ರಾಮನಗರ ತಾಲೂಕು ತುಂಬೇನಹಳ್ಳಿ ನೋಟ. 
ಬೆಂಗಳೂರು ದಕ್ಷಿಣ

ತುಂಬಿದ ಕೆರೆಯಲ್ಲಿ ಅರಳಿದ ತುಂಬೇನಹಳ್ಳಿ

ರಾಮನಗರ: ಸುತ್ತಲೂ ಬೆಟ್ಟಗಳ ಸಾಲು, ಹಸಿರುಕಾನನ ಮಧ್ಯೆ ಹರಡಿಕೊಂಡಿದೆ ತುಂಬೇನಹಳ್ಳಿ. ರಾಮನಗರ ತಾಲೂಕು ಕೈಲಾಂಚ ಹೋಬಳಿಯ ತುಂಬೇನಹಳ್ಳಿ ಮೊದಲು ಹೆಬ್ಬಕೋಡಿ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈಗಲೂ ಹೆಬ್ಬಕೋಡಿ ಗ್ರಾಮವಿದ್ದು, ಕಂದಾಯ ಗ್ರಾಮವಾಗಿದೆ. ಆದರೆ ಅಲ್ಲಿ ಕಡಿಮೆ ಸಂಖ್ಯೆ ಮನೆಗಳಿದ್ದು, ಈಗಿನ ತುಂಬೇನಹಳ್ಳಿಯಲ್ಲಿ ಗ್ರಾಮಸ್ಥರು ಮನೆ ಕಟ್ಟಿಕೊಂಡು ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ.
ಹೆಬ್ಬಕೋಡಿ&ತುಂಬೇನಹಳ್ಳಿಯಲ್ಲಿ ಸುಮಾರು 900 ಮತದಾರರನ್ನೊಳಗೊಂಡು 2000 ಜನಸಂಖ್ಯೆ ಇದೆ. ಮೂವರು ಗ್ರಾಪಂ ಸದಸ್ಯರಿದ್ದಾರೆ. ರಾಮನಗರ ಜಿಲ್ಲಾ ಕೇಂದ್ರದಿಂದ 11 ಕಿ.ಮೀ. ಅಂತರದಲ್ಲಿರುವ ತುಂಬೇನಹಳ್ಳಿ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಹಂದಿಗೊಂದಿ ಅರಣ್ಯ ಪ್ರದೇಶ ಗ್ರಾಮವನ್ನು ಸುತ್ತುವರೆದಿದ್ದು, ಬೆಟ್ಟಗಳ ಸಾಲು, ಸುಂದರ ವನಸಿರಿ ಇಲ್ಲಿದೆ. ಸದ್ಯ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ಬಿಡದಿ ಹುಣಸನಹಳ್ಳಿ ರಾಮನಗರ ರಸ್ತೆಯಲ್ಲಿದೆ. ಸೌಕರ್ಯಗಳಲ್ಲದೆ ಧಾರ್ಮಿಕ, ಶೈಕ್ಷಣಿಕವಾಗಿಯೂ ಗ್ರಾಮ ಮುನ್ನಲೆ ಬಂದಿವೆ.
ದೇವರಾದ ಅಣ್ಣ&ತಂಗಿಯರು
ತುಂಬೇನಹಳ್ಳಿಯಲ್ಲಿ ಮುತ್ತಾಲಮ್ಮ, ಮಾರಮ್ಮ, ಮುತ್ತರಾಯಸ್ವಾಮಿ, ಕರಗದಗುಡಿ, ಶನೈಶ್ಚರ, ಹೆಬ್ಬಕೋಡಿ ಗ್ರಾಮದಲ್ಲಿ ಮಾರಮ್ಮ, ಕಬ್ಬಾಳಮ್ಮ ದೇವಾಲಯಗಳಿವೆ. ಪ್ರತಿ ವರ್ಷ ಹರಿಸೇವೆ ನಡೆಯುತ್ತದೆ. ಹತ್ತಾರು ವರ್ಷಗಳಿಗೆ ಒಂದು ಭಾರಿ ಅಗ್ನಿಕೊಂಡ ಈರಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಮುತ್ತಾಲಮ್ಮ, ಮಾರಮ್ಮ, ಮುತ್ತರಾಯಸ್ವಾಮಿಗೆ ತನ್ನದೇ ಇತಿಹಾಸವಿದೆ. ಚನ್ನಪಟ್ಟಣ ತಾಲೂಕು ದಶವಾರ ಗ್ರಾಮದಿಂದ ಪೂರ್ವಾಭಿಮುಖವಾಗಿ ಮತ್ತಾಲಮ್ಮ, ಮಾರಮ್ಮ, ಮುತ್ತರಾಯ ಅಣ್ಣ&ತಂಗಿಯರು ಈಗಿನ ತುಂಬೇನಹಳ್ಳಿ ಬಳಿ ನಡೆದುಕೊಂಡು ಹೋಗುವಾಗ ಕೊನೆ ತಂಗಿ ಮುತ್ತಾಲಮ್ಮ ತುಂಬೇನಹಳ್ಳಿ ಬಳಿ ಕುಳಿತುಕೊಳ್ಳುತ್ತಾಳೆ. ಒಂದಷ್ಟು ದೂರ ಸಾಗಿದ ಅಕ್ಕ ಮಾರಮ್ಮ ತಂಗಿ ಬರಲಿಲ್ಲ ಎಂದು ಈಗಿನ ಹೆಬ್ಬಕೋಡಿ ಬಳಿ ಕಾಯುತ್ತ ಕುಳಿತುಕೊಳ್ಳುತ್ತಾಳೆ. ಇಬ್ಬರು ತಂಗಿಯರನ್ನು ಬಿಟ್ಟು ಮುಂದೆ ಸಾಗಿದ ಅಣ್ಣ ಬೆಟ್ಟದ ದಾರಿಯಲ್ಲಿ ತಂಗಿಯರ ಬರುವಿಕೆಗಾಗಿ ಕಾಯುತ್ತ ಕುಳಿತುಕೊಳ್ಳುತ್ತಾನೆ. ಇವರು ಕುಳಿತಲ್ಲಿಯೇ ದೇವರಾದರು ಎಂಬುದು ಪ್ರತಿತಿ. ಇಲ್ಲಿ ಮೂವರ ಹೆಸರಿನಲ್ಲಿಯೂ ದೇವಾಲಯಗಳನ್ನು ನಿರ್ಮಿಸಲಾಗಿದೆ. ಪ್ರತಿ ಮಂಗಳವಾರ ಮುತ್ತಾಲಮ್ಮ, ಮಾರಮ್ಮ ದೇವರಿಗೆ ಪೂಜೆ ನಡೆದರೆ, ಶನಿವಾರ ಮುತ್ತರಾಯನಿಗೆ ಪೂಜೆ ನಡೆಯುತ್ತದೆ.
ತುಂಬಿದ ಕೆರೆಯಲ್ಲಿ ಅರಳಿದ "ತುಂಬೇ'ನಹಳ್ಳಿ
ಗ್ರಾಮಕ್ಕೆ ಈ ಹಿಂದೆ ಭೋವಿ ಜನಾಂಗ, ವಿಶ್ವಕರ್ಮ ಜನಾಂಗದವರು ವಲಸೆ ಬಂದು ನೆಲೆ ನಿಂತರಂತೆ. ಕಾಲಾಂತರದಲ್ಲಿ ವಿಶ್ವಕರ್ಮರು ನಗರ ಪ್ರದೇಶಗಳತ್ತ ಮುಖ ಮಾಡಿದ ಪರಿಣಾಮ ಬೇರೆ ಜನಾಂಗದವರು ಗ್ರಾಮಕ್ಕೆ ಬಂದಿದ್ದು, ಈಗ ಎಲ್ಲ ಜಾತಿ&ಜನಾಂಗ ನೆಲೆಸಿದೆ. ಗ್ರಾಮದ ಸುತ್ತಲೂ ತುಂಬೇ ಗಿಡ ತುಂಬೇ ಹೂವು ಹೆಚ್ಚಾಗಿ ಇದ್ದವಂತೆ. ಹಾಗೆಯೇ ಗ್ರಾಮದ ಮಧ್ಯೆ ಊರು ಕೆರೆ ಇದ್ದು, ಬೇಸಿಗೆ ಕಾಲದಲ್ಲೂ ಕೆರೆ ತುಂಬಿರುತ್ತಿದ್ದ ಕಾರಣ ತುಂಬೇಹೂವು ಗಿಡ, ತುಂಬಿದ ಕೆರೆ ಸೇರಿಕೊಂಡು ತುಂಬೇನಹಳ್ಳಿಯಾಗಿದೆ ಎನ್ನುತ್ತಾರೆ ಹಿರಿಯರು. ಜತೆಗೆ ಹಳೇ ಗ್ರಾಮ ಕೂಡ ಹೆಬ್ಬಕೋಡಿಯಾಗಿದ್ದು, ಈ ಗ್ರಾಮ ಕೆರೆ ಹಿರಿದಾಗಿ ಕೋಡಿ ಬೀಳುವ ಕಾರಣ ಹೆಬ್ಬಕೋಡಿ ಹೆಸರಿನಿಂದ ಕರೆಯಲ್ಪಡುತ್ತಿದೆ. ಕಂದಾಯ ಗ್ರಾಮ ತುಂಬೇನಹಳ್ಳಿ ಬದಲು ಹೆಬ್ಬಕೋಡಿಯೇ ಆಗಿದೆ.
ಕಾಕಡ ಹೂವು
ಕಳೆದ ಹಲವು ವರ್ಷಗಳಿಂದ ಗ್ರಾಮದ ಜನ ಕಾಕಡ ಹೂವು ಬೆಳೆಯಲ್ಲಿ ತೊಡಗಿದ್ದಾರೆ. ವಾಣಿಜ್ಯ ಬೆಳೆಯಾಗಿ ಸುಮಾರು ಶೇ.50ರಷ್ಟು ಗ್ರಾಮಸ್ಥರು ಕಾಕಡ ಹೂವು ಬೆಳೆದು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಿ ಬರುತ್ತಾರೆ. ಇದು ಅವರ ಪ್ರತಿದಿನದ ಕಾಯಕವಾಗಿದೆ.
ಹೈನುಗಾರಿಕೆಯತ್ತ ಯುವಕರ ಚಿತ್ತ
ಹೆಚ್ಚಾಗಿ ನೀರಾವರಿ ಕೆರೆ ಇಲ್ಲದ ಕಾರಣ ಬೋರ್​ವೆಲ್​ ಕೊರೆಸಿಕೊಂಡಿರುವ ರೈತರು ಕಾಕಡ ಹೂವು, ಮಾವು, ತೆಂಗು, ರೇಷ್ಮೆ ಬೆಳೆ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಡೇರಿ ಇದ್ದು ಪ್ರತಿದಿನ 2,500 ಲೀಟರ್​ ಹಾಲು ಉತ್ಪಾದನೆಯಾಗುತ್ತದೆ. 5,000 ಲೀಟರ್​ ಬಿಎಂಸಿ ಕೇಂದ್ರವಿದೆ.
ಕೆರೆಗಳು
ಗ್ರಾಮದ ಮಧ್ಯೆ ಊರುಕೆರೆ, ಸಂಬಮ್ಮನಕೆರೆ, ಹೆಬ್ಬಕೋಡಿ ಕೆರೆ, ಕರದ ಕಟ್ಟೆ ಕೆರೆಗಳಿದ್ದು, ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಿದೆ. ಈ ಕೆರೆಗಳನ್ನು ಆಶ್ರಯಿಸಿ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮದ ಕೆರೆ ಏರಿ ಮೇಲೆ ಅರಳಿಮರದ ಅಶ್ವತ್ಥಕಟ್ಟೆ ನಿರ್ಮಣ ಮಾಡಲಾಗಿದೆ.
ನರೇಗಾ ವರದಾನ
ಕೆಂಗಲ್​ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ನಂತರ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಿವೆ. ಜತೆಗೆ ಗ್ರಾಮದಲ್ಲಿ ಆಯುರ್ವೇದ ಆಸ್ಪತ್ರೆ, ಪಶು ಆಸ್ಪತ್ರೆ, ಭಜನಾ ಮಂದಿರ, ಡೇರಿ, ಶುದ್ಧ ನೀರಿನ ಟಕ, ಬಸ್​ ನಿಲ್ದಾಣ ಇವೆ. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನರೇಗಾ ಯೋಜನೆಯಡಿ ವಾಲಿಬಾಲ್​, ಕಬಡ್ಡಿ, ಖೋಖೋ, ಶೆಟಲ್​ ಬ್ಯಾಟ್​ಮಿಂಟನ್​ ಕ್ರೀಡಾಗಂಣವನ್ನು ಆಧುನಿಕ ರೀತಿಯಲ್ಲಿ ವಿನ್ಯಾಸ ಮಾಡಿಕೊಡಲಾಗಿದೆ. ಜತೆಗೆ ಸಭಾಂಗಣ, ಶಾಲಾ ಕಾಂಪೌಂಡ್​ ನಿರ್ಮಿಸಲಾಗಿದೆ.
ಕಾಡು ಪ್ರಾಣಿಗಳ ಕಾಟ
ಗ್ರಾಮದ ಸುತ್ತಲೂ ಹಂದಿಗೊಂದಿ ಅರಣ್ಯ ಪ್ರದೇಶವಿದ್ದು, ಚಿರತೆ, ಕರಡಿ, ಕಾಡುಹಂದಿ, ನವಿಲು, ಜಿಂಕೆ, ಆನೆಗಳ ಉಪಟಳವಿದೆ. ತೆಂಗಿನಕಲ್ಲು ಅರಣ್ಯಕ್ಕೆ ಕಾವೇರಿ ವನ್ಯಜಿವಿಧಾಮದಿಂದ ಬರುವ ಆನೆಗಳು ಹಂದಿಗೊಂದಿ ಅರಣ್ಯಕ್ಕೆ ಬಂದು ಗ್ರಾಮಅಂಚಿನಲ್ಲಿರುವ ಕಾರಣ ರಾಗಿ, ಜೋಳ ಫಸಲು, ತೆಂಗು, ಮಾವಿನಮರಗಳನ್ನು ನಾಶ ಮಾಡುತ್ತಿರುತ್ತವೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.
ಮತ್ತಷ್ಟು ಅಭಿವೃದ್ಧಿ ಬೇಕು
ಗ್ರಾಮದಲ್ಲಿ ಕೃಷಿಕರೇ ಹೆಚ್ಚಿದ್ದು, ಆನೆಗಳ ಉಪಟಳ ತಡೆಯಬೇಕಿದೆ. ಅರಣ್ಯದಂಚಿನಲ್ಲಿ ರೈತರ ಜಮೀನಿಗೆ ಆನೆಗಳು ಬರದಂತೆ ತಡೆಯಲು ರೈಲ್ವೆ ಕಂಬಿ ತಡೆ ನಿರ್ಮಾಣಕ್ಕೆ ಒತ್ತು ನೀಡಬೇಕು ಮತ್ತು ಕೆರೆ ತುಂಬಿಸುವ ಯೋಜನೆಯಡಿ ಕೃಷಿಗೆ ನೀರಾವರಿ ಒದಗಿಸಬೇಕು. ಕೈಲಾಂಚ ಹೋಬಳಿಯ ಗಡಿ ಗ್ರಾಮವಾಗಿರುವ ಕಾರಣ ಆರೋಗ್ಯ ಕೇಂದ್ರ ಗ್ರಾಮಸ್ಥರ ಪ್ರಮುಖ ಬೇಡಿಕೆ.
"

ತುಂಬೇನಹಳ್ಳಿಗೆ ಹೆಬ್ಬಕೋಡಿ ಮೂಲ ಕಂದಾಯ ಗ್ರಾಮವಾಗಿದೆ. ಗ್ರಾಮವು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ೇತ್ರಗಳಲ್ಲಿ ಸದಾ ಮುಂದಿದೆ. ಮಾಜಿ ಮುಖ್ಯಮಂತ್ರಿ ಕೆಂಗಲ್​ ಹನುಮಂತಯ್ಯನವರು ನಮ್ಮ ಗ್ರಾಮಕ್ಕೆ ಮೊಟ್ಟ ಮೊದಲು ಶಾಲೆ ಮಂಜೂರು ಮಾಡಿಸಿ ಕೊಟ್ಟಿದ್ದಾರೆ. ಇಂದು ಎಲ್ಲರೂ ಯಾವುದೇ ದ್ವೇಷ, ಅಸೂಯೆ ಇಲ್ಲದೆ ಒಗ್ಗಟ್ಟಿನಿಂದ ಜೀವನ ಕಂಡುಕೊಂಡಿದ್ದೇವೆ. ಇಂತಹ ಗ್ರಾಮದಲ್ಲಿ ಜನ್ಮತಾಳಿದ ನಾವೇ ಧನ್ಯರು. ನಮ್ಮ ಗ್ರಾಮ ನಮ್ಮ ಹೆಮ್ಮೆ.