ಮಾಗಡಿ ಠಾಣಾ ವ್ಯಾಪ್ತಿಯಲ್ಲಿ ಕೊಳವೆಬಾವಿಗಳ ಕೇಬಲ್ ವೈರ್ಗಳನ್ನು ವಾರಸುದಾರರಾದ ರೈತರಿಗೆ ಹಸ್ತಾಂತರಿಸಲಾಯಿತು. ಇನ್ಸ್ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿ, ರೈತ ಕೆಂಪೇಗೌಡ ಇತರರು ಇದ್ದರು.
ಮಾಗಡಿ: ರಾತ್ರಿ ತೋಟದ ಮನೆ ಹಾಗೂ ಜಮೀನುಗಳಿಗೆ ನುಗ್ಗಿ ಕೊಳವೆಬಾವಿಗಳ ಕೇಬಲ್ಗಳನ್ನು ಕದಿಯುತ್ತಿದ್ದ ಕಳ್ಳರ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ದಂಡಿನಪಾಳ್ಯ ಚಂದ್ರಶೇಖರ್(45), ರಾಮನಗರದ ಇಂತಿಯಾಜ್(50) ಬಂಧಿತರು.ಬಂಧಿತರಿಂದ ಲಾಂತರ ರೂ. ಮೌಲ್ಯದ ಕೇಬಲ್ ವೈರ್ಗಳನ್ನು ವಶಪಡಿಸಿಕೊಂಡು ವಾರಸುದಾರ ರೈತರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.
15 ದಿನಗಳ ಹಿಂದೆ ಮಾಗಡಿ ತಾಲೂಕಿನ ಮಹದೇಶ್ವರ ಕಾಲನಿ, ಏಳಿಗೆಹಳ್ಳಿ ಕಾಲನಿ, ಚಕ್ರಭಾವಿ, ಮತ್ತೀಕೆರೆ, ಹುಲಿಕಟ್ಟೆ ಹಾಗೂ ದೋಣಕುಪ್ಪೆ ಸೇರಿ ಹಲವು ಗ್ರಾಮಗಳ ಜಮೀನುಗಳಿಗೆ ಬರುತ್ತಿದ್ದ ಕಳ್ಳರು ತಡರಾತ್ರಿ ಕೊಳವೆಬಾವಿಗಳ ಕೇಬಲ್ ವೈರ್ಗಳನ್ನು ಕದ್ದು ಪರಾರಿಯಾಗಿದ್ದರು. ಇದರಿಂದ ಕಂಗಾಲಾದ ರೈತರು ಮಾಗಡಿ ಠಾಣೆಗೆ ಜಂಟಿಯಾಗಿ ದೂರು ನೀಡಿದ್ದರು. ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಕೇಬಲ್ ಕಳ್ಳರನ್ನು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾತನಾಡಿ, ಗ್ರಾಮಗಳ ಹಾಗೂ ತೋಟಗಳ ಬಳಿ ಅಪರಿಚಿತರು ಓಡಾಡಿದಾಗ ಸಾರ್ವಜನಿಕರು ಹಾಗೂ ರೈತರು ಅವರ ಬಗ್ಗೆ ಗಮನ ಹರಿಸಬೇಕು. ಸುತ್ತಮುತ್ತ ಯಾವುದೇ ಅಪರಾಧ ಹಾಗೂ ಕಳವು ಪ್ರಕರಣಗಳು ನಡೆದ ತಣವೇ ಪೊಲೀಸರ ಗಮನಕ್ಕೆ ತರಬೇಕು ಎಂದರು.