ರಾಮನಗರದ ಬೆಂಗಳೂರು&ಮೈಸೂರು ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆ ಮುಂಭಾಗ ರಸ್ತೆ ಪಕ್ಕದಲ್ಲಿ ಬೆಲೆ ಕುಸಿತದಿಂದ ನಿರಾಸೆಗೊಂಡ ರೈತರು ರಾಶಿಗಟ್ಟಲೇ ಟೊಮ್ಯಾಟೊ ಸುರಿದಿರುವುದು.  
ಬೆಂಗಳೂರು ದಕ್ಷಿಣ

ಕೆಂಪು ಸುಂದರಿ ಮೇಲೆ ಯುದ್ಧದ ಕಾಮೋರ್ಡ

ರಾಮನಗರ: ಮಧ್ಯಪ್ರಾಚ್ಯ ಯುದ್ಧಕ್ಕೆ ಸದ್ಯ ಎರಡು ವಾರ ತಾತ್ಕಾಲಿಕ ವಿರಾಮ ಘೋಷಣೆಯಾಗಿದೆಯಾದರೂ ಇದುವರೆಗಿನ ಬೆಳವಣಿಗೆಗಳು ತರಕಾರಿ ಮಾರಾಟದ ಮೇಲೂ ಪರಿಣಾಮ ಬೀರಿದ್ದು, ಅದರಲ್ಲೂ ಟೊಮ್ಯಾಟೊ ಬೆಲೆ ಕುಸಿತ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಇದರ ನಡುವೆ, ಬೆಂಗಳೂರು&ಮೈಸೂರು ರಸ್ತೆ ಎಪಿಎಂಸಿ ಮಾರುಕಟ್ಟೆ ಕಾಂಪೌಂಡ್​ ಮುಂಭಾಗ 5 ಕ್ವಿಂಟಾಲ್​ಗೂ ಹೆಚ್ಚು ಪ್ರಮಾಣದ ಟೊಮ್ಯಾಟೊ ಸುರಿದು ಹೋಗಿರುವ ದೃಶ್ಯ ಬುಧವಾರ ಕಂಡುಬಂದಿದೆ. ಇದುವರೆಗಿನ ಯುದ್ಧದ ಪರಿಣಾಮ ಗ್ಯಾಸ್​ ಅನಿಲ ಕೊರತೆಯಿಂದ ನೂರಾರು ಹೋಟೆಲ್​ಗಳು ಮುಚ್ಚಿದ್ದು, ಮಾರುಕಟ್ಟೆಗೆ ಬಂದ ತರಕಾರಿ ಬಿಕರಿಯಾಗದಿರುವುದು, ಬೆಲೆಯೂ ಕಡಿಮೆ ಇರುವುದರಿಂದ ಬೇಸರಗೊಂಡ ರೈತರು ರಸ್ತೆಪಕ್ಕದ ಕಸದ ಗುಡ್ಡೆಗೆ ಸಲನ್ನು ಸುರಿದು ಹೋಗಿದ್ದಾರೆ.
ಖುಷಿ ಕಸಿದ ಕೊಲ್ಲಿ ಕದನ
ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ಭಾಗದ ಹೆಚ್ಚಿನ ರೈತರು ಟೊಮ್ಯಾಟೊ ಬೆಳೆ ಅವಲಂಬಿಸಿದ್ದಾರೆ. ನಿತ್ಯ ರಾಶಿರಾಶಿ ಟೊಮ್ಯಾಟೊ ಈ ಭಾಗದಲ್ಲಿಂದಲೇ ರಾಮನಗರದ ಮಾರುಕಟ್ಟೆ ಪ್ರವೇಶಿಸುತ್ತದೆ. ಆದರೆ ಕಳೆದ ಹಲವು ದಿನಗಳಿಂದಲೂ ಟೊಮ್ಯಾಟೊಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕೊಲ್ಲಿ ಕದನ ಶುರುವಾದ ನಂತರವಂತೂ ಮತ್ತಷ್ಟು ಬೆಲೆ ಕುಸಿತಕಂಡಿದೆ. ಕೆಲವೊಮ್ಮೆ ಕೆಜಿ ಟೊಮ್ಯಾಟೊ 100 ರೂ. ಗಡಿ ದಾಟಿ ಖುಷಿ ನೀಡಿದ್ದ ದಿನವನ್ನೂ ಕಂಡಿರುವ ರೈತರು ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆಜಿ ಟೊಮ್ಯಾಟೊ 5ರಿಂದ 10 ರೂ.ಗೆ ಮಾರಾಟವಾಗುತ್ತಿರುವುದು ಬೆಳಗಾರರಿಗೆ ಕಹಿಯಾಗಿ ಪರಿಣಮಿಸಿದೆ.
ತೋಟದಲ್ಲೇ ಬಿಡುತ್ತಿದ್ದೇವೆ!
ಬಿಳಿ ಬದನೆ ಕೆಜಿಗೆ 20ರಿಂದ 25ರೂ., ಗುಂಡು ಬದನೆ 10ರಿಂದ 15ರೂ., ಬೆಂಡೆಕಾಯಿ 25ರಿಂದ 35, 40ರೂ. ಮೆಣಸಿನಕಾಯಿ 20ರಿಂದ 40 ರೂ., ಕೋಸುಗಡ್ಡೆ 10ರಿಂದ 20ರೂ., ಬೀನ್ಸ್​ 30ರಿಂದ 40 ರೂ. ಇದೆ. ಪ್ರಸ್ತುತ ಯಾವ ತರಕಾರಿಗಳಿಗೂ ಉತ್ತಮ ಬೆಲೆ ಸಿಗುತ್ತಿಲ್ಲ. ಅದರಲ್ಲೂ ಟೊಮ್ಯಾಟೊ ಬೆಲೆ ದಿನೇದಿನೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ. ಇದರಿಂದ ಕೂಲಿ ಖರ್ಚು ಸಹ ಸಿಗದ ಕಾರಣ ಫಸಲನ್ನು ಕೊಯ್ಲು ಮಾಡದೆ ತೋಟದಲ್ಲೇ ಬಿಡುವಂತಾಗಿದೆ ಎನ್ನುತ್ತಾರೆ ಚಿಕ್ಕೇನಹಳ್ಳಿ ರೈತ ಬಸವರಾಜು.
ವೆಚ್ಚ ಜಾಸ್ತಿ
ತರಕಾರಿ ಬೆಳೆಯಲು ಔಷಧ ಸೇರಿ ಮತ್ತಿತರ ಕೃಷಿ ಕಾರ್ಯದ ಖರ್ಚಿನ ಹೊರೆ ಹೆಚ್ಚುತ್ತಿರುವ ಜತೆಗೆ ಫಸಲನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ತರುವ ವೆಚ್ಚವೂ ಅಧಿಕವಾಗಿದೆ. ಆದರೂ ಮಾರುಕಟ್ಟೆಗೆ ಟೊಮ್ಯಾಟೊ ತಂದರೆ ಇಲ್ಲಿ ಬಿಕರಿಯಾಗದೆ ರಸ್ತೆ ಸೇರುತ್ತಿದೆ ಎಂದು ಚಕ್ಕೆರೆದೊಡ್ಡಿ ರೈತ ಉಮೇಶ್​ ಅಳಲು ತೋಡಿಕೊಂಡರು.
ಹೊರಗಿನ ಮಾರುಕಟ್ಟೆಗೆ ಹೋಗುತ್ತಿಲ್ಲ
ಬೆಂಗಳೂರು, ತಮಿಳುನಾಡಿನ ಚೆನ್ನೆ$, ಮೈಸೂರು, ಕೃಷ್ಣಗಿರಿ ಸೇರಿದಂತೆ ಹಲವು ಮಾರುಕಟ್ಟೆಗೆ ರಾಮನಗರದ ಎಪಿಎಂಸಿಯಿಂದ ಟೊಮ್ಯಾಟೊ ಸರಬರಾಜಾಗುತ್ತಿತ್ತು. ಆದರೆ ಈಗ ಟೊಮ್ಯಾಟೊ ಕೊಳ್ಳುವವರು ಮಾರುಕಟ್ಟೆಗೆ ಬರದ ಕಾರಣ ಬೆಲೆ ಕುಸಿತದ ಕೊರಗಿನಲ್ಲಿ ರೈತರು ಟೊಮ್ಯಾಟೊವನ್ನು ಕಸದ ಗುಡ್ಡೆಗೆ ಸುರಿದು ಹೋಗುತ್ತಿದ್ದಾರೆ ಎನ್ನುವುದು ಮಂಡಿ ವರ್ತಕರ ಅಭಿಪ್ರಾಯ.
ಹೋಟೆಲ್​ ಬಂದ್​, ಮದುವೆ ಸಮಾರಂಭಗಳಿಲ್ಲ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್​ ಸಿಲಿಂಡರ್​ ಸಿಗದೆ ಹಲವು ಹೋಟೆಲ್​ಗಳು ಬಾಗಿಲು ಹಾಕಿದ್ದರೆ, ಇರುವ ಹೋಟೆಲ್​ಗಳು ಆಹಾರ ಪದಾರ್ಥಗಳ ಮೆನುವಿನಲ್ಲಿ ಕಡಿತ ಮಾಡಿವೆ. ಇದರಿಂದ ತಿಂಡಿಯಲ್ಲಿ ಬಳಸುವ ತರಕಾರಿ ಕಡಿಮೆಯಾಗಿರುವುದು ಒಂದು ಕಾರಣವಾದರೆ ಈ ತಿಂಗಳಿನಲ್ಲಿ ಮದುವೆ, ಶುಭ&ಸಮಾರಂಭಗಳು, ಗ್ರಾಮೀಣ ಭಾಗದಲ್ಲಿ ಹಬ್ಬ, ಹರಿದಿನಗಳು ಹೆಚ್ಚಿರುತ್ತಿದ್ದವು. ಆದರೆ ಅಂತಹ ಸಮಾರಂಭಗಳು ವಿರಳವಾಗಿರುವುದು ಬೆಲೆ ಕುಸಿತಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ.
"

ಕಳೆದ ಹಲವು ದಿನಗಳಿಂದ ಟೊಮ್ಯಾಟೊ ಹಾಗೂ ಇತರ ತರಕಾರಿ ಬೆಲೆ ಇಳಿಕೆ ಕಾಣುತ್ತಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್​ ಸಿಗದೆ ಹೋಟೆಲ್​ ಬಂದ್​ ಆಗಿರುವ ಜತೆಗೆ ಮದುವೆ, ಸಮಾರಂಭಗಳು ಹೆಚ್ಚು ನಡೆಯದಿರುವುದು ದಿಢೀರ್​ ಬೆಲೆ ಕುಸಿತಕ್ಕೆ ಕಾರಣ. ಕಾರಣ ಏನೇ ಇದ್ದರೂ ಟೊಮ್ಯಾಟೊ ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದು, ಮಾರುಕಟ್ಟೆಗೆ ತರುವ ಕೂಲಿ ಕೊಡಲೂ ಸಾಧ್ಯವಾಗದೆ ಹತಾಸೆಯಿಂದ ರಸ್ತೆ ಪಕ್ಕ ಟೊಮ್ಯಾಟೊ ಸುರಿದು ಹೋಗುತ್ತಿದ್ದಾರೆ.