ಕಬ್ಬಾಳು ಸಮೀಪ ಕಚುವನಹಳ್ಳಿ ಕೆರೆಯಲ್ಲಿ ವಿದ್ಯಾರ್ಥಿಗಳ ಶವಗಳಿಗಾಗಿ ಹುಡುಕಾಟ ನಡೆಸುತ್ತಿರುವ ಅಗ್ನಿ ಶಾಮಕ ಸಿಬ್ಬಂದಿ.
- ಈಗಲು ಇಳಿದಿದ್ದ ವಿದ್ಯಾರ್ಥಿಗಳು ಕೆರೆ ಪಾಲು
- ಕನಕಪುರದ ಕಚುವನಹಳ್ಳಿಯಲ್ಲಿ ಘಟನೆ
- ಸ್ನೇಹಿತರೊಟ್ಟಿಗೆ ಕಬ್ಬಾಳಿಗೆ ಬಂದಿದ್ದರು
ಕನಕಪುರ: ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಸ್ನೇಹಿತರ ಕಣ್ಣು ಮುಂದೆಯೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯ ಕಚುವನಹಳ್ಳಿ ಕೆರೆಯಲ್ಲಿ ಸಂಭವಿಸಿದೆ.
ಬುಧವಾರ ಮಧ್ಯಾಹ್ನ ಕಬ್ಬಾಳು ದೇವಸ್ಥಾನಕ್ಕೆ ಬಂದಿದ್ದ ಪಿ.ಯು ಕಲಿಯುತ್ತಿದ್ದ 11 ಮಂದಿ ಸ್ನೇಹಿತರಲ್ಲಿ ಕೋಣನಕುಂಟೆ ಕ್ರಾಸ್ ನಿವಾಸಿ ಸಂತೋಷ್(18) ಹಾಗೂ ಉತ್ತರಹಳ್ಳಿ ಗುಬ್ಬಲಾಳುವಿನ ಧನುಷ್(17) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಜೊತೆಯಲ್ಲಿ ಬಂದಿದ್ದ ಸ್ನೇಹಿತರಿಬ್ಬರು ನೀರಿನಲ್ಲಿ ಮುಳುಗಿ ಕೆಲ ಕಾಲ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ ಇತ್ತ, ರಕ್ಷಣೆ ಮಾಡಲು ಸಾಧ್ಯವಾಗದೆ ಸ್ನೇಹಿತರಿಬ್ಬರು ಕಂಗಾಲಾಗಿದ್ದಾರೆ. ನಂತರ ಇವರ ಕಿರುಚಾಟವನ್ನು ಕೇಳಿ ಜೊತೆಯಲ್ಲಿದ್ದವರು ಸ್ಥಳಕ್ಕೆ ಬಂದು ನೋಡುವ ವೇಳೆಗೆ ನೀರಿನಲ್ಲಿ ಮುಳುಗಿದ ಇಬ್ಬರು ಸ್ನೇಹಿತರು ಮತ್ತೆ ಮೇಲೆ ಏಳಲಿಲ್ಲ, ಜೊತೆಯಲ್ಲಿದ್ದವರು ಕೂಡಲೇ ಸಾತನೂರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸಬ್‌ಇನ್ಸ್ಪೆಕ್ಟರ್ ದುರ್ಗೇಗೌಡ ಹಗೂ ಅಗ್ನಿಶಾಮಕ ದಳದ ಠಾಣಾಧಿಕಾರಿ ಪ್ರೇಮ್‌ಚಂದ್ ಸೇಠ್ ತಮ್ಮ ಸಿಬ್ಬಂಧಿಗೊಂದಿಗೆ ಸ್ಥಳಕ್ಕೆ ಆಗಮಿಸಿ ಶೋದ ಕಾರ್ಯ ನಡೆಸಿದ್ದಾರೆ.
ಕೋಣನಕುಂಟೆ ಸುತ್ತಮುತ್ತಲ ಕಾಲೇಜ್ ಒಂದರ 11 ಮಂದಿ ವಿದ್ಯಾರ್ಥಿಗಳು ಆಗಾಗ ಕಬ್ಬಾಳು ದೇವಸ್ಥಾನಕ್ಕೆ ಬಂದು ಕೆರೆಯ ಬಳಿ ಅಡುಗೆ ಮಾಡಿಕೊಂಡು ಮಧ್ಯಪಾನ ಹಾಗೂ ಊಟ ಉಪಚಾರ ಮಾಡಿಕೊಂಡು ಹೋಗುವುದನ್ನು ರೂಢಿಸಿಕೊಂಡಿದ್ದರು. ಅದರಂತೆ ಬುಧವಾರ 11 ಮಂದಿ ಕಬ್ಬಾಳುವಿಗೆ ಬಂದು ಕಲ್ಪವೃಕ್ಷ ಪಾರ್ಟಿ ಹಾಲ್ ಹಿಂಭಾಗದ ಕೆರೆಯ ಬಳಿ ಅಡುಗೆ ತಯಾರಿಸಿದ್ದಾರೆ. ಇದರ ಮಧ್ಯೆ ಸಂತೋಷ್ ಮತ್ತು ಧನುಷ್ ಇಬ್ಬರು ಈಜಲು ಹೋಗಿದ್ದಾರೆ. ಕೆರೆಯಲ್ಲಿ ಮರಳು ಮತ್ತು ಮಣ್ಣು ತೆಗೆಯಲು ಬೇಕಾಬಿಟ್ಟಿ ಅಗೆದಿದ್ದ ನೀರಿನ ಗುಂಡಿಯೊಳಗೆ ಬಿದ್ದಿದ್ದಾರೆ. ಸ್ನೇಹಿತರು ರಕ್ಷಣೆಗೆ ತೆರಳಿದರು ಪ್ರಯತ್ನ ಸಫಲವಾಗಿಲ್ಲ.
ಪೋಲಿಸರು ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳು ಮಧ್ಯಾಹ್ನದಿಂದ ಸಂಜೆಯವರೆವಿಗೂ ಗುಂಡಿಯಲ್ಲಿ ಮುಳುಗಿದ್ದ ಇಬ್ಬರ ಶವ ಪತ್ತೆಗೆ ಪ್ರತ್ನಿಸಿದರೂ ಪ್ರಯೋಜವಾಗಿಲ್ಲ. ಸಂಜೆ ಕತ್ತಲು ಕವಿದ ನಂತರ ಕಾರ್ಯಾಚರಣೆಗೆ ಅಡ್ಡಿಯಾದ ಹಿನ್ನಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಿ ಬೆಳಿಗ್ಗೆ ಕಾರ್ಯಾಚರಣೆ ಮುಂದುವರೆಸುವುದಾಗಿ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಬೇಕಾಬಿಟ್ಟಿ ಗುಂಡಿಗಳೇ ಸಾವಿಗೆ ಕಾರಣ: ಕೆರೆಯಲ್ಲಿ ಬಹಳ ದಿನಗಳಿಂದ ಮರಳು ಹಾಗೂ ಮಣ್ಣು ತೆಗೆಯಲು ದಂಧೆಕೋರರು ಬೇಕಾಬಿಟ್ಟಿ ಎಲ್ಲೆಂದರಲ್ಲಿ ಭಾರಿ ಆಳವಾಗಿ ಅಗೆದು ಮರಳು ತೆಗೆದು ಗುಂಡಿ ಬೀಳಿಸಿರುವುದೇ ಅವಘಡಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಮಣ್ಣು ದಂಧೆಕೋರರು ತಾಲೂಕಿನಾದ್ಯಂತ ಯಾವುದೇ ಅನುಮತಿ ಪಡೆಯದೆ ಮನೆ, ರಸ್ತೆ ಬಳಕೆ ಹೆಸರಿನಲ್ಲಿ ಇಟ್ಟಿಗೆ ಕಾರ್ಖಾನೆಗಳಿಗೆ ನಿರಂತರವಾಗಿ ಕೆರೆಕಟ್ಟೆಗಳನ್ನು ವಿರೂಪಗೊಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಇಂಥಹ ಅವಘಡಗಳಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.