ಪಾರ್ಕ್ ಜಾಗದಲ್ಲಿ ಅಕ್ರಮವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಿವೇಶನದ ಮಾಲೀಕರುಗುಂಡಿ ಅಗೆಸಿರುವುದು.
ಬಿಡದಿ: ಎಐ ಸಿಟಿ ಯೋಜನೆ ಮುನ್ನೆಲೆಗೆ ಬಂದಂತೆ ದಿನದಿಂದ ದಿನಕ್ಕೆ ಈ ಭಾಗದ ಭೂಮಿ ಬೆಲೆ ಗಗನಕ್ಕೆ ಏರುತ್ತಿದೆ. ಜತೆಜತೆಗೆ ಅಕ್ರಮಗಳೂ ಹೆಚ್ಚಾಗುತ್ತಿವೆ. ಲೇಔಟ್ನಲ್ಲಿ ಉದ್ಯಾನಕ್ಕೆ ಬಿಟ್ಟಿದ್ದ ಜಾಗವನ್ನೇ ಕೆಲ ರಿಯಲ್ ಎಸ್ಟೇಟ್ ಮಾಫಿಯಾದವರು ಅತಿಕ್ರಮಣ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಈ ಅಕ್ರಮಕ್ಕೆ ಸರ್ಕಾರಿ ಅಧಿಕಾರಿಗಳೇ ಕೈ ಜೋಡಿಸಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಹೌದು... ಬಿಡದಿ ಪಟ್ಟಣ ಬೆಂಗಳೂರಿಗೆ ಹತ್ತಿರ ಇರುವ ಕಾರಣ ಇಲ್ಲಿನ ಭೂಮಿಗೆ ಎಲ್ಲೆಲ್ಲಿದ ಬೆಲೆ ಇದೆ. ಬಿಡದಿ ಪುರಸಭೆ ವ್ಯಾಪ್ತಿಯ 8ನೇ ವಾರ್ಡ್ನ ಖಾಸಗಿ ಬಡಾವಣೆಯೊಂದರಲ್ಲಿಉದ್ಯಾನವನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಇನ್ನೊಂದು ಖಾಸಗಿ ಲೇಔಟ್ನವರು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸುತ್ತಿರುವ ಆರೋಪ ಇದ್ದು, ಇದರ ವಿರುದ್ಧ ಸಾಮಾಜಿಕ ಹೋರಾಟಗಾರರು ಕಾನೂನಿನ ಮೊರೆ ಹೋಗಿದ್ದಾರೆ.
ಪುರಸಭೆ 8ನೇ ವಾರ್ಡ್ನ ಬಡಾವಣೆ ಒಂದರಲ್ಲಿ 3 ಎಕರೆ 14 ಗುಂಟೆ ವಿಸ್ತೀರ್ಣದಲ್ಲಿ 1,798 ಅಡಿ ಜಾಗವನ್ನು ಉದ್ಯಾನವನಕ್ಕೆಂದು ಬಿಡಲಾಗಿದೆ. ಆದರೆ ಪಕ್ಕದ ಲೇಔಟ್ನ ಎರಡು ನಿವೇಶನಗಳಿಗೆ ರಸ್ತೆ ಇಲ್ಲದ ಕಾರಣ ಈ ಪಾರ್ಕ್ ಜಾಗದಲ್ಲಿ ಅಕ್ರಮವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ನಿವೇಶನದ ಮಾಲೀಕರುಗುಂಡಿ ಅಗೆಸಿದ್ದಾರೆ ಎನ್ನಲಾಗಿದೆ.
ನಾಮ್ ಕೇ ವಾಸ್ತೆಗಷ್ಟೆ ರಸ್ತೆ
ಸರ್ವೇ ನಂ.22/4ರಲ್ಲಿನ 1 ಎಕರೆ 15 ಗುಂಟೆ ವಿಸ್ತೀರ್ಣದ ಖಾಸಗಿ ಲೇಔಟ್ನಲ್ಲಿ 42 ನಿವೇಶನಗಳಿವೆ. ಈ ನಿವೇಶನಗಳ ಅಳತೆಗೂ ಆಕಾರ್ ಬಂದ್ನಲ್ಲಿ ನಮೂದಿತ ಅಳತೆಗೂ ಹೊಂದಾಣಿ ಇಲ್ಲ. ನಿವೇಶನ ಸಂಖ್ಯೆ 15ರಿಂದ 21ರವರೆಗಿನ ನಿವೇಶನಗಳಿಗೆ ಪ್ರಸ್ತುತ ಯಾವುದೇ ರಸ್ತೆಯೂ ಇಲ್ಲ. ಬಡಾವಣೆ ನೆಯಲ್ಲಿ ನಾಮ್ ಕೇ ವಾಸ್ತೆಗೆ ರಸ್ತೆ ತೋರಿಸಿದ್ದಾರೆ. ಈ ನಿವೇಶನಗಳಿಗೆ ತೆರಳಲು ರಸ್ತೆಗಾಗಿ ಪಾರ್ಕ್ ಜಾಗವನ್ನು ಒತ್ತುವರಿಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಯಾವುದೇ ಲೇಔಟ್ನಲ್ಲಿ ನಿವೇಶನಗಳಿಗೆ ರಸ್ತೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಿದ ನಂತರವಷ್ಟೇ ಅಧಿಕಾರಿಗಳು ನಿವೇಶನಗಳ ಖಾತೆ ಮಾಡಿಕೊಡಬೇಕು. ಆದರೆ, ಸರ್ವೇ ನಂ.22/4ರಲ್ಲಿನ ಖಾಸಗಿ ಲೇಔಟ್ನ 19 ಹಾಗೂ 20ನೇ ನಿವೇಶನಗಳಿಗೆ ನಕಾಶೆಯಲ್ಲಿ ಮಾತ್ರ ರಸ್ತೆ ತೋರಿಸಲಾಗಿದ್ದು, ಸ್ಥಳಕ್ಕೆ ಹೋಗಿ ಪರಿಶೀಲಿಸಿದರೆ ರಸ್ತೆಯೇ ಇಲ್ಲ. ಪುರಸಭೆಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲಿಸದೆ ಕಚೇರಿಯಲ್ಲಿ ಕುಳಿತೇ ಈ ನಿವೇಶನಗಳಿಗೆ ಇ&ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಖಾಸಗಿ ಲೇಔಟ್ನಲ್ಲಿನ ಕೆಲ ನಿವೇಶನಗಳಿಗೆ ನೆಯಲ್ಲಿ ಮಾತ್ರ ರಸ್ತೆ ತೋರಿಸಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದರೆ ರಸ್ತೆಯೇ ಇಲ್ಲ. ಪುರಸಭೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಇ&ಖಾತೆ ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮೀನಾ ಹಾಗೂ ಆರ್ಒ ನಂಜುಂಡಸ್ವಾಮಿ ವಿರುದ್ಧ ರಾಮನಗರ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಕೂಡಲೇ ಈ ಎರಡೂ ನಿವೇಶನಗಳ ಖಾತೆ ರದ್ದುಗೊಳಿಸಿ, ಪಾರ್ಕ್ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲು ಪುರಸಭೆಗೆ ನಿರ್ದೇಶನ ನೀಡಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಪಾರ್ಕ್ ಜಾಗದಲ್ಲಿನ ಕಾಮಗಾರಿ ಸ್ಥಗಿತ
ಉದ್ಯಾನವನದ ಜಾಗದಲ್ಲಿ ರಸ್ತೆ ನಿರ್ಮಾಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಕೆಯಾಗಿದ್ದು, ದೂರಿನ ಹಿನ್ನೆಲೆಯಲ್ಲಿ ಕ್ರಮಕ್ಕೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ಬಂದಿತ್ತು. ಆಗ ಅಧಿಕಾರಿಗಳು ಪಾರ್ಕ್ ಜಾಗದ ಚಕ್ಕು ಬಂದಿ ಗುರುತಿಸಿ ಅಳತೆ ಕಲ್ಲುಗಳನ್ನು ಅಳವಡಿಸಿ ಹೋಗಿದ್ದರು. ಆದರೂ ಖಾಸಗಿ ಲೇಔಟ್ನ ಕೆಲ ನಿವೇಶನಗಳ ಮಾಲೀಕರು ಈ ಕಲ್ಲುಗಳನ್ನು ಕಿತ್ತಿ, ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆಯೂ ದೂರು ಸಲ್ಲಿಕೆಯಾದ ಕಾರಣ ರಸ್ತೆ ನಿರ್ಮಿಸುತ್ತಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪುರಸಭೆಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದ್ದು, ಡಿಸಿ ಆದೇಶದಂತೆ ಪುರಸಭೆ ಇಂಜಿನಿಯರ್ಗಳು ಸ್ಥಳಕ್ಕೆ ಪರಿಶೀಲಿಸಿ, ಕಾಮಗಾರಿ ನಿಲ್ಲಿಸಿದ್ದಾರೆ.
"
ನಮ್ಮ ಬಡಾವಣೆಯಲ್ಲಿ ಪಾರ್ಕ್ಗೆ ಮೀಸಲಾಗಿದ್ದ ಜಾಗದಲ್ಲಿ ಪಕ್ಕದ ಲೇಔಟ್ನ ಕೆಲವರು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಪುರಸಭೆ ಅಧಿಕಾರಿಗಳು ಸಹ ರಸ್ತೆ ಇಲ್ಲದಿದ್ದರೂ ಇ&ಖಾತೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಲೋಕಾಯುಕ್ತ, ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ. ಇನ್ನಾದರೂ ಅಧಿಕಾರಿಗಳು ಉದ್ಯಾನವನದ ಸ್ಥಳದಲ್ಲಿ ಕೂಡಲೇ ನಾಮಫಲಕ ಅಳವಡಿಸಿ, ಪಾರ್ಕ್ ಅಭಿವೃದ್ಧಿ ಪಡಿಸಬೇಕಿದೆ.
— > ಆರ್.ಎಚ್.ರಾಜಶೇಖರ ಪಾರ್ಕ್ ಜಾಗ ಇರುವ ಬಡಾವಣೆಯ ೇಮಾಭಿವೃದ್ಧಿ ಸಂದ ಅಧ್ಯ
"
ಬಿಡದಿ ಪಟ್ಟಣದಲ್ಲಿ ಕೆಲ ಅನಧಿಕೃತ ಬಡಾವಣೆಗಳಿವೆ ಎಂಬ ಆರೋಪ ಇದೆ. ಪಾರ್ಕ್ ಜಾಗವನ್ನು ಗುರುತಿಸಿ ಸರ್ವೇ ಅಧಿಕಾರಿಗಳು ಅಧಿಕೃತವಾಗಿ ನಮಗೆ ವರದಿ ನೀಡಿಲ್ಲ. ಬಡಾವಣೆ ನಿವಾಸಿಗಳು ಹೇಳುವಂತೆ ಪಾರ್ಕ್ ಜಾಗ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಬಡಾವಣೆಗಳ ಜಾಗದ ಸರ್ವೇಗೆ ಸರ್ವೇ ಇಲಾಖೆಗೆ ಪತ್ರ ಬರೆಯಲಾಗುವುದು. ಸರ್ವೇ ಬಳಿಕ ಸಮಸ್ಯೆ ಬಗೆಹರಿಯುತ್ತದೆ.
— > ಮೀನಾ ಪುರಸಭೆ ಮುಖ್ಯಾಧಿಕಾರಿ, ಬಿಡದಿ