊಂಡಿರುವ ಸಂಸ್ಥೆ ಈಗ ನೆಲ್ಲಿಗುಡ್ಡೆ ಕೆರೆಯಲ್ಲಿ ತನ್ನ ಛಾಪು ಮೂಡಿಸಲು ಹೊರಟಿದೆ.
ಹೆದ್ದಾರಿ ಪ್ರವಾಸಿಗರಿಗೆ ಅನುಕೂಲ
ಕಣ್ವ ಮತ್ತು ನೆಲ್ಲಿಗುಡ್ಡೆ ಕೆರೆಗಳಲ್ಲಿ ಆರಂಭಗೊಳ್ಳಲಿರುವ ಜಲ ಕ್ರೀಡೆಗಳು ಬೆಂಗಳೂರು - ಮೈಸೂರು ನಡುವಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಎರಡೂ ಜಲಾಶಯಗಳು ಸಿಲಿಕಾನ್ ಸಿಟಿ ಮತ್ತು ಸಾಂಸ್ಕೃತಿಕ ನಗರಕ್ಕೆ ಹತ್ತಿರದಲ್ಲಿಯೇ ಇರುವ ಕಾರಣ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತೆ ಇವೆ. ಇನ್ನು ಎರಡೂ ಜಲಾಶಯಗಳಿಗೆ ಹೆದ್ದಾರಿ ಸಂಪರ್ಕ ಸಹ ಉತ್ತಮವಾಗಿಯೇ ಇದೆ. ನೂತನ ದಶಪಥದ ಮೂಲಕ ಯಾವುದೇ ಅಡೆತಡೆಗಳಲ್ಲಿದೆ ಜಲಾಶಯಗಳಿಗೆ ಭೇಟಿ ನೀಡಬಹುದಾಗಿದೆ.
ಕಣ್ವ ಜಲಾಶಯ ಹೆದ್ದಾರಿಯಿಂದ ಸುಮಾರು 5 ಕಿಮೀ ದೂರದಲ್ಲಿ ಇದ್ದರೆ, ನೆಲ್ಲಿಗುಡ್ಡೆ ಕೆರೆ ಕೇವಲ ಎರಡು ಕಿ ಮೀ ದೂರದಲ್ಲಿ ಇದೆ.

ಜಲಕ್ರೀಡೆ, ಏನೇನೆಲ್ಲಾ ಲಭ್ಯ?

ಕೆಎಸ್‌ಟಿಡಿಸಿ ಹಾಗೂ ಕಣ್ವ ಕಾವೇರಿ ಅಡ್ವೆಂಚರ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕಣ್ವ ಜಲಾಶಯದಲ್ಲಿ ಕಯಾಕಿ, ಬಿಗ್ ಬೋಟ್, ಜೇಟ್ ಸ್ಕೀ(ವಾಟರ್ ಬೈಕ್), ವಾಟರ್ ಬೋಟ್, ಪೆಡಲ್ ಬೋಟ್, ಸ್ಪೀಡ್ ಬೋಟ್, ಬನಾನಾ ಬೋಟ್, ಬಂಬರ್ ಬೋಟ್, ಪ್ಲೇಯಿಂಗ್ ಬೋಟ್ ಮೊದಲಾದವುಗಳು ಪ್ರವಾಸಿಗರಿಗೆ ಒದಗಿಸಲಿವೆ. ಅತ್ತ ಎಸ್ಕೇಪ್ 2 ಎಕ್ಸ್‌ಪ್ಲೋರ್ ನೆಲ್ಲಿಗುಡ್ಡೆ ಕೆರೆಯಲ್ಲಿ ಕಯಾಕಿ, ಬಿಗ್ ಬೋಟ್, ಜೇಟ್ ಸ್ಕೀ, ವಾಟರ್ ಬೋಟ್, ಪೆಡಲ್ ಬೋಟ್, ಸ್ಪೀಡ್ ಬೋಟ್, ಬನಾನಾ ಬೋಟ್ ಒದಗಿಸಲಿದೆ.
"

ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಕೆರೆಗಳಲ್ಲಿ ಜಲ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಜ.18ರಂದು ನೆಲ್ಲಿಗುಡ್ಡೆ ಕೆರೆಯಲ್ಲಿ ಶಾಸಕ ಬಾಲಕೃಷ್ಣ ಚಾಲನೆ ನೀಡಲಿದ್ದಾರೆ. ಬೆಂಗಳೂರು - ಮೈಸೂರಿನ ಪ್ರವಾಸಿಗರ ಜತೆಗೆ ಸ್ಥಳೀಯರು ಸಹ ಇಲ್ಲಿ ಜಲ ಕ್ರೀಡೆಯ ಸವಿಯನ್ನು ಸವಿಯಬಹುದು. ಅಗತ್ಯ ಸುರಕ್ಷತಾ ಕ್ರಮಗಳನ್ನು ಸಹ ನಮ್ಮ ಸಂಸ್ಥೆ ಕೈಗೊಂಡಿದೆ.

ಸ್ವಾಮಿ, ಎಸ್, ಎಸ್ಕೇಪ್ 2 ಎಕ್ಸ್‌ಪ್ಲೋರ್