ಚನ್ನಪಟ್ಟಣ ವ್ಯಾಪ್ತಿಯಲ್ಲಿ ಸರಕಳವು ಪ್ರಕರಣದ ಆರೋಪಿಗಳಿಂದ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಚಿನ್ನಾಭರಣ, ದ್ವಿಚಕ್ರವಾಹನ. ಸಿಪಿಐ ಬಿ.ಕೆ.ಪ್ರಕಾಶ್ ಹಾಗೂ ಪಿಎಸ್ಐ ಮನೋಹರ್, ಸಿಬ್ಬಂದಿ ಇದ್ದರು.
ಚನ್ನಪಟ್ಟಣ: ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಇಲ್ಲಿನ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೋಲೂರು ಗ್ರಾಮದ ಕೆ.ಎಂ. ಕಾರ್ತಿಕ್ (29), ರಾಮನಗರದ ರಾಯರದೊಡ್ಡಿ ನಿವಾಸಿ ಡಿ. ಆರ್. ಸಚಿನ್ ಬಂಧಿತರು.
ಕಳೆದ ಜ 24 ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆಂಗಲ್ ದೇವಸ್ಥಾನ ಸಮೀಪ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಸಿದುಕೊಂಡು ಇಬ್ಬರು ಅಪರಿಚಿತರು ಪರಾರಿಯಾಗಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಬಲೆಬೀಸಿದ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಈ ಹಿಂದೆಯೂ ಹಲವು ಸರಗಳ್ಳತನ ನಡೆಸಿದ್ದಾರೆ ಎಂಬುದು ತನಿಖೆಯಲ್ಲಿ ಹೊರಬಂದಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆ, ಮದ್ದೂರು ಠಾಣೆ ಹಾಗೂ ಐಜೂರು ಠಾಣೆಯ ಸರಹದ್ದಿನಲ್ಲಿ ಸರಕಳವು ಮಾಡಿದ್ದು, ಇವರಿಂದ ಸುಮಾರು 16,8 ಲ ರೂಪಾಯಿ ಮೌಲ್ಯದ 120 ಗ್ರಾಂ ಚಿನ್ನಾಭರಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಗ್ರಾಮಾಂತರ ಸಿಪಿಐ ಬಿ.ಕೆ.ಪ್ರಕಾಶ್ ಹಾಗೂ ಪಿಎಸ್ಐ ಮನೋಹರ್ ನೇತೃತ್ವದ ಸಿಬ್ಬಂದಿ ಶಿವಕುಮಾರ್, ಹನುಮಂತಶೆಟ್ಟಿ, ಚೇತನ್, ಪವನ್ ಕುಮಾರ್, ಶಿವು, ನಂದೀಶ್, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಮಹದೇವ್ ಮತ್ತು ವಾಹನ ಚಾಲಕ ಪ್ರಕಾಶ್ ಮತ್ತು ಮಹೇಶ್ ಅವರನ್ನು ಎಸ್ಪಿ ಶ್ರೀನಿವಾಸಗೌಡ ಹಾಗೂ ಡಿವೈಎಸ್ಪಿ ಕೆ.ಸಿ.ಗಿರಿ ಅಭಿನಂದಿಸಿದ್ದಾರೆ.