ರಾಮನಗರದ ಹಳೇ ಬಸ್ನಿಲ್ದಾಣದಿಂದ ಬೆಂಗಳೂರು ಮೈಸೂರು ರಸ್ತೆಗೆ ಸಂಪರ್ಕಕಲ್ಪಿಸುವ ಕೋರ್ಟ್ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳು.
ರಾಮನಗರ: ನಗರದ ಹಳೇ ಬಸ್ ನಿಲ್ದಾಣದಿಂದ ಬೆಂಗಳೂರು&ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೋರ್ಟ್ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಪಾಲಿಗೆ ಸಂಕಷ್ಟದ ಹಾದಿಯಾಗಿ ಮಾರ್ಪಟ್ಟಿದೆ.
ಆಡಳಿತಾತ್ಮಕವಾಗಿ ಅತ್ಯಂತ ಒತ್ತಡದಿಂದ ಕೂಡಿರುವ ಈ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹಲವು ತಿಂಗಳುಗಳೇ ಕಳೆದಿದ್ದರೂ, ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತ್ಯ ಸಾವಿರಾರು ಜನರ ಸಂಚಾರ: ಈ ರಸ್ತೆಯಲ್ಲೆ ಶಿರಡಿ ಸಾಯಿ ಮಂದಿರ, ಲೋಕೋಪಯೋಗಿ ಇಲಾಖೆ ಕಚೇರಿ, ತಾಲೂಕು ಆಡಳಿತ ಸೌಧ, ಪ್ರಮುಖ ಮಾಲ್ಗಳು, ಆಸ್ಪತ್ರೆ ಹಾಗೂ ಹತ್ತಾರು ಸರ್ಕಾರಿ ಕಚೇರಿಗಳಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಾರೆ. ರಸ್ತೆಯ ಮಧ್ಯಭಾಗದಲ್ಲೆ ಬಿದ್ದಿರುವ ಗುಂಡಿಗಳನ್ನು ಸಕಾಲದಲ್ಲಿ ಮುಚ್ಚದ ಕಾರಣ, ವಾಹನಗಳ ನಿರಂತರ ಸಂಚಾರದಿಂದಾಗಿ ದಿನೇ ದಿನೆ ಇವು ಮತ್ತಷ್ಟು ದೊಡ್ಡದಾಗುತ್ತಿವೆ. ಕನಿಷ್ಠ ಡಾಂಬರು ಹಾಕಿಯಾದರೂ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಸೌಜನ್ಯವನ್ನು ನಗರಸಭೆ ತೋರಿಲ್ಲ.
ಅಪಘಾತದ ಭೀತಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ತೆರಳುವ ವರ್ತಕರು ಮಧ್ಯರಾತ್ರಿಯಿಂದಲೇ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಕತ್ತಲಲ್ಲಿ ಗುಂಡಿಗಳು ಕಾಣದೆ ವಾಹನಗಳು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ. ಇನ್ನು ಹಗಲಿನಲ್ಲಿ ದ್ವಿಚಕ್ರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಹಠಾತ್ತನೆ ಬ್ರೇಕ್ ಹಾಕುವುದರಿಂದ, ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ಇದರಿಂದಾಗಿ ಸರಣಿ ಅಪಘಾತಗಳೂ ಸಂಭವಿಸುತ್ತಿವೆ.
ಮಳೆಗಾಲ ಆರಂಭವಾಗಿದ್ದು, ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾಗುತ್ತಿವೆ. ಇದರಿಂದಾಗಿ ಗುಂಡಿಯ ಆಳ ತಿಳಿಯದೆ ಬೈಕ್ ಸವಾರರು ಬೀಳುತ್ತಾರೆ. ಇದರೊಂದಿಗೆ, ಇದೇ ರಸ್ತೆಯಲ್ಲಿ ಇತ್ತೀಚೆಗೆ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲಾಗಿತ್ತು. ಆದರೆ ಪೈಪ್ ಹಾಕಿದ ನಂತರ ರಸ್ತೆಯನ್ನು ವೈಾನಿಕವಾಗಿ ಸಮತಟ್ಟು ಮಾಡದೆ ಹಾಗೇ ಬಿಟ್ಟಿರುವುದರಿಂದ ಇಡೀ ರಸ್ತೆ ಹಳ್ಳದಿಣ್ಣೆಯಾಗಿ ಮಾರ್ಪಟ್ಟಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಮಳೆಗಾಲದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಲು ತಣವೇ ಕೋರ್ಟ್ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರವಾಗಿ ಆಗ್ರಹಿಸಿದ್ದಾರೆ.