ಮಾಗಡಿ: ವಾರಾಂತ್ಯ ಬಂತೆಂದರೆ ಸಾಕು, ಮಾಗಡಿ&ಬೆಂಗಳೂರು ರಸ್ತೆಯ ಹೊಸಪೇಟೆ ಸರ್ಕಲ್ ವಾಹನ ಸವಾರರಿಗೆ ಮೃತ್ಯುಪಂಜರವಾಗಿ ಮಾರ್ಪಡುತ್ತಿದೆ.
ಶನಿವಾರ ಮತ್ತು ಭಾನುವಾರದಂದು ಇಲ್ಲಿನ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು, ನಾಗರಿಕರು ಪರದಾಡುತ್ತಾರೆ. ಬೆಂಗಳೂರು, ರಾಮನಗರ, ಡಾಬಸ್ಪೇಟೆಗೆ ತೆರಳುವ ಪ್ರಮುಖ ರಸ್ತೆಯಾಗಿರುವುದರಿಂದ ಸದರಿ ಸ್ಥಳದಲ್ಲಿ ವಾಹನಗಳನ್ನು ರಸ್ತೆ ಮಧ್ಯೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಇನ್ನೂ ಕೆಲ ಸವಾರರು ನಿಯಮಗಳನ್ನು ಗಾಳಿಗೆ ತೂರಿ ವಿರುದ್ಧ ದಿಕ್ಕಿನಲ್ಲಿ ಅತಿ ವೇಗವಾಗಿ ವಾಹನ ಚಾಲಾಯಿಸುತ್ತಾರೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಒಂದು ವೇಳೆ ಪ್ರಾಣಾಪಾಯವಾದರೆ ಇದಕ್ಕೆ ಹೊಣೆ ಯಾರು? ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅತ್ಯಂತ ಆಘಾತಕಾರಿ ವಿಷಯವೆಂದರೆ, ತುರ್ತು ಸಂದರ್ಭದಲ್ಲಿ ಬರುವ ಆಂಬುಲೆನ್ಸ್ಗಳಿಗೂ ದಾರಿ ಬಿಡದಷ್ಟು ಇಲ್ಲಿ ಸಂಚಾರ ದಟ್ಟಣೆ ನಿರ್ಮಾಣವಾಗುತ್ತಿದೆ. ಮಾನವೀಯತೆ ಮರೆತು ವಾಹನ ಚಲಾಯಿಸುವುದರಿಂದ ರೋಗಿಗಳ ಪ್ರಾಣಕ್ಕೂ ಸಂಚಕಾರ ತಂದೊಡ್ಡುತ್ತಿದೆ. ಸಂಚಾರಿ ನಿಯಮ ಪಾಲನೆ ಕುರಿತಂತೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ.
ಪೊಲೀಸರ ನಿಯೋಜನೆಯಲ್ಲಿ ಗೊಂದಲ
ಸರ್ಕಲ್ನಲ್ಲಿ ಕೆಲ ದಿನಗಳಷ್ಟೇ ಇಲ್ಲಿ ಪೊಲೀಸರು ಕಂಡುಬರುತ್ತಾರೆ. ಉಳಿದ ದಿನಗಳಲ್ಲಿ ಸಂಚಾರ ನಿರ್ವಹಿಸಲು ಯಾರೂ ಇರುವುದಿಲ್ಲ. ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಅತಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ಅಂತಹ ದಿನಗಳಲ್ಲಿ ಕಡ್ಡಾಯವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವುದು ತುರ್ತು ಅಗತ್ಯವಾಗಿದೆ.
ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕೂಡಲೇ ಮಧ್ಯಪ್ರವೇಶಿಸಿ ವಾರಾಂತ್ಯದಲ್ಲಿ ಸರ್ಕಲ್ನಲ್ಲಿ ಹೆಚ್ಚಿನ ಸಂಚಾರಿ ಪೊಲೀಸರನ್ನು ನಿಯೋಜಿಸುವ ಜತೆಗೆ ಆಮೆಗತಿಯಲ್ಲಿ ಸಾಗುತ್ತಿರುವ ಹೊಸಪೇಟೆ ಸರ್ಕಲ್ ರಸ್ತೆ ಕಾಮಗಾರಿಯನ್ನು ಶ್ರೀವೇ ಪೂರ್ಣಗೊಳಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹೊಸಪೇಟೆ ಸರ್ಕಲ್ನಲ್ಲಿ ಸಿಗ್ನಲ್ ಅಳವಡಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು. ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವವರು ಮತ್ತು ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ದೊಡ್ಡ ಅನಾಹುತಗಳು ಸಂಭವಿಸಿದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ನೇರಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
"
ಮಾಗಡಿ&ಬೆಂಗಳೂರು ಕೆಶಿಫ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಪೂರ್ಣಗೊಂಡ ನಂತರ ಸಿಗ್ನಲ್ ಅಳವಡಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲಾಗುವುದು. ಈಗಾಗಲೇ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲಾಗುತ್ತದೆ. ಕೆಲ ಬಂದೋಬಸ್ತ್ನಿಂದ ಸಿಬ್ಬಂದಿ ಕೊರತೆ ಇರುವ ಕಾರಣ ನಿಯೋಜಿಸಲು ಸಾಧ್ಯವಾಗುತ್ತಿಲ್ಲ.
— > ಶ್ರೀನಿವಾಸ್ ಇನ್ಸ್ಪೆಕ್ಟರ್, ಮಾಗಡಿ ಪೊಲೀಸ್ ಠಾಣೆ