ಅಪಘಾತದಲ್ಲಿ ಮೃತಪಟ್ಟ ಯುವಕರು. 
ಬೆಂಗಳೂರು ದಕ್ಷಿಣ

ಅಪಘಾತದಲ್ಲಿ ಮೂವರು ಯುವಕರ ಸಾವು

ಕುದೂರು: ರಾಷ್ಟ್ರೀಯ ಹೆದ್ದಾರಿ&75ರ ಮರೂರು ಹ್ಯಾಂಡ್​ ಪೋಸ್ಟ್​ ಬಳಿ ಶನಿವಾರ ಬೆಳಗಿನ ಜಾವ ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯ ನವೀನ್​(22), ಬೇಲೂರಿನ ಅಭಿಷೇಕ್​(21) ಹಾಗೂ ದಾವಣಗೆರೆಯ ಮನೋಜ್​(22) ಮೃತರು.
ಮೂವರೂ ಸ್ನೇಹಿತರಾಗಿದ್ದು, ಅಭಿಷೇಕ್​ ಬೆಂಗಳೂರಿನ ಆಚಾರ್ಯ ಕಾಲೇಜು, ಮನೋಜ್​ ಹಾಗೂ ನವೀನ್​ ಸಪ್ತಗಿರಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಓದುತ್ತಾ ಹಾಸ್ಟೆಲ್​ನಲ್ಲಿದ್ದರು.
ಬಿರಿಯಾನಿ ತಿನ್ನುವ ಆಸೆಯಿಂದ ಒಂದೇ ಬೈಕ್​ನಲ್ಲಿ ಕುಣಿಗಲ್​ ಕಡೆ ಹೋಗುತ್ತಿದ್ದಾಗ ಬೆಂಗಳೂರು ಕಡೆ ಹೊರಟಿದ್ದ ಲಾರಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮೂವರೂ ಒಂದೊಂದು ಕಡೆ ಹಾರಿ ಬಿದ್ದಿದ್ದು, ಅಭಿಷೇಕ್​ ಹಾಗೂ ಮನೋಜ್​ ಸ್ಥಳದಲ್ಲೆ ಕೊನೆಯುಸಿರೆಳೆದರೆ, ನವೀನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ ಎನ್ನಲಾಗಿದೆ.
ಕುದೂರು ಪೊಲೀಸರು ಸ್ಥಳ ಪರಿಶೀಲಿಸಿ, ಮರಣೋತ್ತರ ಪರೀೆಗಾಗಿ ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಮಕ್ಕಳ ಸಾವಿನ ಸುದ್ದಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.