ಚನ್ನಪಟ್ಟಣ-ಸಾತನೂರು ರಸ್ತೆ ಅಧ್ವಾನಗೊಂಡಿರುವುದು
ಒಂದು ಬದಿಗೆ ಡಾಂಬರು, ಇನ್ನೊಂದು ಬದಿ ಗುಂಡಿ | ಲೋಕೋಪಯೋಗಿ, ಜಲಮಂಡಳಿ ನಡುವೆ ಮೂಡದ ಸಮನ್ವಯ
ಚನ್ನಪಟ್ಟಣ: ಇಲಾಖೆಗಳ ನಡುವಿನ ಗೊಂದಲಕ್ಕೆ ವಾಹನ ಸವಾರರು ಪ್ರಾಣವನ್ನೇ ಪಣಕ್ಕಿಟ್ಟು ಸಂಚರಿಸಬೇಕಾದ ಸನ್ನಿವೇಶ ನಗರದಲ್ಲಿ ನಿರ್ಮಾಣವಾಗಿದೆ.
ಹೌದು..., ನಗರದಿಂದ ಸಾತನೂರು ಹಾಗೂ ಹಲಗೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಸಾತನೂರು ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದಕ್ಕೆ ಲೋಕೋಪಯೋಗಿ ಇಲಾಖೆ ಹಾಗೂ ಜಲಮಂಡಳಿ ನಡುವಿನ ಗೊಂದಲವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಜಲಮಂಡಳಿ ಅಧಿಕಾರಿಗಳ ರ್ನಿಲ್ಯದಿಂದ ಬಹುನಿರೀತ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ.
ನಗರದಿಂದ ಸಾತನೂರು ಹಾಗೂ ಹಲಗೂರು ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಿಕೊಂಡು ಮನೆ, ಕೆಲಸದ ಸ್ಥಳ ತಲುಪಬೇಕಾದರೆ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಿತ್ತು. ಈ ರಸ್ತೆ ಬಾಗೇಪಲ್ಲಿಯಿಂದ ಹಲಗೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದ್ದು, ಪ್ರಸಿದ್ಧ ಕಬ್ಬಾಳಮ್ಮ ದೇವಸ್ಥಾನ ಸೇರಿದಂತೆ ಹಲವಾರು ಪ್ರವಾಸಿತಾಣಗಳಿಗೂ ಸಂಪರ್ಕ ಕೊಂಡಿಯಾಗಿದೆ. ಆದರೆ, ನಗರದಲ್ಲಿ ಈ ರಸ್ತೆ ಪ್ರಾರಂಭವಾಗುವ ಸಾತನೂರು ಸರ್ಕಲ್ನಿಂದ ಮಹದೇಶ್ವರ ದೇವಸ್ಥಾನದವರೆಗಿನ ರಸ್ತೆ ಓಡಾಟಕ್ಕೆ ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಅಂತಿಮವಾಗಿ ಈ ರಸ್ತೆ ಅಭಿವೃದ್ಧಿಗೆ ಕಾಲಕೂಡಿ ಬಂದಿದ್ದರೂ ಜಲಮಂಡಳಿಯ ಗೊಂದಲದ ನೀತಿಯಿಂದಾಗಿ ಸದ್ಯ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಅವ್ಯವಸ್ಥೆ ಮುಕ್ತಿಗೆ ಜಲಮಂಡಳಿ ಅಡ್ಡಿ!
ನಗರದ ಸಾತನೂರು ಸರ್ಕಲ್ನಿಂದ ಮಹದೇಶ್ವರ ದೇವಸ್ಥಾನದವರೆಗಿನ 2 ಕಿಮೀ ರಸ್ತೆ ಡಾಂಬರೀಕರಣಕ್ಕೆ ಲೋಕೋಪಯೋಗಿ ಇಲಾಖೆಯ 4 ಕೋಟಿ ರೂ. ವೆಚ್ಚದ ಯೋಜನೆಗೆ 2025ರ ಏ.15ರಂದು ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿತ್ತು. ಆದರೆ, ಇದಕ್ಕೂ ಮೊದಲೇ ಅಂದರೆ 2024ರಲ್ಲಿ ಜಲಮಂಡಳಿ 40 ಕೋಟಿ ರೂ. ವೆಚ್ಚದ ಕೇಂದ್ರ ಸರ್ಕಾರದ ಅಮೃತ ಯೋಜನೆ ಕೈಗೊಂಡಿತ್ತು. ಈ ರಸ್ತೆಯಲ್ಲಿಯೂ ಜಲಮಂಡಳಿ ಕಾಮಗಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ತಡವಾಗಿತ್ತು. ಇದೀಗ, ರಸ್ತೆ ಒಂದು ಬದಿ ಡಾಂಬರೀಕರಣ (ಮಹದೇಶ್ವರ ದೇವಸ್ಥಾನದಿಂದ ಚನ್ನಪಟ್ಟಣ ನಗರದ ಕಡೆಗೆ)ವನ್ನು ಗುತ್ತಿಗೆದಾರರು ಮುಗಿಸಿದ್ದಾರೆ. ಆದರೆ, ಮತ್ತೊಂದು ಬದಿಯ ಕಾಮಗಾರಿ ಬಗ್ಗೆ ಇರುವ ಗೊಂದಲದಿಂದ ಗುತ್ತಿಗೆದಾರರು ಸದ್ಯ ಕಾಮಗಾರಿಯನ್ನು ನಿಲ್ಲಿಸಿದ್ದಾರೆ.
ಒಂದು ಬದಿಯಲ್ಲಿ ಜಲಮಂಡಳಿ ಪೈಪ್ ಲೈನ್ ಕಾಮಗಾರಿ ನಡೆಸುತ್ತಿದ್ದು, ಇದಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ಪಡೆಯಬೇಕಿತ್ತು. ಅನುಮತಿಗೆ ಜಲಮಂಡಳಿಯವರು ಪತ್ರ ಬರೆದಿದ್ದಾರೆ ಎನ್ನುವುದನ್ನು ಹೊರತುಪಡಿಸಿ, ಲೋಕೋಪಯೋಗಿ ಇಲಾಖೆಯೊಂದಿಗೆ ಯಾವುದೇ ಒಡಂಬಡಿಕೆಯಾಗಿಲ್ಲ. ನಿಯಮಾವಳಿಯ ಪ್ರಕಾರ ಜಲಮಂಡಳಿ ನಡೆಸುತ್ತಿರುವ ಪೈಪ್ ಲೈನ್ ಕಾಮಗಾರಿಯಲ್ಲಿ ರಸ್ತೆ ಕಟಿಂಗ್ಗೆ ಪರ್ಯಾಯವಾಗಿ ಮರುನಿರ್ಮಾಣ ಮಾಡಿಕೊಡಬೇಕು. ಇಲ್ಲವಾದರೆ, ಅದಕ್ಕೆ ತಗಲುವ ವೆಚ್ಚವನ್ನು ಭರಿಸಬೇಕಿತ್ತು. ಆದರೆ, ಈ ವಿಚಾರವಾಗಿ ಜಲಮಂಡಳಿ ಯಾವುದೇ ತೀರ್ಮಾನ ಮಾಡದೇ ಮುಗುಮ್ಮಾಗಿ ಇದ್ದಿದ್ದೇ ಸಮಸ್ಯೆಗೆ ಕಾರಣ ಎನ್ನಲಾಗಿದೆ.
ರಸ್ತೆ ಕಾಮಗಾರಿ ನಿಂತಿರೋದು ಏಕೆ?
ಎರಡು ಕಿಮೀ ರಸ್ತೆ ಡಾಂಬರೀಕರಣಕ್ಕೆ ಮಾತ್ರ ಗುತ್ತಿಗೆದಾರರಿಗೆ ಟೆಂಡರ್ ಆಗಿದೆ. ಆದರೆ, ಜಲಮಂಡಳಿಯವರು ಪೈಪ್ಲೈನ್ಗಾಗಿ ರಸ್ತೆ ಅಗೆದಿರುವ ಹಿನ್ನೆಲೆಯಲ್ಲಿ ಅವರೇ ಮರುನಿರ್ಮಾಣ ಮಾಡಬೇಕು. ಇದರ ಬಗ್ಗೆ ಜಲಮಂಡಳಿ ಯಾವುದೇ ಕ್ರಮವಹಿಸದ ಹಿನ್ನೆಲೆಯಲ್ಲಿ ಸದ್ಯ ರಸ್ತೆ ಕಾಮಗಾರಿ ಪಡೆದಿರುವ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಜಲಮಂಡಳಿ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಅಧಿಕಾರಿಗಳು ಸಹ ಜಲಮಂಡಳಿ ಕಾಮಗಾರಿಗೆ ಬ್ರೇಕ್ ಹಾಕಿದ್ದಾರೆ. ಒಟ್ಟಾರೆ. ಇನ್ನೇನು ರಸ್ತೆ ಅಭಿವೃದ್ಧಿಯಾಗುತ್ತದೆ ಎಂಬ ಕನಸೊತ್ತಿದ್ದ ಈ ಭಾಗದ ವಾಹನ ಸವಾರರು ಇಲಾಖೆಗಳ ನಡುವಿನ ಗೊಂದಲದಿಂದ ಪ್ರತಿನಿತ್ಯ ಜೀವ ಕೈಯಲ್ಲಿಡಿದು ಸಂಚರಿಸುವ ಪರಿಸ್ಥಿತಿಗೆ ಸಿಲುಕಿದ್ದಾರೆ.
ಕೇಂದ್ರ ಸರ್ಕಾರದ ಅಮೃತ ಯೋಜನೆ(ಕುಡಿಯುವ ನೀರು ಪೂರೈಕೆ) ಯೋಜನೆ ಕಾರ್ಯಕ್ರಮದಡಿ ಜಲಮಂಡಳಿ ಉಸ್ತುವಾರಿಯಲ್ಲಿ 40 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ನಡೆಯುವ ಕಡೆ ಮರುನಿರ್ಮಾಣ ಮಾಡಿಕೊಡಬೇಕಾಗಿದ್ದು ಜಲಮಂಡಳಿಯ ಕರ್ತವ್ಯ. ನಗರಸಭೆ ವ್ಯಾಪ್ತಿ ಹಾಗೂ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯಿಂದ ಅನುಮತಿ ಕಡ್ಡಾಯವಾಗಿದೆ. ಆದರೆ, ಜಲಮಂಡಳಿ ಸಾತನೂರು ರಸ್ತೆ ಸೇರಿ ಎಲ್ಲಿಯೂ ಈ ನಿಯಮ ಪಾಲಿಸಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಹೇಗಿದ್ದರೂ ಲೋಕೋಪಯೋಗಿ ಇಲಾಖೆಗೆ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಅದರಲ್ಲಿಯೇ ನಮ್ಮ ಕಾಮಗಾರಿ ಮುಗಿಸೋಣ ಎಂಬ ಹುನ್ನಾರವನ್ನು ಜಲಮಂಡಳಿ ನಡೆಸಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಜಲಮಂಡಳಿ ಅಧಿಕಾರಿಗಳು ಪ್ರತಿಕ್ರಿಯೆಗೂ ಲಭ್ಯವಾಗುತ್ತಿಲ್ಲ. ಇತ್ತೀಚೆಗೆ ಸಂಬಂಧಿಸಿದ ಜಲಮಂಡಳಿ ಎಇಇ ಮತ್ತು ಎಇ ಇಲ್ಲಿಂದ ವರ್ಗಾವಣೆಯಾಗಿರುವುದು ಸಹ ಗಮನಾರ್ಹ.
ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂ. ವ್ಯಯಿಸುತ್ತದೆ. ಆದರೆ, ಕೆಲ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ರ್ನಿಲಕ್ಷ$್ಯಕ್ಕೆ ಬಲಿಯಾಗುತ್ತವೆ ಎಂಬುದಕ್ಕೆ ಸಾತನೂರು ರಸ್ತೆ ಕಾಮಗಾರಿಯೇ ಸಾ. ಲೋಕೋಪಯೋಗಿ ಇಲಾಖೆಯಿಂದ ಒಂದು ಬದಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲಾಗಿದೆ. ಆದರೆ, ಮತ್ತೊಂದು ಬದಿಯ ಕಾಮಗಾರಿ ನಿಲ್ಲಲು ಜಲಮಂಡಳಿಯೇ ಕಾರಣ ಎನ್ನುವುದು ವಿಪರ್ಯಾಸ. ಸಂಬಂಧಿಸಿದವರು ಕೂಡಲೇ ಗೊಂದಲ ಪರಿಹರಿಸಿ, ಕಾಮಗಾರಿ ಪೂರ್ಣಗೊಳಿಸಬೇಕು.
ಸುಮಾರು 1950 ಮೀಟರ್ ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ಮುಗಿದು ಕಾಮಗಾರಿಯನ್ನೂ ಆರಂಭಿಸಿ, ಒಂದು ಬದಿಯ ಕಾಮಗಾರಿ ಮುಗಿಸಿದ್ದೇವೆ. ಮತ್ತೊಂದು ಬದಿಯಲ್ಲಿ ಜಲಮಂಡಳಿ ಪೈಪ್ಲೈನ್ ಕಾಮಗಾರಿ ನಡೆಸುತ್ತಿದೆ. ಇದರ ಬದಲಾಗಿ ಮರುನಿರ್ಮಾಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಲಮಂಡಳಿ ಸ್ಪಂದಿಸಿದರೆ ಕೂಡಲೇ ಕಾಮಗಾರಿ ಪ್ರಾರಂಭಿಸುತ್ತೇವೆ.