ಶಾಸಕ ಎಚ್​.ಸಿ.ಬಾಲಕೃಷ್ಣ  
ಬೆಂಗಳೂರು ದಕ್ಷಿಣ

ಟೌನ್​ಶಿಪ್​ ಗೋಸುಂಬೆ ರಾಜಕಾರಣ

ರಾಮನಗರ: ಬಿಡದಿ ಟೌನ್​ಶಿಪ್​ ಯೋಜನೆ ೂಷಿಸುವ ಮೂಲಕ ಕೃಷಿ ಪ್ರದೇಶವನ್ನು ರೆಡ್​ಜೋನ್​ ಮಾಡಿದವರೇ ಈಗ ಬೇಡವೆಂದು ಹೋರಾಟಕ್ಕಿಳಿದು ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕ ಎಚ್​.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕಾಲಕಾಲಕ್ಕೆ ಬಣ್ಣ ಬದಲಾಯಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ರೈತರು ಹೋರಾಟ ಮಾಡುತ್ತಿದ್ದಾರೆಂದು ಇಲ್ಲಿವರೆಗೆ ಭಾವಿಸಿದ್ದೆವು. ಆದರೆ, ಅಲ್ಲಿ ಹೋರಾಟ ಮಾಡುತ್ತಿರುವುದು ರೈತರಲ್ಲ, ಜೆಡಿಎಸ್​ನವರು ಎಂಬುದು ಸ್ಪಷ್ಟವಾಗಿದೆ. ರೈತರ ಹೆಸರಿನಲ್ಲಿ ಜೆಡಿಎಸ್​ನವರು ನಡೆಸುತ್ತಿರುವ ರಾಜಕೀಯ ಹೋರಾಟಕ್ಕೆ ನಾವೂ ರಾಜಕೀಯವಾಗಿಯೇ ಪ್ರತ್ಯುತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.
ಟೌನ್​ಶಿಪ್​ ಯೋಜನೆಗೆ ಭೂಮಿ ಕೊಡಲು ಶೇ.80 ರೈತರು ಸಿದ್ಧರಿದ್ದು, ಅವರೆಲ್ಲರೂ ಏಕೆ ಹೋರಾಟ ಮಾಡುತ್ತಿಲ್ಲವೆಂದು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಇದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವವರು ರೈತರಲ್ಲ, ಜೆಡಿಎಸ್​ನವರು ಎಂಬ ಸಂದೇಶವನ್ನು ರವಾನಿಸುತ್ತೇವೆ. ಇಲ್ಲದಿದ್ದರೆ ಜೆಡಿಎಸ್​ನವರು ಮಾಡುತ್ತಿರುವುದೇ ಸತ್ಯವೆಂದು ಜನರು ಭಾವಿಸುತ್ತಾರೆ ಎಂದರು. ಗ್ರಾಮಗಳಲ್ಲಿ ಪಾದಯಾತ್ರೆ: ಪಕ್ಷದ ಮುಖಂಡರು ಹಾಗೂ ಭೂಮಿ ಕೊಡಲು ಸಿದ್ಧರಾಗಿರುವ ರೈತರೊಂದಿಗೆ ಚರ್ಚೆ ನಡೆಸಿ ಯೋಜನಾ ವ್ಯಾಪ್ತಿಯ ಗ್ರಾಮಗಳಲ್ಲಿ ಶ್ರೀದಲ್ಲಿಯೇ ಪಾದಯಾತ್ರೆ ನಡೆಸುತ್ತೇನೆ. ಬೈರಮಂಗಲ ವೃತ್ತದಲ್ಲಿ ಎಲ್​ಇಡಿ ಸ್ಕ್ರೀನ್​ ಹಾಕಿಸಿ ಟೌನ್​ಶಿಪ್​ ವಿಚಾರದಲ್ಲಿ ಯಾವ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲಿ ಏನೆಲ್ಲ ಬೆಳವಣಿಗೆಗಳಾಗಿವೆ ಎಂಬುದನ್ನು ಬಹಿರಂಗ ಪಡಿಸುತ್ತೇನೆ ಎಂದು ಬಾಲಕೃಷ್ಣ ಹೇಳಿದರು.
ಕುಮಾರಸ್ವಾಮಿ ಅವರು ರೈತರ ಭೂಮಿಗಾಗಿ ಹೋರಾಟ ಮಾಡುತ್ತಿಲ್ಲ. ಬದಲಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ಮುಖಕ್ಕೆ ಮಸಿ ಬಳಿಯಲು ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಪ್ರಾಥಮಿಕ ಅಧಿಸೂಚನೆ ಹೊರ ಬಿದ್ದಿತು. ಆಗಿಲ್ಲದ ಹೋರಾಟ ಡಿ.ಕೆ.ಶಿವಕುಮಾರ್​ ಸಿಎಂ ಆದ ಮೇಲೆ ಏಕೆ? ಇದನ್ನು ನಾಡಿನ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ರೆಡ್​ಜೋನ್​ ಕುರಿತು ಕುಮಾರಸ್ವಾಮಿ ಆಡಿರುವ ಮಾತುಗಳು ಹಾಸ್ಯಾಸ್ಪದವಾಗಿವೆ. ರೆಡ್​ಜೋನ್​ ಆದ ಮೇಲೆ ಶಾಲೆ, ಆಸ್ಪತ್ರೆ ಕಟ್ಟುವಂತಿಲ್ಲ. ಬಿಎಂಆರ್​ಇಡಿಯವರು ರಿಸರ್ವ್​ ಮಾಡುವ 10 ಗುಂಟೆ ಅಥವಾ ಅರ್ಧ ಎಕರೆಯಲ್ಲಿ ಮಾತ್ರ ಸಾರ್ವಜನಿಕ ಕಟ್ಟಡ ನಿರ್ಮಿಸಬಹುದು. ಕುಮಾರಸ್ವಾಮಿ ಅವರು ಹೇಳಿರುವಂತೆ 10 ಸಾವಿರ ಎಕರೆಯಲ್ಲಿ ಆಸ್ಪತ್ರೆ ಕಟ್ಟುತ್ತಾರಾ ಎಂದು ವ್ಯಂಗ್ಯವಾಡಿದರು.