ಕಾರು ಹಳ್ಳಕ್ಕೆ ಬಿದ್ದು ನಜ್ಜುಗುಜ್ಜಾಗಿರುವುದು.  
ಬೆಂಗಳೂರು ದಕ್ಷಿಣ

ಅಪಘಾತದಲ್ಲಿ ಇಬ್ಬರು ಯುವಕರ ಸಾವು

ಕುದೂರು: ಸೋಲೂರಿನ ಎಂ.ಆರ್​.ಆರ್​ ಆಸ್ಪತ್ರೆ ಸಮೀಪದ ರಾಷ್ಟ್ರೀಯ ಹೆದ್ದಾರಿ&75ರಲ್ಲಿ ಬುಧವಾರ ಕಾರು, ದ್ವಿಚಕ್ರವಾಹನ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಬೈಕ್​ ಸವಾರರಿಬ್ಬರೂ ಮೃತಪಟ್ಟಿದ್ದಾರೆ.
ಸೋಲೂರು ಹೋಬಳಿಯ ಕೆಂಪೋಹಳ್ಳಿಯ ಪ್ರಜ್ವಲ್​ ಗೌಡ (29) ಹಾಗೂ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಇಟಗಿಕೋಟೆಯ ಕೊಟ್ರೇಶ್​ (28) ಮೃತರು. ಪ್ರಜ್ವಲ್​ಗೌಡ ಹಾಗೂ ಕೊಟ್ರೇಶ್​ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದು, ಕೆಂಪೋಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮನೆ ನೋಡಲು ಸ್ನೇಹಿತ ಕೊಟ್ರೇಶ್​ನನ್ನು ಪ್ರಜ್ವಲ್​ ಕರೆದುಕೊಂಡು ಬಂದಿದ್ದ. ಬುಧವಾರ ಬೆಳಗ್ಗೆ ಬೈಕ್​ನಲ್ಲಿ ಬೆಂಗಳೂರಿಗೆ ವಾಪಸ್​ ಹೋಗುತ್ತಿದ್ದ ವೇಳೆ ಕುಣಿಗಲ್​ ಕಡೆಯಿಂದ ಬಂದ ಕಾರು ಬೈಕ್​ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನೂ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಕಾರು ಸಹ ರಸ್ತೆ ಎಡಭಾಗದ ಹಳ್ಳಕ್ಕೆ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಕುದೂರು ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.