ಪ್ರಮುಖ ಮುಖ್ಯಾಂಶಗಳು
ರಾಮನಗರ
ಮಳೆ ಪ್ರಮಾಣವನ್ನು ನಿಖರವಾಗಿ ತಿಳಿಸುವ ಉದ್ದೇಶದಿಂದ ಅಳವಡಿಸಲಾಗಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳು ನಿರ್ವಹಣೆ ಕೊರತೆಯಿಂದಾಗಿ ಕೆಟ್ಟು ನಿಂತಿದ್ದು, ಮಳೆ ಕೊರತೆ ಉಂಟಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ರೈತರಿಗೆ ಸಾಕಷ್ಟು ತೊಂದರೆ ಆಗಲಿದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯ ಲೆಕ್ಕಾಚಾರದಲ್ಲಿ ಮಳೆ ಮಾಪನ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಟೆಲಿಮೆಟ್ರಿಕ್ ಮಳೆ ಮಾಪಕ ಯಂತ್ರಗಳನ್ನು ಅಳವಡಿಸಲಾಗಿದೆ. ಇಲ್ಲಿ ಲ‘್ಯವಾಗುವ ದತ್ತಾಂಶವೇ ಆಯಾ ಭಾಗದ ಮಳೆಯ ಅಳತೆಗೋಲು. ಆದರೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಡಿಯಲ್ಲಿಯೇ ಈ ಮಳೆ ಮಾನಪ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿವೆ.
ಜಿಲ್ಲೆಯಲ್ಲಿ ಕೆಟ್ಟು ನಿಂತಿವೆ: ಜಿಲ್ಲೆಯಲ್ಲಿ ಒಟ್ಟು 54 ಟೆಲಿಮೆಟ್ರಿಕ್ ಮಳೆ ಮಾಪನ ಯಂತ್ರಗಳು ಕೆಟ್ಟು ನಿಂತಿವೆ. ಸೋಲಾರ್ ಬ್ಯಾಟರಿ, ನೆಟ್ ವರ್ಕ್ ವ್ಯವಸ್ಥೆಯನ್ನು ಹೊಂದಿರುವ ಸ್ವಯಂಚಾಲಿತ ಯಂತ್ರಗಳು ಇವಾಗಿದ್ದು, ಪ್ರತಿ ದಿನ ಮಳೆ ಮಾಹಿತಿಯನ್ನು ಕೆಎಸ್‌ಎನ್‌ಡಿಎಂಸಿಗೆ ರವಾನಿಸುತ್ತವೆ. ಲಭ್ಯ ಮಾಹಿತಿ ಪ್ರಕಾರ ಬ್ಯಾಟರಿ ಸಾಮರ್ಥ್ಯ ಕ್ಷೀಣಿಸಿರುವುದು, ಸೆನ್ಸಾರ್ ದೋಷ, ಮತ್ತು ನೆಟ್‌ವರ್ಕ್ ಸಮಸ್ಯೆ, ನಿರ್ವಹಣೆ ಕೊರತೆ ಸೇರಿ ವಿವಿಧ ಕಾರಣಗಾಳಿಗಾಗಿ ಇವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 136 ಟೆಲಿಮೆಟ್ರಿಕ್ ಮಳೆ ಮಾಪಕ ಕೇಂದ್ರಗಳಿದ್ದು, ಇವುಗಳಲ್ಲಿ 54 ಕರ್ತವ್ಯ ನಿರ್ವಹಿಸುತ್ತಿಲ್ಲ.
ರೈತರಿಗೇನು ಸಮಸ್ಯೆ?
ಮಳೆಯ ಮೇಲೆಯೇ ರೈತರು ಬದುಕು ಅವಲಂಬಿಸಿದೆ. ಸರ್ಕಾರವಾಗಲಿ, ಬೆಳೆ ವಿಮೆ ಕಂಪನಿಗಳಾಗಲಿ ಮಳೆ ದತ್ತಾಂಶದ ಆಧಾರದ ಮೇಲೆಯೇ ರೈತರಿಗೆ ನೀಡಬಹುದಾದ ಪರಿಹಾರಗಳ ಬಗ್ಗೆ ನಿರ್ಧಾರ ಮಾಡುತ್ತವೆ. ಮಳೆ ಮಾಪನ ಕೇಂದ್ರಗಳು ಕೆಟ್ಟು ನಿಂತ ಸಂದರ್ಭದಲ್ಲಿ ಮಳೆ ಕೊರತೆಯಾದಾಗ ಅಥವಾ ಅತಿವೃಷ್ಟಿಯಾದಾಗ ಮಾಪನ ಕೇಂದ್ರಗಳು ಸರಿಯಾದ ದತ್ತಾಂಶ ದಾಖಲಿಸದಿದ್ದರೆ, ವಿಮಾ ಕಂಪನಿಗಳು ರೈತರ ಪರಿಹಾರ ಅರ್ಜಿಗಳನ್ನು ತಿರಸ್ಕರಿಸುತ್ತವೆ. ಸರ್ಕಾರ ತಾಲೂಕುಗಳನ್ನು ಬರಪೀಡಿತ ಅಥವಾ ಪ್ರವಾಹ ಪೀಡಿತ ಎಂದು ಘೋಷಿಸಲು ವೈಜ್ಞಾನಿಕ ದತ್ತಾಂಶದ ಅಗತ್ಯವಿರುತ್ತದೆ. ಮಾಪನ ಕೇಂದ್ರಗಳು ಕೈಕೊಟ್ಟಾಗ ಸರಿಯಾದ ನಷ್ಟದ ಅಂದಾಜು ಸಿಗದೆ ಸರ್ಕಾರಕ್ಕೂ ನಿರ್ಧಾರ ಕೈಗೊಳ್ಳಲು ತೊಡಕಾಗುತ್ತದೆ.
ಸಭೆಯಲ್ಲಿಯೂ ಪ್ರತಿಧ್ವನಿ
ಇತ್ತೀಚಿಗೆ ಸಚಿವ ಎಚ್.ಸಿ.ಬಾಲಕೃಷ್ಣ ಬರ ಅಧ್ಯಯನ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ವೇಳೆ ಮಳೆ ಮಾಪನ ಕೇಂದ್ರಗಳು ಕೆಟ್ಟು ನಿಂತಿರುವ ವಿಚಾರ ಪ್ರತಿಧ್ವನಿಸಿತು. ಈ ವೇಳೆ ಕೂಡಲೇ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಕೆಟ್ಟು ನಿಂತಿರುವ ಕೇಂದ್ರಗಳನ್ನು ದುರಸ್ಥಿ ಮಾಡುವ ಜತೆಗೆ, ಪ್ರತಿ ವರ್ಷ ಜನವರಿಯಲ್ಲಿ ಇವುಗಳ ನಿರ್ವಹಣೆ ಮಾಡುವಂತೆ ಸೂಚನೆ ನೀಡುವಂತೆಯೂ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು. ಆದರೆ, ಇದು ಕೆಎಸ್‌ಎನ್‌ಡಿಎಂಸಿ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್ ಮಾಹಿತಿ ನೀಡಿದರು.
ರಾಜ್ಯದ ಸಮಸ್ಯೆ
ಬೆಂಗಳೂರು ದಕ್ಷಿಣ ಜಿಲ್ಲೆಯಂತಹ ಚಿಕ್ಕ ಜಿಲ್ಲೆಯಲ್ಲಿಯೇ 54 ಯಂತ್ರಗಳು ಕೆಟ್ಟು ಹೋಗಿವೆ. ಆದರೆ ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆ ಅಲ್ಲ, ಇಡೀ ರಾಜ್ಯದ ಸಮಸ್ಯೆ. ಎಲ್ಲ ಜಿಲ್ಲೆಗಳಲ್ಲಿ ವಾರ್ಷಿಕ ನಿರ್ವಹಣೆ ಗುತ್ತಿಗೆ ಒಳಪಡದ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳು ಬಹುತೇಕ ಕೆಟ್ಟು ನಿಂತಿವೆ ಎನ್ನುವುದು ಗಮನಕ್ಕೆ ಬಂದಿದೆ. ಮಳೆ ಪ್ರಮಾಣವನ್ನು ತಿಳಿಯುವ ಪ್ರಮುಖ ಅಳತೆಗೋಲಾದ ಇವುಗಳನ್ನು ನಿರ್ವಹಣೆ ಮಾಡಬೇಕಾದ ಕೆಎಸ್‌ಎನ್‌ಡಿಎಂಸಿ ಏಕೆ ನಿರ್ಲಕ್ಷೃ ವಹಿಸಿದೆ ಎನ್ನುವುದು ಈಗ ದೊಡ್ಡ ಪ್ರಶ್ನೆಯಾಗಿ ಕಾಡಿದೆ.
ಕೂಡಲೇ ದುರಸ್ಥಿ ಮಾಡಿ
ಕೆಲವೆಡೆ ಅತಿ ವೃಷ್ಟಿಯಾಗಿದ್ದರೆ, ಕೆಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದ‘ರ್ದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೂಡಲೇ ಮಳೆ ಮಾಪನ ಕೇಂದ್ರಗಳ ದುರಸ್ಥಿ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಮಾಹಿತಿಯನ್ನು ಕಂದಾಯ ಇಲಾಖೆಯಿಂದ ಪಡೆದು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರಿಪಡಿಸುವ ಕೆಲಸ ಮಾಡಬೇಕಿದೆ.
ಹವಾಮಾನ ಕೇಂದ್ರಗಳೂ ಕೆಟ್ಟಿವೆ
ಜಿಲ್ಲೆಯಲ್ಲಿ ಮಳೆ ಮಾಪನ ಕೇಂದ್ರಗಳು ಮಾತ್ರವಲ್ಲ, ಟೆಲಿಮೆಟ್ರಿಕ್ ಹವಾಮಾನ ಕೇಂದ್ರಗಳು ಕೆಟ್ಟು ನಿಂತಿವೆ. ಜಿಲ್ಲೆಯಲ್ಲಿ ಒಟ್ಟು 21 ಹವಾಮಾನ ಕೇಂದ್ರಗಳಿದ್ದು, ಇವುಗಳಲ್ಲಿ ಮೂರು ಕೇಂದ್ರಗಳನ್ನು ಕೆಟ್ಟಿದ್ದು, ಇವುಗಳನ್ನು ಕೂಡಲೇ ಸರಿಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.
ಮಳೆ ಮಾಪನ ಕೇಂದ್ರಗಳು ರೈತರಿಗೆ ಅತಿ ಅಗತ್ಯವಾಗಿಬೇಕು. ಈ ಹಿನ್ನೆಲೆಯಲ್ಲಿ ಕೂಡಲೇ ಕೆಟ್ಟಿರುವ ಕೇಂದ್ರಗಳನ್ನು ಸರಿಪಡಿಸಬೇಕು. ಪ್ರತಿ ವರ್ಷ ಜನವರಿಯಲ್ಲಿಯೇ ಇವುಗಳ ನಿರ್ವಹಣೆ ಆಗಬೇಕು ಎಂದು ಸಂಬಂಧಪಟ್ಟ ಸಚಿವರೊಟ್ಟಿಗೆ ಮಾತನಾಡುತ್ತೆ. ಇಲ್ಲವಾದರೆ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಎಚ್.ಸಿ.ಬಾಲಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ
----------------------
ತಾಲೂಕುವಾರು ವಿವರ
ತಾಲೂಕು
ಚನ್ನಪಟ್ಟಣ
ಹಾರೋಹಳ್ಳಿ
ಕನಕಪುರ
ಮಾಗಡಿ
ರಾಮನಗರ
ಒಟ್ಟು