ಎಐಸಿಸಿ ಅಧ್ಯಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧಿಕರಣ ಮಾಡಿದ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಜಿಲ್ಲಾ ದಲಿತ ಪರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.  
ಬೆಂಗಳೂರು ದಕ್ಷಿಣ

ವೇದಿಕೆ ಶುದ್ಧಿಕರಣ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ರಾಮನಗರ

ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಅವರು ತೆರಳಿದ ಬಳಿಕ ಗಂಗಾಜಲ ಸಿಂಪಡಿಸಿ, ಹೋಮ ಹವನದ ಮೂಲಕ ಶುದ್ಧೀಕರಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಇದು ನಿಜವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಜಿಲ್ಲಾ ದಲಿತ ಪರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

ಖರ್ಗೆ ಅವರು ತೆರಳಿದ ನಂತರ ವೇದಿಕೆ ಶುದ್ಧೀಕರಣ ಮಾಡಿರುವುದು ನಿಜವೇ ಆಗಿದ್ದರೆ, ಇದು ಕೇವಲ ಒಬ್ಬ ದಲಿತ ನಾಯಕನಿಗೆ ಮಾಡಿದ ಅವಮಾನವಲ್ಲ, ದಲಿತ ಸಮುದಾಯದ ಆತ್ಮಗೌರವ, ಮಾನವ ಘನತೆ ಹಾಗೂ ಸಂವಿಧಾನದ ಸಮಾನತೆಯ ಆಶಯಕ್ಕೆ ಧಕ್ಕೆ ತರುವ ಜಾತಿ ಮನೋಭಾವದ ಗಂಭೀರ ಪ್ರಕರಣವಾಗಿದೆ.

ಆದ್ದರಿಂದ ಈ ವಿಷಯವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಈ ಕೃತ್ಯ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಮುಖಂಡರು ಆಗ್ರಹಿಸಿದರು.

ದಲಿತ ಮುಖಂಡರಾದ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಸ್ವಾಮಿ, ಹರೀಶ್ ಬಾಲು, ಗವಿಯಯ್ಯ, ಶಿವಶಂಕರ್, ವಿನಯ್, ಜಯ ರಾಜು, ಅಶೋಕ್, ಸಿದ್ದರಾಜು, ಶ್ರೀನಿವಾಸ್, ಬಸವರಾಜು, ಚಿಕ್ಕ ವೆಂಕಟಯ್ಯ, ಶೇಖರ್, ಯೋಗೇಶ್ ಇನ್ನಿತರರು ಇದ್ದರು.