ರಾಮನಗರ ತಾಲೂಕಿನ ಕೆರೆಯೊಂದು ಬೇಸಿಗೆಯಲ್ಲಿ ಬರಿದಾಗಿರುವುದು.  
ಬೆಂಗಳೂರು ದಕ್ಷಿಣ

ಕೆರೆ-ಕುಂಟೆಗಳಲ್ಲಿ ನೀರಿನ ಬರ

ಪ್ರಮುಖ ಮುಖ್ಯಾಂಶಗಳು

  • ಜೀವಜಲಕ್ಕಾಗಿ ಪ್ರಾಣಿ-ಪಕ್ಷಿಗಳ ಪರದಾಟ!
  • *ನಾಡಿನತ್ತ ವನ್ಯಜೀವಿಗಳ ವಲಸೆ
ರಾಮನಗರ
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾಣಿ-ಪಕ್ಷಿಗಳ ದಾಹ ತಣಿಸುತ್ತಿದ್ದ ಕೆರೆ-ಕುಂಟೆಗಳು ನೀರಿಲ್ಲದೆ ಬಣಗುಡುತ್ತಿವೆ. ಕಳೆದ ಎರಡು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಜಲಮೂಲಗಳು ಬತ್ತಿದ್ದು, ಕುಡಿಯುವ ನೀರಿಗಾಗಿ ವನ್ಯಜೀವಿಗಳು ಮೈಲುಗಟ್ಟಲೆ ಅಲೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಜಿಲ್ಲೆಯಲ್ಲಿ ನೂರಾರು ದೊಡ್ಡ ಕೆರೆಗಳ ಜತೆಗೆ ಸಾವಿರಾರು ಸಣ್ಣ ಕುಂಟೆಗಳಿವೆ. ಇವು ಈ ಹಿಂದೆ ಕಾಡುಪ್ರಾಣಿಗಳಿಗೆ ಹಾಗೂ ಸಾಕುಪ್ರಾಣಿಗಳಿಗೆ `ಕಾಮಧೇನು' ಆಗಿದ್ದವು. ಆದರೆ ಈಗ ಇವು ಬರಡಾಗಿದ್ದು, ಕೃಷಿ ಭೂಮಿಯೋ ಅಥವಾ ಕೆರೆಯೋ ಎಂದು ಗುರುತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೆಟ್ಟ-ಗುಡ್ಡಗಳಲ್ಲಿರುವ ಚಿರತೆ, ಕರಡಿ, ಮೊಲ, ಕಾಡುಹಂದಿ ಹಾಗೂ ನವಿಲುಗಳು ನೀರಿಗಾಗಿ ದೊಡ್ಡ ಕೆರೆಗಳನ್ನು ಹುಡುಕಿಕೊಂಡು ನಾಡಿನತ್ತ ಮುಖ ಮಾಡುತ್ತಿವೆ.

ಬಿಸಿಲ ಝಳಕ್ಕೆ ತತ್ತರ

ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಬಿಸಿಲಿನ ತಾಪಮಾನ ಹೆಚ್ಚಿದ್ದು, ಮತ್ತಷ್ಟು ಪ್ರಾಣಿ ಪಕ್ಷಿಗಳಿಗೆ ಹೊಡೆತ ನೀಡುತ್ತಿದೆ. ಒಂದು ಕಡೆ ಬಿಸಿಲಿನಿಂದ ರಕ್ಷಿಸಿಕೊಳ್ಳಬೇಕು, ಮತ್ತೊಂದೆಡೆ ನೀರು ಸಿಗುತ್ತಿಲ್ಲ. ಇದರಿಂದ ಪ್ರಾಣಿ-ಪಕ್ಷಿಗಳು ಮೂಕರೋದನೆಯಲ್ಲೇ ನರಳುತ್ತಿವೆ. ಮತ್ತೊಂದೆಡೆ ನೆರಳಿನ ಆಸರೆ ಹುಡುಕುತ್ತಾ ಹಾವುಗಳು ಜನವಸತಿ ಪ್ರದೇಶಗಳತ್ತ ಧಾವಿಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ತೋಟಗಳತ್ತ ವನ್ಯಜೀವಿಗಳ ಲಗ್ಗೆ

ಬೋರ್‌ವೆಲ್ ನೆಚ್ಚಿಕೊಂಡು ಕೃಷಿ ನಡೆಸುತ್ತಿರುವ ರೈತರು ರೇಷ್ಮೆ, ತರಕಾರಿ, ತೋಟಕ್ಕೆ ನೀರುಣಿಸಲು ಹೆದರುವ ಸನ್ನಿವೇಶ ನಿರ್ಮಾಣವಾಗಿದೆ. ನೀರು ಅರಸಿ ಬರುವ ಪ್ರಾಣಿಗಳು ತೋಟದಲ್ಲಿ ಕೃಷಿ ಕೆಲಸ ನಿರ್ವಹಣೆ ಮಾಡುವ ಸಮಯದಲ್ಲಿ ಎಲ್ಲಿ ಮೈಮೇಲೆ ಬೀಳುತ್ತವೆ ಎಂಬ ಭಯ ರೈತರನ್ನು ಕಾಡತೊಡಗಿದೆ. ಮತ್ತೊಂದೆಡೆ ತೆಂಗಿನಕಲ್, ಹಂದಿಗೊಂದಿ ಅರಣ್ಯ ಭಾಗಕ್ಕೆ ಬಂದ ಆನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಮೇವು ತಿಂದು ಮತ್ತೆ ಅರಣ್ಯದತ್ತ ಸಾಗುವಾಗ ರೈತರ ಬೋರ್‌ವೆಲ್ ಪರಿಕರ ಹಾಳು ಮಾಡುತ್ತಿವೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.
ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳಲ್ಲಿ ಹೂಳು ತುಂಬಿ ಮುಚ್ಚಿಹೋಗಿವೆ. ಸಂಬಂಧಪಟ್ಟ ಇಲಾಖೆಗಳು ಕಾಲಕಾಲಕ್ಕೆ ಕಾಲುವೆಗಳ ಅಭಿವೃದ್ಧಿ ಮಾಡದ ಕಾರಣ, ಮಳೆ ಬಂದಾಗಲೂ ಕೆರೆಗಳಿಗೆ ನೀರು ಸೇರುತ್ತಿಲ್ಲ. ಸಮರ್ಪಕವಾಗಿ ನರೇಗಾ ಯೋಜನೆ ಜಾರಿಯಾಗದ ಕಾರಣ ಕೆರೆಗಳ ಪುನಶ್ಚೇತನ ಕಾರ್ಯ ನನೆಗುದ್ದಿಗೆ ಬಿದ್ದಿದೆ.
| ನವೀನ್, ರೈತ, ವಿಭೂತಿಕೆರೆ ಗ್ರಾಮ
ಸ್ಥಳೀಯ ಗ್ರಾಪಂ ಮಟ್ಟದಲ್ಲಿ ಕೆರೆಗಳ ಸಮೀಪ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಅನುಕೂಲವಾಗುವಂತೆ ನೀರಿನ ತೊಟ್ಟಿಗಳ ನಿರ್ಮಿಸಿ, ಅವುಗಳಿಗೆ ಗ್ರಾಪಂ ನೀರೊದಗಿಸಿದರೆ ನೀರಿನ ದಾಹ ತಣಿಸಬಹುದು. ಇಲ್ಲದಿದ್ದರೆ ಪ್ರಾಣಿ ಪಕ್ಷಿಗಳು ಮೈಲುದೂರ ರಸ್ತೆ ರಸ್ತೆಯಲ್ಲಿ ನೀರಿಗಾಗಿ ಸಾಗಿ ವಾಹನಕ್ಕೆ ಸಿಲುಕಿ ಅಪಘಾತಗೊಂಡು ಅವುಗಳ ಪ್ರಾಣಕ್ಕೂ ಕಂಟಕ ಮಾಡಿಕೊಳ್ಳುತ್ತವೆ. ಜತೆಗೆ ರಸ್ತೆಯಲ್ಲಿ ನಡೆದು ಹೋಗುವ ಜನರು, ವಾಹನ ಸವಾರರು ಭಯಗೊಂಡು ಅವುಗಳ ಕೈಗೆ ಸಿಲುಕಿ ಗಾಯಗೊಳ್ಳುವ ಸಂಭವವೂ ಉಂಟಾಗುತ್ತಿದೆ.
| ಎನ್.ಎಸ್. ಲಿಂಗೇಗೌಡ, ನಾಗೋಹಳ್ಳಿ
ಗ್ರಾಮೀಣ ಭಾಗದ ಸಣ್ಣ ಸಣ್ಣ ಕೆರೆ-ಕುಂಟೆಗಳಲ್ಲಿ ಅಥವಾ ಅರಣ್ಯ ಭಾಗದ ಕೆರೆ-ಕುಂಟೆಗಳಿಗೆ ನೀರು ಸಂಗ್ರಹ ಮಾಡುವ ಕೆಲಸ ಮಾಡಬೇಕು. ಇದರಿಂದ ನೂರಾರು ಪ್ರಾಣಿ ಪಕ್ಷಿಗಳನ್ನು ನಾವು ಬಿಸಿಲ ಝಳದಿಂದ ರಕ್ಷಣೆ ಮಾಡಿ ಅವುಗಳ ಬಾಯಾರಿಕೆ ಹೋಗಲಾಡಿಸಬಹುದು. ಇಲ್ಲದಿದ್ದರೆ ಮುಂದೆ ಪ್ರಾಣಿ ಪಕ್ಷಿಗಳು ಭೀಕರ ಪರಿಣಾಮ ಎದುರಿಸುವ ಸನ್ನಿವೇಶ ದೂರವಿಲ್ಲ.
| ರಾಘವೇಂದ್ರ, ಕಾಡನಕುಪ್ಪೆ.