ಮಾಗಡಿ ತಾಲೂಕು ಹೇಳಿಗೇನಹಳ್ಳಿಯಲ್ಲು ಚರಂಡಿಯಲ್ಲಿ ಹೂಳು ತುಂಬಿರುವುದು.
ಮಾಗಡಿ: ಆಗಲಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇಳಿಗೇನಹಳ್ಳಿಯಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಚರಂಡಿ ನೀರು ಸರಾಗವಾಗಿ ಹರಿಯದೆ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಚರಂಡಿಯಲ್ಲಿ ಮಣ್ಣು ಮತ್ತು ಕಸಕಡ್ಡಿ ತುಂಬಿ ಹೋಗಿದ್ದರೂ ಸಹ, ಅದರ ತೆರವಿಗೆ ಗ್ರಾಪಂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಹೇಳಿಗೆಹಳ್ಳಿಯ ಪ್ರಮುಖ ರಸ್ತೆಗಳ ಬದಿಯ ಚರಂಡಿಗಳಲ್ಲಿ ಸಂಪೂರ್ಣವಾಗಿ ಹೂಳು ತುಂಬಿರುವುದರಿಂದ ಕೊಳಚೆ ನೀರು ಸರಾಗವಾಗಿ ಮುಂದಕ್ಕೆ ಹೋಗಲಾಗದೆ ಒಂದೇ ಕಡೆ ನಿಂತು, ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಪರಿಣಾಮ ಚರಂಡಿಯಿಂದ ಬರುವ ಗಬ್ಬು ವಾಸನೆಯಿಂದ ಸ್ಥಳಿಯ ನಿವಾಸಿಗಳು ಮತ್ತು ಹಾದಿಹೋಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ ಈ ಕಲುಷಿತ ವಾತಾವರಣದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದು, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಚರಂಡಿಯ ಹೂಳು ತೆರವು ಮಾಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಸ್ಥಳಿಯರು ಆಗಲಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಹ, ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಪಂಚಾಯಿತಿಯ ಈ ಮೊಂಡುತನ ಹಾಗೂ ಬೇಜವಾಬ್ದಾರಿತನದಿಂದ ಇಡೀ ಹಳ್ಳಿಯೇ ಕಾಯಿಲೆಗಳ ತಾಣವಾಗುವ ಭೀತಿ ಎದುರಾಗಿದೆ. ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಅಥವಾ ಕಾರ್ಮಿಕರ ಮೂಲಕ ಚರಂಡಿ ಹೂಳನ್ನು ತೆರವುಗೊಳಿಸಬೇಕು. ಕಲುಷಿತ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಮಾಡಿಕೊಡಬೇಕು. ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ ಸಾಂಕ್ರಾಮಿಕ ರೋಗಗಳ ಭೀತಿಯಿಂದ ಮುಕ್ತಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹೇಳಿಗೇನಹಳ್ಳಿಯ ಜನರ ಆರೋಗ್ಯದ ದೃಷ್ಟಿಯಿಂದ ಆಗಲಕೋಟೆ ಗ್ರಾಪಂ ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
"
ಹೇಳಿಗೇನಹಳ್ಳಿಯಲ್ಲಿ ಚರಂಡಿಯಲ್ಲಿ ಹೂಳು ತುಂಬಿರುವ ಬಗ್ಗೆ ನಮಗೆ ಯಾರು ದೂರು ನೀಡಿಲ್ಲ. ಆದರೂ ಶ್ರೀವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
— > ಪ್ರಭುಮಹಲಿಂಗಯ್ಯ ಪಿಡಿಒ