ಕಗ್ಗಲೀಪುರದ ಅಗರ ಬಳಿ ಅಪಘಾತಕ್ಕೆ ಒಳಗಾದ ಕಾರು.
- ಲಾರಿಗೆ ಕಾರು ಡಿಕ್ಕಿಯಾಗಿ ದುರಂತ
- ಗಂಭೀರ ಗಾಯಗೊಂಡವ ಆಸ್ಪತ್ರೆಗೆ ದಾಖಲು
ಬೆಂಗಳೂರು-ಕನಕಪುರ ರಾಷ್ಟ್ರೀಯ ಹೆದ್ದಾರಿ ಅಗರ ಕ್ರಾಸ್ ಬಳಿ ಲಾರಿ ಹಿಂಬದಿಗೆ ಕಾರು ಡಿಕ್ಕಿಯಾಗಿ ಮೂವರು ಯುವಕರು ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ.
ಬೆಂಗಳೂರಿನ ತಿಲಕ ನಗರ ಸೈಯದ್ ಪಾಷಾ (22), ಯೂನಿಫ್ ಬಾನ್ (23) ಅಜರ್ ಪಾಷಾ(22) ಮತೃರು ಹಾಗೂ ಪರಾಜ್ (23) ಗಾಯಾಳು.
ನಾಲ್ವರು ಭಾನುವಾರ ಬೆಳಗಿನ ಜಾವ ಬೆಂಗಳೂರಿನಿಂದ ಹಾರೋಹಳ್ಳಿಯ ಸಂಬಂಧಿಕರ ಮನೆಗೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಅಗರ ಕ್ರಾಸ್ ಬಳಿಯ ರಸ್ತೆ ಉಬ್ಬು ಗಮನಿಸದೆ ಕಾರು ನುಗ್ಗಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಎಗರಿ ಮುಂದೆ ಚಲಿಸುತ್ತಿದ್ದ ಸಿಮೆಂಟ್ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು,ಅವಘಡದಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟದ್ದು, ಮತ್ತೊಬ್ಬ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಹಾಗೂ ಇನ್ನೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಗಂಭೀರ ಗಾಯಗೊಂಡ ರಾಜ್‌ನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಗ್ಗಲೀಪುರ ಠಾಣೆಯ ಇನ್‌ಸ್ಪೆಕ್ಟರ್ ನಂಜೇಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹಗಳನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.