ತಿಪ್ಪಸಂದ್ರ ಹೋಬಳಿಯ ಯಲ್ಲಾಪುರ ಗ್ರಾಮದಲ್ಲಿ ಶ್ರೀಗಂಧದ ಮರಗಳ ಕದ್ದ ಆರೋಪಿಗಳನ್ನು ಕುದೂರು ಪೊಲೀಸರು ಬಂಧಿಸಿರುವುದು. ಪಿಎಸ್ಐಗಳಾದ ಸರ್ದಾರ್ ಸಾಬ್, ತಿಪ್ಪಯ್ಯ ಹಾಗೂ ಸಿಬ್ಬಂದಿ ಸೂರ್ಯಕುಮಾರ್, ಶಿವರಾಜು, ದರ್ಶನ್, ಲವಕುಮಾರ್ ಹಾಗೂ ಇತರರು ಇದ್ದರು.
ಕುದೂರು: ತಿಪ್ಪಸಂದ್ರ ಹೋಬಳಿಯ ಯಲ್ಲಾಪುರ ಗ್ರಾಮದಲ್ಲಿ ಶ್ರೀಗಂಧದ ಮರಗಳನ್ನು ಕದ್ದಿದ್ದ ಮೂವರನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಹೊಸಹಳ್ಳಿ ತೀರ್ಥ ಕುಮಾರ್(32), ತಿಪಟೂರು ತಾಲೂಕಿನ ಬಿದರಗುಡಿ ಕಾವಲು ಗ್ರಾಮದ ಮೂರ್ತಿ(50), ಅಭಿಷೇಕ್ (22) ಬಂಧಿತರು.
ಯಲ್ಲಾಪುರ ಗ್ರಾಮದ ಜಯರಾಮೇಗೌಡ ಅವರ ಜಮೀನಿನಲ್ಲಿನ 14 ವರ್ಷದ ಶ್ರೀಗಂಧದ ಮರಗಳನ್ನು ಖದೀಮರು ಜ.11ರಂದು ಬುಡ ಸಮೇತ ಕಟಾವು ಮಾಡಿ ಕಳ್ಳತನ ಮಾಡಿದ್ದರು. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಜಯರಾಮೇಗೌಡ ಅವರು ದೂರು ದಾಖಲಿಸಿದ್ದರು.
ಕುದೂರು ಪೊಲೀಸ್ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಪಿಎಸ್ಐಗಳಾದ ಸರ್ದಾರ್ ಸಾಬ್, ತಿಪ್ಪಯ್ಯ, ಸಿಬ್ಬಂದಿ ಸೂರ್ಯಕುಮಾರ್, ಶಿವರಾಜು, ದರ್ಶನ್, ಲವಕುಮಾರ್, ಮಹಾದೇವ ಶೆಟ್ಟಿ, ಅಭಿಷೇಕ್, ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಮಹದೇವ್ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ, 12 ಕೆಜಿ ಶ್ರೀಗಂಧದ ತುಂಡುಗಳು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಹಾಗೂ ಮರ ಕತ್ತರಿಸುವ ಉಪಕರಣಗಳನ್ನು ವಶ ಪಡಿಸಿಕೊಂಡಿದೆ.