ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಆಸ್ಪತ್ರೆಯ ಕಾಲ್ಪನಿಕ ಚಿತ್ರ 
ಬೆಂಗಳೂರು ದಕ್ಷಿಣ

ಆಸ್ಪತ್ರೆಗಾಗಿ ಮರ ತೆರವು ‘ನೀವೇನಂತೀರಿ?’

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆಗಾಗಿ ಮರ ತೆರವು ‘ನೀವೇನಂತೀರಿ?’
ಆಸ್ಪತ್ರೆಗಾಗಿ ಮರ ತೆರವು ‘ನೀವೇನಂತೀರಿ?’
ಮಾಗಡಿ: ತಾಲೂಕಿನ ಬಡ ಜನರ ದಶಕಗಳ ಕನಸುಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ವಿಘ್ನಗಳ ಸರಮಾಲೆ. ಮೊದಲಿಗೆ ಪ್ರತಿಮೆ ಸ್ಥಳಾಂತರದ ವಿವಾದ ಕೋರ್ಟ್ ಮೆಟ್ಟಿಲೇರಿತ್ತಾದರೂ, ಈಗ ‘ಮರಗಳ ತೆರವು’ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಆಸ್ಪತ್ರೆ ನಿರ್ಮಾಣಕ್ಕೆ ಉದ್ದೇಶಿಸಿರುವ ಸ್ಥಳದಲ್ಲಿ ಭಾರಿ ಗಾತ್ರದ ಮರಗಳು ಇದ್ದು, ಇವು ಪಟ್ಟಣದ ಜನರ ಆರೋಗ್ಯ ಕಾಪಾಡುತ್ತಿವೆ, ಅವುಗಳನ್ನು ಕಟಾವು ಮಾಡಿ ಆಸ್ಪತ್ರೆ ನಿರ್ಮಿಸುವುದು ಬೇಡ ಎಂಬುದು ಪರಿಸರವಾದಿ ಹಾಗೂ ಬಾಲಕೃಷ್ಣ ವಿರೋಧಿ ಬಣದ ವಾದವಾದರೆ, ಇಡೀ ತಾಲೂಕಿನವರ ಆರೋಗ್ಯ ಹಿತದೃಷ್ಟಿಯಿಂದ ಮರಗಳನ್ನು ಕಟಾವು ಮಾಡಿ, ಹೈಟೆಕ್ ಆಸ್ಪತ್ರೆ ನಿರ್ಮಿಸಿ ಎನ್ನುವುದು ಮತ್ತೊಂದು ಬಣದ ವಾದ.
ಮಾಗಡಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಆಸ್ಪತ್ರೆ ನಿರ್ಮಾಣವಾಗಬೇಕಿರುವ ಜಾಗದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಇದ್ದು, ಇದನ್ನು ಸ್ಥಳಾಂತರಿಸದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಜನರ ಜೀವ ಉಳಿಸುವ ಆಸ್ಪತ್ರೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಗೌರವಪೂರ್ವಕವಾಗಿ ಪ್ರತಿಮೆಯನ್ನು 500 ಮೀಟರ್ ಒಳಗೆ ಸ್ಥಳಾಂತರಿಸಲು ಹಸಿರು ನಿಶಾನೆ ತೋರಿಸಿತ್ತು. ಇದರಿಂದ ಎಲ್ಲವೂ ಸುಖಾಂತ್ಯ ಕಂಡಿತು ಎನ್ನುವಷ್ಟರಲ್ಲಿ ಮತ್ತೊಂದು ವಿವಾದ ತಲೆ ಎತ್ತಿದೆ.
ವಾದ-ವಿವಾದ!: ಪ್ರತಿಮೆಯ ಅಡ್ಡಿ ನಿವಾರಣೆಯಾಗುತ್ತಿದ್ದಂತೆ ಈಗ ಮರಗಳ ವಿಚಾರ ಮುನ್ನೆಲೆಗೆ ಬಂದಿದೆ. ಆಸ್ಪತ್ರೆ ನಿರ್ಮಾಣದ ಉದ್ದೇಶಿತ ಜಾಗದಲ್ಲಿ ಕೇವಲ 40ರಿಂದ 50 ಸಾಮಾನ್ಯ ಮರಗಳು ಮಾತ್ರ ಇವೆ ಎಂಬುದು ಕೆಲವರ ವಾದವಾದರೆ, ವಿರೋಧಿ ಬಣದವರು 400ರಿಂದ 500 ಮರಗಳಿವೆ. ಇವು ಸಹ ಬೆಲೆ ಬಾಳುವ ಮರಗಳಾಗಿದ್ದು, ಇವುಗಳನ್ನು ಕಡಿಯುವುದು ಪರಿಸರ ವಿರೋಧಿ ಕೃತ್ಯ ಎಂಬುದು ಇನ್ನೊಂದಿಷ್ಟು ಜನರ ವಾದ.
ಅಭಿಪ್ರಾಯ ಸಂಗ್ರಹ: ಮರಗಳ ಕಟಾವು ವಿಚಾರವಾಗಿ ನ್ಯಾಯಾಲಯವು ಕಾನೂನುಬದ್ಧವಾಗಿ ಅನುಮತಿ ಪಡೆಯುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ವಲಯ ಅರಣ್ಯಾಧಿಕಾರಿಗಳು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಮಂಗಳವಾರ(ಏ.21) ದವರೆಗೆ ಕಾಲಾವಕಾಶ ನೀಡಿದ್ದಾರೆ.
ಈ ಮಧ್ಯೆ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ಪರವಾಗಿರುವ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಮನುಷ್ಯ ಹೋದರೆ ಪ್ರಾಣ ವಾಪಸ್ ಬರಲ್ಲ. ಆದರೆ, ಒಂದು ಮರ ಕಡಿದರೆ ಅದರ ಬದಲಿಗೆ ಹತ್ತು ಸಸಿಗಳನ್ನು ನೆಟ್ಟು ಬೆಳೆಸಬಹುದು ಎಂಬ ಘೋಷವಾಕ್ಯದೊಂದಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ವೃಕ್ಷೋ ರಕ್ಷತಿ ರಕ್ಷಿತಃ ಎನ್ನುವುದು, ಪ್ರಕೃತಿಯ ಸಂರಕ್ಷಣೆ ಸರಿ. ಆದರೆ ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸುವ ಆಸ್ಪತ್ರೆ ನಮಗೆ ಬೇಕೇ ಬೇಕು ಎಂಬುದು ಅಭಿಯಾನ ಕೈಗೊಂಡವರ ಮಾತು. ಅದು ಏನೇ ಇರಲಿ ಜನರ ಆರೋಗ್ಯ ಮತ್ತು ಪರಿಸರದ ನಡುವಿನ ಈ ಹೋರಾಟ ಈಗ ಅರಣ್ಯ ಇಲಾಖೆಯ ಅಂಗಳದಲ್ಲಿದ್ದು, ಮಂಗಳವಾರದ ಜನಪ್ರತಿಕ್ರಿಯೆ ಆಸ್ಪತ್ರೆಯ ಭವಿಷ್ಯವನ್ನು ನಿರ್ಧರಿಸಲಿದೆ.
ಹೈಟೆಕ್ ಆಸ್ಪತ್ರೆಯಲ್ಲಿ ಏನೇನಿರಲಿದೆ?
* ಅಲ್ಟ್ರಾಸೌಂಡ್ ಸ್ಕಾೃನ್ ಮತ್ತು ಸಿ.ಟಿ. ಸ್ಕ್ಯಾನ್
* ಅತ್ಯಾಧುನಿಕ ರಕ್ತ ಪರೀಕ್ಷಾ ಲ್ಯಾಬ್ ಹಾಗೂ ಎಕ್ಸ್-ರೇ
* ಎರಡು ಹೈಟೆಕ್ ಆಪರೇಷನ್ ಥಿಯೇಟರ್‌ಗಳು
* ವೆಂಟಿಲೇಟರ್ ಸೌಲಭ್ಯವುಳ್ಳ ಐಸಿಯು
* ವೈದ್ಯರ ಮತ್ತು ದಾದಿಯರ ವಸತಿ ಸಂಕೀರ್ಣ.
ರಾಜಕೀಯ ಮೇಲಾಟ: ಆಸ್ಪತ್ರೆ ನಿರ್ಮಾಣವಾದರೆ ಬಾಲಕೃಷ್ಣಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ರಾಜಕೀಯ ವಿರೋಧಿಗಳು ಮರಗಳ ನೆಪವೊಡ್ಡಿ ತಡೆಯೊಡ್ಡುತ್ತಿದ್ದಾರೆ ಎಂಬುದು ಶಾಸಕರ ಬೆಂಬಲಿಗರ ವಾದ
ಸ್ವಾತಂತ್ರ್ಯ ಬಂದಾಗಿನಿಂದ ಮಾಗಡಿ ಆಸ್ಪತ್ರೆ ಮೇಲ್ದರ್ಜೆಗೇರಿಲ್ಲ. ಬಡವರಿಗೆ ಅನುಕೂಲವಾಗಲಿ ಎಂಬ ಶಾಸಕರ ಸದುದ್ದೇಶಕ್ಕೆ ಕೆಲವರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಮರ ತೆರವುಗೊಳಿಸಿ, ಅದರ ಹತ್ತು ಪಟ್ಟು ಮರ ಬೆಳೆಸುವ ಸಂಕಲ್ಪ ನಮ್ಮದು. ಸಾರ್ವಜನಿಕರು ಅಭಿಯಾನಕ್ಕೆ ಕೈಜೋಡಿಸಲಿ.
- ಪೂಜಾರಿಪಾಳ್ಯ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮಾಗಡಿ
ಕಾನೂನಿನಡಿ ಮರಗಳನ್ನು ತೆರವುಗೊಳಿಸಲು ಮುಂದಾಗಲಾಗಿದೆ, ಇದಕ್ಕೆ ಪರ ವಿರೋಧ ವ್ಯಕ್ತವಾದ ಕಾರಣ ಆಕ್ಷೇಪಣೆ ಅಥವಾ ಸಲಹೆ ನೀಡಲು ಸಾರ್ವಜನಿಕರಿಗೆ ಕಾಲಾವಕಾಶ ನೀಡಲಾಗಿದೆ.
-ಜಿ.ಕೆ.ಚೈತ್ರಾ, ವಲಯ ಅರಣ್ಯಾಧಿಕಾರಿ, ಮಾಗಡಿ